ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೇನಾ ಸಂಚಾರಕ್ಕೆ ಅನುವು ಮಾಡಿಕೊಡಲು ಲಡಾಖ್‌ಗೆ ಹೊಸ ರಸ್ತೆ ನಿರ್ಮಾಣ

ಪಾಕಿಸ್ತಾನ, ಚೀನಾ ಅರಿವಿಗೆ ಬಾರದಂತೆ ಸೇನಾ ಸಂಚಾರಕ್ಕೆ ಅನುಕೂಲ
Last Updated 19 ಆಗಸ್ಟ್ 2020, 11:22 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನ ಮತ್ತು ಚೀನಾದ ಅರಿವಿಗೆ ಬಾರದಂತೆ ಸೇನಾ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲು ಭಾರತವು ಲಡಾಖ್‌ಗೆ ಹೊಸ ರಸ್ತೆ ನಿರ್ಮಾಣ ಮಾಡುತ್ತಿದೆ. ಮನಾಲಿಯಿಂದ ಲೇಹ್‌ ಸಂಪರ್ಕಿಸುವ ಹೊಸ ರಸ್ತೆಯು ಲಡಾಖ್‌ಗೆ ತೆರಳುವ ಮೂರನೇ ಮಾರ್ಗವಾಗಿರಲಿದೆ.

ದೌಲತ್ ಬೆಗ್ ಒಲ್ಡಿ ಸೇರಿದಂತೆ ಆಯಕಟ್ಟಿನ ಇತರ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿಯೂ ಭಾರತ ಕಳೆದ ಮೂರು ವರ್ಷಗಳಿಂದ ಕಾರ್ಯಪ್ರವೃತ್ತವಾಗಿದೆ. ಖಾರ್ದುಂಗ್ ಲಾ ಪಾಸ್‌ ಸಂಪರ್ಕಿಸುವ ವಿಶ್ವದ ಅತಿ ಎತ್ತರದ ರಸ್ತೆ ನಿರ್ಮಾಣ ಕಾರ್ಯ ಈಗಾಗಲೇ ಆರಂಭಗೊಂಡಿದೆ ಎಂದು ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.

‘ಮನಾಲಿಯಿಂದ ಲೇಹ್‌ಗೆ ಸಂಪರ್ಕ ಕಲ್ಪಿಸುವ ಪರ್ಯಾಯ ಮಾರ್ಗದ ಬಗ್ಗೆ ಏಜೆನ್ಸಿಗಳು ಕಾರ್ಯಪ್ರವೃತ್ತವಾಗಿವೆ. ನಿಮೊ–ಪದಮ್–ದಾರ್‌ಚಾ ಮೂಲಕ ಸಾಗುವ ಹೊಸ ರಸ್ತೆಯು ಸದ್ಯ ಅಸ್ತಿತ್ವದಲ್ಲಿರುವ ರಸ್ತೆಗಳಿಗೆ ಹೋಲಿಸಿದರೆ ತುಂಬಾ ಸಮಯ ಉಳಿತಾಯ ಮಾಡಲಿದೆ’ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

‘ಹೊಸ ರಸ್ತೆಯಲ್ಲಿ ಮನಾಲಿಯಿಂದ ಲೇಹ್‌ಗೆ ಪ್ರಯಾಣಿಸಲು ಈಗಿರುವ ರಸ್ತೆಗಳಲ್ಲಿನ ಪ‍್ರಯಾಣದ ಅವಧಿಗಿಂತ ಮೂರು ಗಂಟೆ ಕಡಿಮೆ ಸಾಕಾಗಬಹುದು. ಜತೆಗೆ, ಈ ರಸ್ತೆಯಲ್ಲಿ ಭಾರತೀಯ ಸೇನೆಯ ಚಲನವಲನದ ಮೇಲೆ ಕಣ್ಣಿಡಲು ಚೀನಾ ಹಾಗೂ ಪಾಕಿಸ್ತಾನಕ್ಕೆ ಸಾಧ್ಯವಾಗದು. ಇದರಿಂದ ರಹಸ್ಯವಾಗಿ ಶಸ್ತ್ರಾಸ್ತ್ರಗಳನ್ನು, ಯುದ್ಧಸಾಮಗ್ರಿಗಳನ್ನು ಸಾಗಿಸಬಹುದು’ ಎಂದೂ ಮೂಲಗಳು ಹೇಳಿವೆ.

ಸದ್ಯ ಶ್ರೀನಗರದಿಂದ ಝೊಜಿಲಾ ಪಾಸ್‌ ಮೂಲಕ ಮತ್ತು ಮನಾಲಿಯಿಂದ ಸರ್ಚು ಮೂಲಕ ಲೇಹ್‌ ಸಂಪರ್ಕಿಸಲಾಗುತ್ತಿದೆ. ಸರಕು ಮತ್ತು ಸಿಬ್ಬಂದಿ ಸಾಗಾಟಕ್ಕೆ ಮುಖ್ಯವಾಗಿ ಬಳಸಲಾಗುತ್ತಿರುವ ಝೊಜಿಲಾ ಪಾಸ್‌ ರಸ್ತೆಯು ದ್ರಾಸ್–ಕಾರ್ಗಿಲ್ ಮೂಲಕ ಹಾದುಹೋಗುತ್ತದೆ. 1999ರ ಕಾರ್ಗಿಲ್ ಕದನದ ವೇಳೆ ಇದೇ ರಸ್ತೆ ಪಾಕಿಸ್ತಾನ ಪಡೆಗಳ ಗುರಿಯಾಗಿತ್ತು.

ಪರ್ಯಾಯ ರಸ್ತೆ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭವಾಗಿದೆ. ಮನಾಲಿಯಿಂದ ಲೇಹ್‌ಗೆ ತೆರಳಲು ಇರುವ ಈ ರಸ್ತೆ ನಿಮು ಪ್ರದೇಶದ ಬಳಿ ಲೇಹ್ ಸಂಪರ್ಕಿಸಲಿದೆ. ಇದೇ ಪ್ರದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಭೇಟಿ ನೀಡಿದ್ದರು ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT