ಬುಧವಾರ, ಜನವರಿ 26, 2022
26 °C
ಹತ್ಯೆ ಖಂಡಿಸಿ ಪಿಡಿಪಿ ಕಾರ್ಯಕರ್ತರ ರ‍್ಯಾಲಿ

ಮೂವರು ನಾಗರಿಕರ ಹತ್ಯೆ: ಲೆಫ್ಟಿನೆಂಟ್‌ ಗವರ್ನರ್‌ ಕ್ಷಮೆಯಾಚಿಸಲಿ; ಮೆಹಬೂಬ ಮುಫ್ತಿ

ಸಿದ್ದರಾಜು ಎಂ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಇಲ್ಲಿನ ಹೊರವಲಯದ ಹೈದರ್‌ ಪೋರಾದಲ್ಲಿ ಭದ್ರತಾಪಡೆಗಳ ಕಾರ್ಯಾಚರಣೆ ವೇಳೆ ಮೂವರು ನಾಗರಿಕರು ಹತ್ಯೆಯಾಗಿರುವ ಘಟನೆಗೆ ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಕ್ಷಮೆ ಯಾಚಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಒತ್ತಾಯಿಸಿದರು.

ನಾಗರಿಕರ ಹತ್ಯೆ ಪ್ರಕರಣವನ್ನು ಖಂಡಿಸಿ ಭಾನುವಾರ ಗುಪ್ಕಾರ್‌ ರಸ್ತೆಯಿಂದ ರಾಜಭವನದವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ರ‍್ಯಾಲಿಯಲ್ಲಿ ಭಾಗವಹಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ಅವರು ಜಮ್ಮು ಕಾಶ್ಮೀರದ ಆಡಳಿತದ ಮುಖ್ಯಸ್ಥರಾಗಿರುವುದರಿಂದ ಸಂತ್ರಸ್ತ ಕುಟುಂಬಗಳು ಹಾಗೂ ಕಾಶ್ಮೀರದ ಜನರ ಕ್ಷಮೆಯಾಚಿಸಬೇಕು. ಘಟನೆಯನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಿ, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ನ.15ರಂದು ದಾಳಿ ನಡೆಸಲಾದ ಕಟ್ಟಡದ ಕಚೇರಿಯೊಂದರ ಸಹಾಯಕನಾಗಿದ್ದ ರಂಬಾನ್‌ ಜಿಲ್ಲೆಯ ಅಮಿರ್‌ ಮಗ್ರೆ ಎಂಬ ಯುವಕ ಮೃತಪಟ್ಟಿದ್ದು, ಆ ಯುವಕನ ಶವವನ್ನು ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರಿಗೆ ನೀಡಿಲ್ಲ. ಹಾಗಾಗಿ ಆ ಯುವಕನ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಬೇಕು. ಸರ್ಕಾರದಿಂದ ಸೂಕ್ತ ಪರಿಹಾರವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಉಗ್ರ ಎಂದು ಹಣೆಪಟ್ಟಿ ಕಟ್ಟಿರುವ ನಾಲ್ಕನೇ ವ್ಯಕ್ತಿಯ ಮೃತದೇಹವನ್ನು ನಾವ್ಯಾರೂ ನೋಡಿಲ್ಲ. ಹಾಗಾಗಿ ಪೊಲೀಸರು ಹೇಳುವಂತೆ ಸತ್ತ ವ್ಯಕ್ತಿಯು ನಿಜವಾಗಿಯೂ ಉಗ್ರ ಎನ್ನುವ ಬಗ್ಗೆ ಅನುಮಾನವಿದೆ. ಸುಖಾಸುಮ್ಮನೆ ಮೂವರು ನಾಗರಿಕರನ್ನು ಕೊಂದಿರುವ ಸಾಧ್ಯತೆಯಿದ್ದು, ಇಡೀ ಘಟನೆಯು ದೊಡ್ಡ ಸಂದೇಹ ಮೂಡಿಸಿದೆ ಎಂದು ಹೇಳಿದರು.

***

ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ನಂತರ ಇಲ್ಲಿ ನಮಗೆ ಯಾವುದೇ ಹಕ್ಕುಗಳಿಲ್ಲ.ದೇಶ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಕಾರ್ಯಸೂಚಿಯಂತೆ ಆಡಳಿತ ನಡೆಯುತ್ತಿದೆ. ಮುಸ್ಲಿಂ ಬಾಹುಳ್ಯದ ಕಾಶ್ಮೀರ ಕಣಿವೆಯಲ್ಲಿ ಇಲ್ಲಿನ ನಾಗರಿಕರ ಮೇಲೆ ದಬ್ಬಾಳಿಕೆ ನಡೆಸಲಾಗುತ್ತಿದೆ. ಇಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಕೊಂದಿದ್ದಾರೆ. ಯಾರೊಬ್ಬರಿಗೂ ಮಾತನಾಡುವ, ಪ್ರತಿಭಟಿಸುವ ಹಕ್ಕಿಲ್ಲದಂತಾಗಿದೆ.

–ಮೆಹಬೂಬ ಮುಫ್ತಿ, ಪಿಡಿಪಿ ಅಧ್ಯಕ್ಷೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು