ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಪಿಎಸ್‌ಸಿ ಜಿಹಾದ್ ಉತ್ತಮ ಅಭಿರುಚಿ ಹೊಂದಿಲ್ಲ: ‘ಸುಪ್ರೀಂ’ಗೆ ಕೇಂದ್ರ

Last Updated 19 ನವೆಂಬರ್ 2020, 21:08 IST
ಅಕ್ಷರ ಗಾತ್ರ

ನವದೆಹಲಿ: ‘ಸುದರ್ಶನ ಟಿ.ವಿ.ಯ ಯುಪಿಎಸ್‌ಸಿ ಜಿಹಾದ್ ಕಾರ್ಯಕ್ರಮವು ಸದಭಿರುಚಿಯಿಂದ ಕೂಡಿಲ್ಲ. ಕೇಬಲ್ ಟಿವಿ ಜಾಲ ನಿಯಂತ್ರಣ ಕಾಯ್ದೆಯ ಕಾರ್ಯಕ್ರಮ ಸಂಹಿತೆಗೆ ಅನುಗುಣವಾಗಿ ಪರಿಷ್ಕರಿಸಿ ಪ್ರಸಾರ ಮಾಡಬಹುದು’ ಎಂದು ಕೇಂದ್ರದ ವಾರ್ತಾ ಮತ್ತು ಪ್ರಸಾರ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ. ಈ ಪ್ರಮಾಣಪತ್ರಕ್ಕೆಪ್ರತಿಕ್ರಿಯೆ ಸಲ್ಲಿಸಲು ವಾದಿ ಮತ್ತು ಪ್ರತಿವಾದಿಗಳಿಗೆ ಎರಡು ವಾರಗಳ ಕಾಲಾವಕಾಶವನ್ನು ಸುಪ್ರೀಂ ಕೋರ್ಟ್‌ ನೀಡಿದೆ.

ನವೆಂಬರ್ 4ರಂದು ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿ ಸಚಿವಾಲಯವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿತ್ತು. ಇದನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್ ಪೀಠವು, ವಿಚಾರಣೆ
ಯನ್ನು ಎರಡು ವಾರ ಮುಂದೂಡಿತು.

‘ಈ ಕಾರ್ಯಕ್ರಮವು ಉತ್ತಮ ಅಭಿರುಚಿ ಹೊಂದಿಲ್ಲ. ಅಲ್ಲದೆ ಕೋಮುವಾದವನ್ನು ಉತ್ತೇಜಿಸುವ ಧ್ವನಿಯಲ್ಲಿದೆ.ಯುಪಿಎಸ್‌ಸಿ‌ ಆಯ್ಕೆ ಪ್ರಕ್ರಿಯೆ ಮತ್ತು ಪರೀಕ್ಷಾ ವ್ಯವಸ್ಥೆಯ ಬಗ್ಗೆ ಸಂಚಿಕೆ‌ಗಳಲ್ಲಿ ಬಳಸಿರುವ ಮಾತುಗಳು, ಒಂದು ಸಮುದಾಯವನ್ನು ತೋರಿಸಿ
ರುವ ರೀತಿ ಕಾರ್ಯಕ್ರಮ ಸಂಹಿತೆಯನ್ನು ಉಲ್ಲಂಘಿಸುತ್ತದೆ. ವಾಹಿನಿಯು ಇದನ್ನು ತಪ್ಪಿಸಬಹುದಿತ್ತು’ ಎಂದು ಸಚಿವಾಲಯವು ಹೇಳಿದೆ.

‘ಅಭಿವ್ಯಕ್ತಿ ಸ್ವಾತಂತ್ರ್ಯವು ಮೂಲಭೂತ ಹಕ್ಕು. ಆದರೆ, ಸುದರ್ಶನ ಟಿ.ವಿ.ಯಲ್ಲಿ ಪ್ರಸಾರ ವಾಗಿರುವ ಸಂಚಿಕೆ‌ಗಳಲ್ಲಿ ಇದ್ದ ವಾಕ್ಯಗಳು ಮತ್ತು ದೃಶ್ಯಗಳು ಕಾರ್ಯಕ್ರಮ ಸಂಹಿತೆ ಯನ್ನು ಉಲ್ಲಂಘಿಸಿವೆ. ಸಂಭಾಷಣೆ ಮತ್ತು ದೃಶ್ಯಗಳನ್ನು ಕಾರ್ಯಕ್ರಮ ಸಂಹಿತೆಗೆ ಅನುಗುಣವಾಗಿ ಮಾರ್ಪಾಡು ಮಾಡಬೇಕು. ಆನಂತರ ಕಾರ್ಯ ಕ್ರಮದ ಉಳಿದ ಸಂಚಿಕೆಗಳನ್ನು ಪ್ರಸಾರ ಮಾಡಬಹುದು’ ಎಂದು ಸಚಿವಾಲಯವು ತಿಳಿಸಿತ್ತು.

‘ಯುಪಿಎಸ್‌ಸಿ ಪರೀಕ್ಷೆಗಳನ್ನು ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ತರಬೇತಿಗೆ ವ್ಯವಸ್ಥೆ ಮಾಡುವ ಝಕಾತ್ ಫೌಂಡೇಷನ್‌ಗೆ ಉಗ್ರ ಸಂಘಟನೆಗಳ ನಂಟು ಇದೆ ಎಂದು ಕಾರ್ಯಕ್ರಮದಲ್ಲಿ ಆರೋಪಿಸಲಾಗಿದೆ. ಸೂಕ್ತವಾದ ತನಿಖೆಯ ಮೂಲಕ ಇದನ್ನು ಖಚಿತಪಡಿಸಿಕೊಳ್ಳಬೇಕಿದೆ. ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿದೆ’ ಎಂದು ಸಚಿವಾಲಯವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT