ಗುರುವಾರ , ಸೆಪ್ಟೆಂಬರ್ 23, 2021
27 °C

ನ್ಯಾಯಾಂಗ ನಿಂದನೆ: ನಾಲ್ವರು ಐಎಎಸ್‌ ಅಧಿಕಾರಿಗಳಿಗೆ ಸಜೆ

ಪಿಟಿಐ Updated:

ಅಕ್ಷರ ಗಾತ್ರ : | |

ಅಮರಾವತಿ: ನ್ಯಾಯಾಂಗ ನಿಂದನೆ ಆರೋಪದಡಿ ನಾಲ್ವರು ಐಎಎಸ್‌ ಅಧಿಕಾರಿಗಳು ಮತ್ತು ಒಬ್ಬರು ನಿವೃತ್ತ ಅಧಿಕಾರಿಗೆ ಆಂಧ್ರ ಪ್ರದೇಶ ಹೈಕೋರ್ಟ್‌ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಈ ಪ್ರಕರಣದಲ್ಲಿ ಮುಖ್ಯ ಕಾರ್ಯದರ್ಶಿ ಆದಿತ್ಯನಾಥ್‌ ದಾಸ್‌ ಸೇರಿ ಇತರೆ ಮೂವರು ಐಎಎಸ್‌ ಅಧಿಕಾರಿಗಳ ವಿರುದ್ಧದ ಆರೋಪವನ್ನು ನ್ಯಾಯಾಲಯ ಕೈಬಿಟ್ಟಿದೆ.

ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಂಶೀರ್ ಸಿಂಗ್ ರಾವತ್, ಮುಖ್ಯಮಂತ್ರಿಯವರ ಹೆಚ್ಚುವರಿ ಕಾರ್ಯದರ್ಶಿ ರೇವು ಮುತ್ಯಾಲ ರಾಜು, ನೆಲ್ಲೂರಿನ ಜಿಲ್ಲಾಧಿಕಾರಿ ಕೆ.ವಿ.ಎನ್. ಚಕ್ರಧರ ಬಾಬು ಮತ್ತು ನಿವೃತ್ತ ಜಿಲ್ಲಾಧಿಕಾರಿ ಎಂ.ವಿ. ಶೇಷಗಿರಿ ಬಾಬು ಅವರಿಗೆ ಹೈಕೋರ್ಟ್‌ ಶಿಕ್ಷೆ ವಿಧಿಸಿದೆ.

2017ರಲ್ಲಿ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿದ್ದ ನಿವೃತ್ತ ಐಎಎಸ್ ಅಧಿಕಾರಿ ಮನಮೋಹನ್ ಸಿಂಗ್ ಅವರನ್ನೂ ದೋಷಿ ಎಂದು ಕೋರ್ಟ್‌ ಪರಿಗಣಿಸಿದೆ. ನೆಲ್ಲೂರು ಜಿಲ್ಲೆಯ ರೈತ ಮಹಿಳೆ ತಲ್ಲಪಕ ಸಾವಿತ್ರಮ್ಮ ಅವರು ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯ ಮೇಲಿನ ಆದೇಶವನ್ನು ನ್ಯಾಯಮೂರ್ತಿ ಬತ್ತು ದೇವಾನಂದ್ ಅವರು ಗುರುವಾರ ಪ್ರಕಟಿಸಿದರು.

ರಾವತ್ ಮತ್ತು ಸಿಂಗ್ ಅವರಿಗೆ ಒಂದು ತಿಂಗಳು ಹಾಗೂ ಇತರರಿಗೆ ಎರಡು ವಾರಗಳ ಸಜೆಯನ್ನು ವಿಧಿಸಿ, ಎಲ್ಲರಿಗೂ ತಲಾ ₹ 1,000 ದಂಡವನ್ನು ನ್ಯಾಯಾಲಯ ವಿಧಿಸಿದೆ.

ಪ್ರಕರಣದ ವಿವರ: ತನ್ನ ಮೂರು ಎಕರೆ ಕೃಷಿ ಭೂಮಿಯನ್ನು ಕಂದಾಯ ಅಧಿಕಾರಿಗಳು ಯಾವುದೇ ಸೂಚನೆ ಅಥವಾ ಪರಿಹಾರ ಕೊಡದೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಸಂಸ್ಥೆಗೆ ಹಂಚಿಕೆ ಮಾಡಿದ್ದಾರೆ ಎಂದು ಸಾವಿತ್ರಮ್ಮ ಅವರು 2017ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. 2017ರ ಫೆಬ್ರುವರಿ 10ರಂದು ಹೈಕೋರ್ಟ್‌ ಅರ್ಜಿದಾರರಿಗೆ ಪರಿಹಾರ ನೀಡುವಂತೆ ಸೂಚಿಸಿ ತೀರ್ಪು ನೀಡಿತ್ತು. ಆದರೆ ಆದೇಶ ಅನುಷ್ಠಾನಗೊಳಿಸಲು ಅಧಿಕಾರಿಗಳು ವಿಫಲವಾದ್ದರಿಂದ ಸಾವಿತ್ರಮ್ಮ ಅವರು ಹೈಕೋರ್ಟ್‌ನಲ್ಲಿ 2018ರಲ್ಲಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು