ಮಂಗಳವಾರ, ಜನವರಿ 18, 2022
22 °C

ಎನ್‌ಸಿಆರ್‌: ವಾಯುಮಾಲಿನ್ಯ ತಡೆಗೆ ಕಾರ್ಯಪಡೆ ರಚನೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರ ರಾಜಧಾನಿ ಪ್ರದೇಶ (ಎನ್‌ಸಿಆರ್‌) ವ್ಯಾಪ್ತಿಯಲ್ಲಿ ಹದಗೆಡುತ್ತಿರುವ ವಾಯುಮಾಲಿನ್ಯ ತಡೆಗಟ್ಟಲು ಹಾಗೂ ವಾಯು ಗುಣಮಟ್ಟ ಸುಧಾರಿಸಲು ಐವರು ಸದಸ್ಯರ ಕಾರ್ಯಪಡೆ ರಚಿಸಲಾಗಿದೆ. ಪ್ರಾಧಿಕಾರ ನೀಡುವ ಸಲಹೆ, ಸೂಚನೆಗಳ ಅನುಷ್ಠಾನ ಕುರಿತು ಮೇಲ್ವಿಚಾರಣೆಗೆ 17 ಸಂಚಾರಿ ಪರಿಶೀಲನಾ ದಳಗಳನ್ನು ರಚಿಸಲಾಗಿದೆ ಎಂದು ‘ವಾಯು ಗುಣಮಟ್ಟ ನಿರ್ವಹಣೆ ಪ್ರಾಧಿಕಾರ’ (ಸಿಎಕ್ಯೂಎಂ) ಸುಪ್ರೀಂಕೋರ್ಟ್‌ಗೆ ಪ್ರಮಾಣ ಪತ್ರ ಸಲ್ಲಿಸಿದೆ.

ಸಂಚಾರಿ ಪರಿಶೀಲನಾ ದಳಗಳ ಸಂಖ್ಯೆಯನ್ನು 24 ಗಂಟೆಗಳಲ್ಲಿ 40ಕ್ಕೆ ಏರಿಸಲಾಗುವುದು. ಅಗತ್ಯ ವಸ್ತುಗಳನ್ನು ಸಾಗಿಸುವ ಮತ್ತು ಶುದ್ಧ ಇಂಧನದೊಂದಿಗೆ ಚಲಿಸುವ ವಾಹನಗಳನ್ನು ಹೊರತುಪಡಿಸಿ ಇತರ ಟ್ರಕ್‌ಗಳ ಪ್ರವೇಶವನ್ನು ನಿಷೇಧಿಸಲಾಗುವುದು ಎಂದೂ ಪ್ರಾಧಿಕಾರ ಪ್ರಮಾಣ ಪತ್ರದಲ್ಲಿ ತಿಳಿಸಿದೆ.

ವಾಯು ಗುಣಮಟ್ಟ ಹೆಚ್ಚಿಸುವುದಕ್ಕೆ ಸಂಬಂಧಿಸಿದಂತೆ ಪ್ರಾಧಿಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಗಮನ ಹರಿಸಿದ ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ, ಡಿ.ವೈ.ಚಂದ್ರಚೂಡ್‌, ಸೂರ್ಯಕಾಂತ್‌ ಅವರ ಪೀಠವು, ಪ್ರಾಧೀಕಾರದ ಆದೇಶ, ಸೂಚನೆಗಳನ್ನು ಕೇಂದ್ರ ಮತ್ತು ರಾಜ್ಯಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಮುಂದಿನ ಶುಕ್ರವಾರಕ್ಕೆ ಮುಂದೂಡಿತು.

‘ತುರ್ತು ಸಂದರ್ಭಗಳಿಗೆ ತುರ್ತು ಕ್ರಮ ಅಗತ್ಯ’ ಎಂದು ಗುರುವಾರ ಹೇಳಿದ್ದ ಪೀಠ, ರಾಜಧಾನಿಯಲ್ಲಿ ವಾಯುಮಾಲಿನ್ಯ ತಡೆಗೆ ಕೈಗೊಂಡಿರುವ ಸ್ಪಷ್ಟ ಕ್ರಮಗಳ ಬಗ್ಗೆ 24 ಗಂಟೆಯಲ್ಲಿ ಮಾಹಿತಿ ನೀಡಬೇಕು ಎಂದು ಕೇಂದ್ರ ಮತ್ತು ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ನಾಲ್ಕು ರಾಜ್ಯಗಳಿಗೆ ಕಾರ್ಯಪಡೆ:

ಎನ್‌ಸಿಆರ್‌ ವ್ಯಾಪ್ತಿಯ ಉತ್ತರ ಪ್ರದೇಶ, ಹರಿಯಾಣ, ರಾಜಸ್ಥಾನ ಮತ್ತು ದೆಹಲಿಗೆ ‘ವಾಯು ಗುಣಮಟ್ಟ ನಿರ್ವಹಣೆ ಪ್ರಾಧಿಕಾರ’ (ಸಿಎಕ್ಯೂಎಂ) ಶುಕ್ರವಾರ ಪ್ರತ್ಯೇಕ ಕಾರ್ಯಪಡೆಗಳನ್ನು ರಚಿಸಿದೆ.

ಪ್ರತಿ ಕಾರ್ಯಪಡೆಯೂ ತಲಾ ಒಬ್ಬರು ಅಧ್ಯಕ್ಷರನ್ನು ಹೊಂದಿರುತ್ತದೆ. ಆಯಾ ರಾಜ್ಯಗಳ ಪರಿಸರ ಇಲಾಖೆ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷರಾಗಿರುತ್ತಾರೆ. ಆಯಾ ರಾಜ್ಯಗಳ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ (ಎಸ್‌ಪಿಸಿಬಿ/ಡಿಪಿಸಿಸಿ) ಸದಸ್ಯ ಕಾರ್ಯದರ್ಶಿ, ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರತಿನಿಧಿ ಮತ್ತು ಎಸ್‌ಪಿಸಿಬಿ ಅಥವಾ ಡಿಪಿಸಿಸಿಯ ಮೂವರು ಪ್ರತಿನಿಧಿಗಳನ್ನು ಈ ಕಾರ್ಯಪಡೆಗಳು ಒಳಗೊಂಡಿರುತ್ತವೆ ಎಂದು ಸಿಎಕ್ಯೂಎಂ ತಿಳಿಸಿದೆ.

ಹರಿಯಾಣದ ನಾಲ್ಕು ಜಿಲ್ಲೆಗಳಲ್ಲಿ ಶಾಲೆ ಬಂದ್‌ (ಚಂಡೀಗಡ ವರದಿ):

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯದ ಪರಿಣಾಮ, ಹರಿಯಾಣ ಸರ್ಕಾರವು ದೆಹಲಿಗೆ ಅಂಟಿಕೊಂಡಿರುವ ಗುರುಗ್ರಾಮ, ಫರಿದಾಬಾದ್‌, ಸೋನಿಪತ್ ಮತ್ತು ಝಾಜ್ಜರ್‌ ಜಿಲ್ಲೆಗಳಲ್ಲಿ ಶಾಲೆಗಳನ್ನು ಸ್ಥಗಿತಗೊಳಿಸಲು ಆದೇಶಿಸಿದೆ.

ಅಲ್ಲದೆ ಎನ್‌ಸಿಆರ್‌ ವ್ಯಾಪ್ತಿಯಲ್ಲಿನ ವಾಯು ಮಾಲಿನ್ಯಕ್ಕೆ ಕಾರಣವಾಗುವ ಕಟ್ಟಡ ನಿರ್ಮಾಣ ಚಟುವಟಿಕೆಗಳನ್ನು ನಿಲ್ಲಿಸುವಂತೆ ಸರ್ಕಾರ ನಿರ್ದೇಶಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು