ಭಾನುವಾರ, ಏಪ್ರಿಲ್ 18, 2021
24 °C

ಮಿಥುನ್‌ ಚಕ್ರವರ್ತಿ ಸ್ಪರ್ಧಿಸಲು ಬಯಸಿದರೆ, ಕಣಕ್ಕಿಳಿಸುತ್ತೇವೆ: ಬಿಜೆಪಿ

ಏಜೆನ್ಸೀಸ್‌‌ Updated:

ಅಕ್ಷರ ಗಾತ್ರ : | |

ಸಿಲಿಗುರಿ (ಪಶ್ಚಿಮ ಬಂಗಾಳ): ನಟ ಮಿಥುನ್‌ ಚಕ್ರವರ್ತಿಯವರು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ. ಈ ಸಂಬಂಧ ಮಾತನಾಡಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್‌ ವಿಜಯವರ್ಗಿಯಾ ಅವರು, ಒಂದುವೇಳೆ ಅವರು (ಮಿಥುನ್‌ ಚಕ್ರವರ್ತಿ) ಸ್ಪರ್ಧಿಸಲು ಬುಯಸಿದರೆ ಕಣಕ್ಕಿಳಿಸುತ್ತೇವೆ ಎಂದು ಹೇಳಿದ್ದಾರೆ.

ʼನಾನು ಈ ಹಿಂದೆ ಮಿಥುನ್‌ ಚಕ್ರವರ್ತಿ ಅವರೊಂದಿಗೆ ಮಾತುಕತೆ ನಡೆಸಿದ್ದೇನೆ. ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಕರಿಸಿದ್ದರು. ಒಂದುವೇಳೆ ಅವರನ್ನು ಕಣಕ್ಕಿಳಿಸಲು ಪಕ್ಷ ನಿರ್ಧಸಿದರೆ, ಮಿಥುನ್‌ ಜೊತೆ ಮಾತನಾಡುತ್ತೇವೆ. ಅವರು ಕಣಕ್ಕಿಳಿಯಲು ಬಯಸಿದರೆ, ನಾವು ಅವರನ್ನು ಸ್ಪರ್ಧೆಗೆ ಸಿದ್ಧಗೊಳಿಸುತ್ತೇವೆʼ ಎಂದು ತಿಳಿಸಿದ್ದಾರೆ.

ಮಿಥುನ್‌ ಅವರು, ಇದೇ ತಿಂಗಳ 7ರಂದು ಕೋಲ್ಕತ್ತದ ಬ್ರಿಗೇಡ್‌ ಪರೇಡ್‌ ಮೈದಾನದಲ್ಲಿ ನಡೆದ ಬೃಹತ್‌ ರ‍್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದರು. ಅದೇ ವೇಳೆ ಮಾತನಾಡಿದ್ದ ಅವರು, ಪ್ರಧಾನಮಂತ್ರಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ತಮ್ಮ ಕನಸು ನನಸಾಗಿದೆ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ನಟ ಮಿಥುನ್ ಚಕ್ರವರ್ತಿ ಬಿಜೆಪಿ ಸೇರ್ಪಡೆ: ಪ್ರಧಾನಿ ಮೋದಿ ರ್‍ಯಾಲಿಯಲ್ಲಿ ಭಾಗಿ

ʼಬೃಹತ್‌ ಪ್ರಜಾಪ್ರಭುತ್ವ ರಾಷ್ಟ್ರದ ದೊಡ್ಡ ನಾಯಕ, ನಮ್ಮ ಪ್ರೀತಿಯ ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣ ಮಾಡಲಿರುವ ವೇದಿಕೆಯನ್ನು ಹಂಚಿಕೊಳ್ಳುತ್ತೇನೆಂದು ನಾನು ಊಹಿಸಿಯೂ ಇರಲಿಲ್ಲ. ಬಡವರು ಮತ್ತು ತುಳಿತಕ್ಕೊಳಗಾದವರಿಗಾಗಿ ಕೆಲಸ ಮಾಡಬೇಕು ಎನ್ನುವ ಕನಸಿತ್ತು. ಅದು ಈಗ ಪೂರ್ಣಗೊಂಡಿದೆʼ ಎಂದು ಹೇಳಿದ್ದರು.

ಬಿಜೆಪಿಯು ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ವರುಣ್‌ ಅವರನ್ನು ತಾರಾ ಪ್ರಚಾರಕನನ್ನಾಗಿ ನೇಮಿಸಿದೆ. ಅವರಿಗೆ ಕೇಂದ್ರ ಸರ್ಕಾರವು ವೈ+ ಭದ್ರತೆ ಒದಗಿಸಿದ್ದು, ಕೇಂದ್ರ ಕೈಗಾರಿಕೆ ಭದ್ರತೆ ಪಡೆ (ಸಿಐಎಸ್‌ಎಫ್‌) ಇದರ ಹೊಣೆ ಹೊತ್ತಿದೆ.

70 ವರ್ಷದ ಚಕ್ರವರ್ತಿ, ರಾಜ್ಯಸಭಾ ಸದಸ್ಯರಾಗಿ ಟಿಎಂಸಿ ಪಕ್ಷದಿಂದ ಆಯ್ಕೆಯಾಗಿದ್ದರು. ಆದರೆ 2016ರಲ್ಲಿ ಶಾರದಾ ಪೊಂಜಿ ಹಗರಣದಲ್ಲಿ ಹೆಸರು ಕೇಳಿಬಂದ ಬಳಿಕ ಅನಾರೋಗ್ಯದ ಕಾರಣದಿಂದ ರಾಜೀನಾಮೆ ನೀಡಿದ್ದರು.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯು ಮಾರ್ಚ್‌ 27ರಿಂದ ಆರಂಭವಾಗಲಿದ್ದು ಎಂಟು ಹಂತಗಳಲ್ಲಿ ನಡೆಯಲಿದೆ. ಏಪ್ರಿಲ್‌ 29ರಂದು ಅಂತಿಮ ಹಂತದ ಮತದಾನ ನಡೆಯಲಿದೆ. ಮತ ಎಣಿಕೆ ಪ್ರಕ್ರಿಯೆ ಮೇ 2ರಂದು ನಡೆಯಲಿದೆ. ಈ ಬಾರಿ ಟಿಎಂಸಿ, ಕಾಂಗ್ರೆಸ್ ನೇತೃತ್ವದ ಎಡರಂಗ ಹಾಗೂ ಬಿಜೆಪಿ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು