ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಶಿಕ್ಷಣ, ತರಬೇತಿ ಉನ್ನತೀಕರಣ ಅಗತ್ಯ: ವಿ.ಆರ್. ಚೌಧರಿ

ಭಾರತೀಯ ವಾಯುಪಡೆ, ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ ನಡುವೆ ಶೈಕ್ಷಣಿಕ, ಸಂಶೋಧನಾ ಒಡಂಬಡಿಕೆ
Last Updated 10 ಆಗಸ್ಟ್ 2022, 15:33 IST
ಅಕ್ಷರ ಗಾತ್ರ

ಗಾಂಧಿನಗರ:ದೇಶದ ಪ್ರಸ್ತುತ ಮತ್ತು ಭವಿಷ್ಯದ ಭದ್ರತಾಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಸೇನಾಅಧಿಕಾರಿಗಳ ಶಿಕ್ಷಣ ಮತ್ತು ತರಬೇತಿ ಮಾದರಿಯ ಉನ್ನತೀಕರಣ ಮತ್ತು ನವೀಕರಣದ ಅಗತ್ಯವಿದೆ ಎಂದು ಭಾರತೀಯ ವಾಯುಪಡೆ (ಐಎಎಫ್‌) ಮುಖ್ಯಸ್ಥ ವಿ.ಆರ್. ಚೌಧರಿ ಬುಧವಾರ ಹೇಳಿದ್ದಾರೆ.

ಐಎಎಫ್‌ ಮತ್ತು ರಾಷ್ಟ್ರೀಯ ರಕ್ಷಾ ವಿಶ್ವವಿದ್ಯಾಲಯ (ಆರ್‌ಆರ್‌ಯು) ನಡುವಿನ ಶೈಕ್ಷಣಿಕ ಮತ್ತು ಸಂಶೋಧನೆಗೆ ಸಂಬಂಧಿಸಿದ ಒಡಂಬಡಿಕೆಗೆ (ಎಂಒಯು) ಸಹಿ ಹಾಕಿ ಮಾತನಾಡಿದ ಅವರು, ‘ಭವಿಷ್ಯದ ಯುದ್ಧಕ್ಕೆ ಮಿಲಿಟರಿ ಅಧಿಕಾರಿಗಳನ್ನುತಂತ್ರಜ್ಞಾನ, ತರಬೇತಿ ಮತ್ತು ಶಿಕ್ಷಣದಂತಹ ಪ್ರಮುಖ ಆಯಾಮಗಳ ಮೂಲಕ ಸಜ್ಜುಗೊಳಿಸಬೇಕಿದೆ. ಇದಕ್ಕಾಗಿ ನಮ್ಮ ಶಿಕ್ಷಣ ಮತ್ತು ತರಬೇತಿ ಮಾದರಿಯನ್ನು ಉನ್ನತೀಕರಿಸುವ ಮತ್ತು ನವೀಕರಿಸುವ ಅವಶ್ಯಕತೆ ಇದೆ’ ಎಂದು ಹೇಳಿದರು.

‘ಭದ್ರತೆಯ ಬೆದರಿಕೆಗಳ ಸ್ವರೂಪದಲ್ಲಿ ರೂಪಾಂತರವಾಗಿದೆ. ಮುಂದೆ ಹೊಸ ಮಾರ್ಗಗಳಲ್ಲಿ ಕಾರ್ಯತಂತ್ರದ ಗುರಿಗಳನ್ನು ಬೆನ್ನಟ್ಟಬೇಕಾಗಲಿದೆ. ರಾಷ್ಟ್ರೀಯ ಭದ್ರತೆಯಲ್ಲಿ ಸೇನೆ, ಶಿಕ್ಷಣ ಮತ್ತು ಕೈಗಾರಿಕೆ ಈ ಮೂರೂ ನಿರ್ಣಾಯಕ ಆಧಾರಸ್ತಂಭಗಳು. ಇವುಗಳಿಗೆ ಸಂಬಂಧಿಸಿ ಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಉತ್ತೇಜಿತ ತರಬೇತಿ ಕಾರ್ಯಕ್ರಮಗಳು ಮತ್ತು ಸಂಶೋಧನಾ ಕ್ರಮಗಳನ್ನು ಬಲಪಡಿಸಲು ನಾವು ಮಾರ್ಗಸೂಚಿಗಳನ್ನು ರೂಪಿಸಬೇಕಿದೆ’ ಎಂದು ಅವರು ಹೇಳಿದರು.

ರಕ್ಷಣಾ ಮತ್ತು ವ್ಯೂಹಾತ್ಮಕ ಅಧ್ಯಯನಗಳು, ಕೃತಕ ಬುದ್ಧಿಮತ್ತೆ ಮತ್ತು ಸೈಬರ್ ಭದ್ರತೆ, ಅನ್ವಯಿಕ ವಿಜ್ಞಾನ, ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಹಾಗೂ ವಿದೇಶಿ ಭಾಷೆಗಳಲ್ಲಿ ವಿವಿಧ ಕೋರ್ಸ್‌ಗಳನ್ನು ಕಲಿಯಲು ಐಎಎಫ್ ಸಿಬ್ಬಂದಿಗೆ ಈ ಒಡಂಬಡಿಕೆಯಿಂದ ಅನುಕೂಲವಾಗಲಿದೆ.

ರಾಷ್ಟ್ರೀಯ ಮತ್ತು ಆಂತರಿಕ ಭದ್ರತಾ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸಲಿದೆ. ಜತೆಗೆ ಸಮಕಾಲೀನವಿವಿಧ ವಿಷಯಗಳಲ್ಲಿ ಭಾರತೀಯ ವಾಯುಪಡೆಯ ಸಿಬ್ಬಂದಿಯನ್ನು ಶೈಕ್ಷಣಿಕ ಅನ್ವೇಷಣೆಯಲ್ಲಿ ತೊಡಗಿಸಲಿದೆ. ಐಎಎಫ್ ತರಬೇತಿ ಸಂಸ್ಥೆಗೆಈ ವಿಶ್ವವಿದ್ಯಾಲಯದ ಮಾನ್ಯತೆಯೂ ದೊರೆಯಲಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT