ಮಂಗಳವಾರ, ಜನವರಿ 31, 2023
19 °C
ಐಐಟಿ–ಎಂ ಸಂಶೋಧಕರಿಂದ ತೂತುಕುಡಿ ಕರಾವಳಿಯಲ್ಲಿ ಪ್ರಾಯೋಗಿಕ ಪರೀಕ್ಷೆ 

ಕಡಲ ಅಲೆಯಿಂದ ವಿದ್ಯುತ್‌ ಉತ್ಪಾದನೆ ಉಪಕರಣ ಅಭಿವೃದ್ಧಿ 

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ:  ಪ್ರತಿಷ್ಠಿತ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ- ಮದ್ರಾಸ್‌ (ಐಐಟಿ–ಎಂ) ಸಂಶೋಧಕರು ಸಮುದ್ರದ ಅಲೆಗಳಿಂದ ವಿದ್ಯುತ್ ಉತ್ಪಾದಿಸುವ ಉಪಕರಣ ಅಭಿವೃದ್ಧಿಪಡಿಸಿದ್ದು, ಅದನ್ನು ಪ್ರಾಯೋಗಿಕ ಪರೀಕ್ಷೆಗಾಗಿ ತೂತುಕುಡಿ ಕರಾವಳಿಯಲ್ಲಿ ನವೆಂಬರ್ ಎರಡನೇ ವಾರದಲ್ಲಿ ಅಳವಡಿಸಿದ್ದಾರೆ.

ಸಾಗರದ ಅಲೆಗಳನ್ನು ವಿದ್ಯುತ್‌ ಆಗಿ ಪರಿವರ್ತಿಸುವ ಉಪಕರಣಕ್ಕೆ ‘ಸಿಂಧುಜಾ-ಐ’ ಎಂಬ ಹೆಸರಿಡಲಾಗಿದೆ. ತಮಿಳುನಾಡಿನ ತೂತುಕುಡಿ ಕರಾವಳಿಯ ಸುಮಾರು 6 ಕೀ.ಮೀ. ದೂರದಲ್ಲಿ ಸಾಗರ 20 ಮೀಟರ್ ಆಳ ಹೊಂದಿರುವ ಸ್ಥಳದಲ್ಲಿ ‘ಸಿಂಧುಜಾ–ಐ’ ಉಪಕರಣವನ್ನು ಸಂಶೋಧಕರು ಪ್ರಾಯೋಗಿಕ ಪರೀಕ್ಷೆಗಾಗಿ ಅಳವಡಿಸಿದ್ದಾರೆ. ಮುಂದಿನ ಮೂರು ವರ್ಷಗಳಲ್ಲಿ ಸಾಗರ ಅಲೆಗಳಿಂದ ಒಂದು ಮೆಗಾವಾಟ್ ವಿದ್ಯುತ್‌ ಉತ್ಪಾದಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ಸಂಶೋಧಕರು ಹೊಂದಿದ್ದಾರೆ.

‌ಐಐಟಿ–ಎಂ ಪ್ರಾಧ್ಯಾಪಕ ಪ್ರೊ. ಅಬ್ದಸ್‌ ಸಮದ್‌ ಅವರ ನೇತೃತ್ವದ ಸಂಶೋಧಕರ ತಂಡವು ಈ ಉಪಕರಣ ಅಭಿವೃದ್ಧಿಪಡಿಸಲು ಒಂದು ದಶಕದಿಂದ ಶ್ರಮಿಸುತ್ತಿದೆ. ಈ ಯೋಜನೆಗೆ ಐಐಟಿ–ಎಂನ ‘ಇನ್ನೋವೇಟಿವ್ ರಿಸರ್ಚ್ ಪ್ರಾಜೆಕ್ಟ್ ’ ಡಿಎಸ್‌ಟಿ ನಿಧಿ- ಪ್ರಯಾಸ್‌ ಯೋಜನೆಯ ಅಡಿಯಲ್ಲಿ ಟಿಬಿಐ-ಕೆಐಇಟಿ, ಆಸ್ಟ್ರೇಲಿಯಾ ಸರ್ಕಾರದ  ವಿದೇಶಾಂಗ ವ್ಯವಹಾರ ಮತ್ತು ವ್ಯಾಪಾರ ಇಲಾಖೆ, ಆಸ್ಟ್ರೇಲಿಯಾ ಹಳೆಯ ವಿದ್ಯಾರ್ಥಿಗಳ ಅನುದಾನ ಯೋಜನೆ 2022 ಮೂಲಕ ಧನಸಹಾಯ ಲಭಿಸಿದೆ.

‘ದೇಶವು 7,500 ಕಿ.ಮೀ ಉದ್ದದ ಕರಾವಳಿ ಹೊಂದಿದೆ. 54 ಗಿಗಾ ವಾಟ್‌ ವಿದ್ಯುತ್‌ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದು ದೇಶದ ಶಕ್ತಿಯ ಅಗತ್ಯವನ್ನು ಗಣನೀಯ ಪ್ರಮಾಣದಲ್ಲಿ ಪೂರೈಸುತ್ತದೆ. ಇದು 2030ರ ವೇಳೆಗೆ ಹವಾಮಾನ ಬದಲಾವಣೆ ಸಂಬಂಧ ನವೀಕರಿಸಬಹುದಾದ ಇಂಧನ ಮೂಲದಿಂದ 500 ಗಿಗಾ ವಾಟ್‌ ವಿದ್ಯುತ್ ಉತ್ಪಾದಿಸುವ ಗುರಿಗಳನ್ನು ಸಾಧಿಸಲು ದೇಶಕ್ಕೆ ನೆರವಾಗಲಿದೆ’ ಎನ್ನುವುದು ಸಮದ್ ಅನಿಸಿಕೆ.

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು