ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಚರ್ಚೆ| ದೇಶದ ಉಳಿವಿಗೆ ಕಾಂಗ್ರೆಸ್‌ ಅಗತ್ಯ: ಶಶಿ ತರೂರ್‌

ಭಾರತಕ್ಕೆ ಕಾಂಗ್ರೆಸ್ ಪಕ್ಷ ಅನಿವಾರ್ಯವೇ? ಆ ಪಕ್ಷದ ಪುನರುತ್ಥಾನ ಸಾಧ್ಯವೇ?
Last Updated 2 ಏಪ್ರಿಲ್ 2022, 1:44 IST
ಅಕ್ಷರ ಗಾತ್ರ

ಐದು ರಾಜ್ಯಗಳ ಚುನಾವಣಾ ಫಲಿತಾಂಶವು ಕಾಂಗ್ರೆಸ್‌ ಪಕ್ಷದ ಒಳಗೆ ಮಾತ್ರವಲ್ಲ; ಅದರ ಹೊರ ಆವರಣದ ಸುತ್ತಲೂ ಕತ್ತಿಗಳನ್ನು ಝಳಪಿಸುವಂತೆ ಮಾಡಿದೆ. ಹಾಗೆಯೇ ಈ ‘ಗ್ರ್ಯಾಂಡ್‌ ಓಲ್ಡ್‌ ಪಾರ್ಟಿ’ಗೆ ಶ್ರದ್ಧಾಂಜಲಿ ಸಲ್ಲಿಸಿ ಲೇಖನವನ್ನು ಬರೆಯುವಲ್ಲಿ ಹಲವು ಪೆನ್ನುಗಳೂ ಕಾರ್ಯಪ್ರವೃತ್ತವಾಗಿವೆ. ಫಲಿತಾಂಶದ ಕುರಿತು ಮಾಹಿತಿ ತಂದ ಸುದ್ದಿಯು ಪಕ್ಷದ ಪಾಲಿಗೆ ಖಂಡಿತವಾಗಿಯೂ ನಿರೀಕ್ಷಿಸಿದ್ದಕ್ಕಿಂತ ಕೆಟ್ಟದ್ದಾಗಿತ್ತು. ಇದೊಂದು ಸಂಪೂರ್ಣ ಸೋಲು. ಪಕ್ಷ ಉತ್ತಮ ಸಾಧನೆ ಮಾಡಲಿದೆ ಎಂದು ನಿರೀಕ್ಷಿಸಿದ್ದ ರಾಜ್ಯಗಳಲ್ಲೂ ಗೆಲುವು ‘ಕೈ’ ತಪ್ಪಿ ಹೋಗಿದ್ದಕ್ಕೆ ಯಾವುದೇ ಸಮಾಧಾನವನ್ನು ಕೊಟ್ಟುಕೊಳ್ಳುವುದು ಸಾಧ್ಯವೇ ಇಲ್ಲ.

ಐದು ವರ್ಷಗಳಿಂದ ಆಡಳಿತ ನಡೆಸಿದ್ದ ಪಂಜಾಬ್‌ನಲ್ಲಿಯೂ ನಾವು ಅಧಿಕಾರವನ್ನು ಕಳೆದುಕೊಂಡೆವು. ಎಂಟು ತಿಂಗಳ ಹಿಂದಿನವರೆಗೂ ನಾವು ಅಲ್ಲಿ ಪುನರಾಯ್ಕೆ ಆಗುವುದು ಖಚಿತವಾಗಿತ್ತು. ಆದರೆ, ಕೊನೆಗೆ ದೊರೆತದ್ದು ಹೀನಾಯ ಸೋಲು. ಅದೇ ಉತ್ತರಾಖಂಡ ಮತ್ತು ಗೋವಾ ರಾಜ್ಯಗಳಲ್ಲಿ ನಮ್ಮ ಪಕ್ಷ ಸೋಲು ಕಂಡರೂ ಅದು ವೀರೋಚಿತವಾಗಿತ್ತು. ಮಣಿಪುರದಲ್ಲಿ ಬಿಜೆಪಿಯಲ್ಲಿ ಸಮಸ್ಯೆಯಿದ್ದರೂ ಜನ ಆ ಪಕ್ಷವನ್ನೇ ಮತ್ತೆ ಅಧಿಕಾರಕ್ಕೆ ತಂದರು. ಇನ್ನು ಉತ್ತರ ಪ್ರದೇಶ. ಒಂದುಕಾಲದಲ್ಲಿ ಕಾಂಗ್ರೆಸ್‌ನಿಂದ ದೇಶಕ್ಕೆ ಐವರು ಪ್ರಧಾನಿಗಳನ್ನು ಕೊಟ್ಟಿದ್ದ ಈ ರಾಜ್ಯ, ನಮ್ಮ ಪಕ್ಷವನ್ನು ಹೇಗೆ ತಿರಸ್ಕರಿಸಿತೆಂದರೆ ನಮ್ಮನ್ನು ಕಣದಲ್ಲಿದ್ದ ಆಟಗಾರ ಎಂದೂ ಅಲ್ಲಿನ ಮತದಾರ ಪರಿಗಣಿಸಲಿಲ್ಲ.

ಇಷ್ಟು ಕೆಟ್ಟಸ್ಥಿತಿ ಸಾಲದೆಂಬಂತೆ ಸಂಖ್ಯೆಗಳು ಸಹ ದೇಶದಾದ್ಯಂತ ಪಕ್ಷಕ್ಕೆ ಬೆಂಬಲ ಕುಸಿಯುತ್ತಿರುವ ದುಃಖದ ಕಥೆಯನ್ನು ಹೇಳತೊಡಗಿದವು. ಕಾಂಗ್ರೆಸ್‌ ಪಕ್ಷದ ಮತಗಳಿಕೆ ಪ್ರಮಾಣವು ಎಂದಿಗೂ ಶೇ 30ಕ್ಕಿಂತ ಕೆಳಮಟ್ಟಕ್ಕೆ ಕುಸಿದಿರಲಿಲ್ಲ. ಆದರೆ, 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷ ಗಳಿಸಿದ್ದು ಶೇ 19.49ರಷ್ಟು ಮತಗಳನ್ನು ಮಾತ್ರ. ಪಕ್ಷದ ಮತಬುಟ್ಟಿಯ ಗಾತ್ರ ನಾಟಕೀಯವಾಗಿ ಕುಗ್ಗಿಹೋದ ಕಥೆಯನ್ನು ರಾಜಧಾನಿ ದೆಹಲಿಯ ಬೆಳವಣಿಗೆಗಳಂತೂ ಬಲು ಚೆನ್ನಾಗಿ ಕಟ್ಟಿಕೊಡುತ್ತವೆ. 21ನೇ ಶತಮಾನದ ಆರಂಭಿಕ ಕಾಲಘಟ್ಟದಿಂದಲೂ ಸತತ ಮೂರು ಬಾರಿ ಈ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿದ್ದ ಕಾಂಗ್ರೆಸ್‌ನ ಮತಗಳಿಕೆ ಪ್ರಮಾಣವು 2020ರಲ್ಲಿ ಶೇ 40.31ರಿಂದ ಶೇ 4.36ಕ್ಕೆ ಕುಸಿದಿತ್ತು. ಹಲವು ರಾಜ್ಯಗಳಲ್ಲಿ ಮತಗಳಿಕೆ ಪ್ರಮಾಣ ಇನ್ನೂ ಕುಸಿಯುತ್ತಲೇ ಇದ್ದು, ಕಾಂಗ್ರೆಸ್‌ ಪಕ್ಷ ಕೂಡ ಕಣದಲ್ಲಿದೆ ಎನ್ನುವುದನ್ನೇ ಕಡೆಗಣಿಸಿರುವುದು ಸ್ಪಷ್ಟ.

ಹೌದು, ವಾಸ್ತವಿಕ ಚಿತ್ರಣವು ಕಠೋರವಾಗಿದೆ. ಭಾರತದ ಮಾಧ್ಯಮದ ಸಂಪಾದಕೀಯ ಕೊಠಡಿಗಳಲ್ಲಿ ವಿಷದ ಮುಳ್ಳುಗಳನ್ನು ಪ್ರತಿದಿನ ಹರಿತಗೊಳಿಸುತ್ತಲೇ ಬರಲಾಗುತ್ತಿದೆ. ಈ ಯಾವ ಸಂಗತಿಗಳನ್ನೂ ಅಲ್ಲಗಳೆಯದೇ ಒತ್ತಿಹೇಳಬೇಕಾದ ಮಾತೇನೆಂದರೆ ಕಾಂಗ್ರೆಸ್‌ ಪಕ್ಷವಿಲ್ಲದ ಭಾರತವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆ ಪಕ್ಷ ಏನನ್ನು ಪ್ರತಿನಿಧಿಸುವುದೋ ಮತ್ತು ಅದು ಯಾವ ಸ್ಥಳವನ್ನು ತುಂಬಿದೆಯೋ –ಅವುಗಳು ದೇಶ ಉಳಿಯಲು ಮತ್ತು ಬೆಳೆಯಲು ಬೇಕೇಬೇಕು.ಪಕ್ಷವನ್ನು ಮುಖ್ಯವಾಗಿ ಅದರ ಮೌಲ್ಯಗಳು, ತತ್ವಗಳು ಮತ್ತು ನಂಬಿಕೆಗಳು ಮತ್ತು ಅವುಗಳನ್ನು ಕಾರ್ಯಗತಗೊಳಿಸಲು ಅದು ರೂಪಿಸುವ ನೀತಿಗಳಿಂದ ವ್ಯಾಖ್ಯಾನಿಸಲಾಗಿದೆ. ಆ ವಿಚಾರಗಳಿಗೆ ಪಕ್ಷವೇ ಸಂಘಟನಾ ವಾಹಕವೂ ಆಗಿದೆ. ಆದರೆ, ಆ ಹೊಣೆಗಾರಿಕೆ ನಿಭಾಯಿಸುವ ವಿಷಯದಲ್ಲಿ ಎಡವಟ್ಟು ಆಗಿದೆ.

ಕಾಂಗ್ರೆಸ್‌ನ ಡಿಎನ್‌ಎಯಲ್ಲಿ ಹೆಣೆದುಕೊಂಡ ಬಹು ಅಮೂಲ್ಯವಾದ ಮೌಲ್ಯವೆಂದರೆ ಅದರ ಜಾತ್ಯತೀತ ಮನೋಭಾವ. ದೇಶ ಇಬ್ಭಾಗವಾಗುವುದನ್ನು ಕಾಂಗ್ರೆಸ್‌ ತಡೆಯಲು ಯತ್ನಿಸಿತಾದರೂ ಅದು ಅನಿವಾರ್ಯವಾದಾಗ ಭಾರತೀಯ ಮುಸ್ಲಿಮರಿಗಾಗಿಯೇ ಪಾಕಿಸ್ತಾನ ದೇಶ ಜನ್ಮತಾಳಿದ್ದು ಮತ್ತು ಭಾರತ ಹಿಂದೂಗಳಿಗೆ ಸೇರಿದ್ದು ಎಂಬ ವಾದವನ್ನು ಎಂದಿಗೂ ಒಪ್ಪಲಿಲ್ಲ. ಜವಾಹರಲಾಲ್‌ ನೆಹರೂ ಅಥವಾ ಪಕ್ಷದ ಇತರ ನಾಯಕರು ಭಾರತವು ತನ್ನ ಚರಿತ್ರೆಗೆ, ನಾಗರಿಕತೆಗೆ ಕೊಡುಗೆ ಕೊಟ್ಟ ಎಲ್ಲರಿಗೂ ಸೇರಿದ್ದು ಎಂದು ಬಲವಾಗಿ ನಂಬಿದ್ದರು. ದೇಶದ ಬಹುಸಂಖ್ಯಾತ ಸಮುದಾಯವು ಅಲ್ಪಸಂಖ್ಯಾತ ಸಮುದಾಯದ ಹಕ್ಕುಗಳ ರಕ್ಷಣೆ ಮಾಡುವ, ಆ ಸಮುದಾಯದ ಉತ್ತಮ ಬದುಕಿಗೆ ನೆರವಾಗುವ ಹೊಣೆಗಾರಿಕೆಯನ್ನೂ ಹೊಂದಿದೆ ಎಂದು ಪ್ರತಿಪಾದಿಸಿದ್ದರು. ಸರ್ಕಾರದ ನೀತಿ ಮತ್ತು ವೈಯಕ್ತಿಕ ಆಚರಣೆ ಎರಡರಲ್ಲೂ, ಪ್ರತಿಯೊಂದು ಧರ್ಮ, ಜಾತಿ, ಜನಾಂಗ ಮತ್ತು ಭಾಷಾ ಸಮುದಾಯವನ್ನು ಸ್ವೀಕರಿಸುವ ಭಾರತದ ಕಲ್ಪನೆಯ ಪರವಾಗಿ ಕಾಂಗ್ರೆಸ್ ನಿಂತಿತು.

‘ವಿವಿಧತೆಯಲ್ಲಿ ಏಕತೆ’ ಸ್ವತಂತ್ರ ಭಾರತವನ್ನು ವ್ಯಾಖ್ಯಾನಿಸುವ ತುಂಬಾ ಪ್ರಬಲವಾದ ಘೋಷಣೆ. 1947ರಲ್ಲಿ ದೆಹಲಿಯಲ್ಲಿ ನಡೆದ ವಿಭಜನೆಯ ಗಲಭೆಗಳ ಸಮಯದಲ್ಲಿ ಸರ್ದಾರ್‌ ವಲ್ಲಭಭಾಯಿ ಪಟೇಲರ ಕ್ರಿಯೆಗಳು ಆ ಘೋಷಣೆಯ ಮೂರ್ತರೂಪವಾಗಿದ್ದವು. ಜಾತ್ಯತೀತ ಮನೋಭಾವದ ರಕ್ಷಣೆಗೆ ನಮ್ಮ ಪಕ್ಷದ್ದು ಬಲಿಷ್ಠ ಹಾಗೂ ಬದ್ಧತೆಯಿಂದ ಕೂಡಿದ ಧ್ವನಿಯಾಗಿದೆ. ನಮ್ಮ ಈ ಮೌಲ್ಯಗಳ ಮೇಲೆ ನಾವು ಇನ್ನಷ್ಟು ನಂಬಿಕೆಯಿಟ್ಟು ಮುನ್ನಡೆಯಬೇಕಿದೆ. ಹಿಂದೂ ರಾಷ್ಟ್ರದ ಮೂರ್ಖತನದ ಅನ್ವೇಷಣೆಯಲ್ಲಿ ಭಾರತೀಯ ಬಹುತ್ವವನ್ನು ಬಿಜೆಪಿ ಕೈಬಿಟ್ಟಿರುವುದು ಅಲ್ಪಸಂಖ್ಯಾತರಲ್ಲಿ ಅಸುರಕ್ಷಿತ ಮನೋಭಾವ ಹುಟ್ಟುಹಾಕಿದೆ.

ಬಿಜೆಪಿ ಮತ್ತು ನಮ್ಮ ಭಿನ್ನಾಭಿಪ್ರಾಯಗಳು ಸ್ಪಷ್ಟವಾಗಿವೆ. ನಾವು ಮುಸ್ಲಿಮರನ್ನು ಸಬಲೀಕರಣಗೊಳಿಸಲು ಪ್ರಯತ್ನಿಸುತ್ತೇವೆ, ಅವರನ್ನು ಘೆಟ್ಟೊಗಳಲ್ಲಿ ಸೀಮಿತಗೊಳಿಸಲು ಬಯಸುವುದಿಲ್ಲ. ನಾವು ಮುಸ್ಲಿಂ ಅಭ್ಯರ್ಥಿಗಳಿಗೆ ಚುನಾವಣಾ ಟಿಕೆಟ್ ನೀಡುತ್ತೇವೆ; ಸ್ವತಂತ್ರ ಭಾರತದ ಇತಿಹಾಸದಲ್ಲಿ ಲೋಕಸಭೆಯಲ್ಲಿ ಯಾವುದೇ ಚುನಾಯಿತ ಮುಸ್ಲಿಂ ಸಂಸದರನ್ನು ಹೊಂದಿರದ ಮೊದಲ ಸರ್ಕಾರ ಬಿಜೆಪಿ ನೇತೃತ್ವದ್ದಾಗಿದೆ. ತನ್ನ ಎರಡನೇ ಅವಧಿಯಲ್ಲೂ ಈ ಕೊರತೆಯನ್ನು ನಿವಾರಿಸಲು ಅದು ವಿಫಲವಾಗಿದೆ. ಬಿಜೆಪಿಯ ಬೆಂಬಲಿಗರು ಧ್ರುವೀಕರಣವನ್ನು ಉತ್ತೇಜಿಸಲು ಅಲ್ಪಸಂಖ್ಯಾತ ವಿರೋಧಿ ಹಿಂಸಾಚಾರವನ್ನು ಪ್ರಚೋದಿಸುತ್ತಾರೆ; ನಾವು ಜ್ವಾಲೆಯನ್ನು ನಂದಿಸಲು ಪ್ರಯತ್ನಿಸುತ್ತೇವೆ, ಕ್ರೋಧವನ್ನು ಎಂದಿಗೂ ಸಮರ್ಥಿಸುವುದಿಲ್ಲ. ನಾವು ಅಲ್ಪಸಂಖ್ಯಾತರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಕೆಲಸ ಮಾಡುತ್ತೇವೆ, ಬಿಜೆಪಿಯವರು ಈ ವಿಷಯವೇ ಅಪ್ರಸ್ತುತ ಎನ್ನುವ ನಾಟಕವಾಡುತ್ತಾರೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಪ್ರತಿಪಾದಿಸಿದ ಎಲ್ಲರನ್ನೂ ಒಳಗೊಂಡ ಸ್ವತಂತ್ರ, ಗಣತಂತ್ರ ಭಾರತವನ್ನು ಕಾಪಿಟ್ಟುಕೊಳ್ಳುವುದೇ ಕಾಂಗ್ರೆಸ್‌ನ ಹೆಬ್ಬಯಕೆಯಾಗಿದೆ.

ಕಾಂಗ್ರೆಸ್‌ ಪ್ರತಿಪಾದಿಸುತ್ತಿರುವ ಮೌಲ್ಯಗಳಲ್ಲಿ ಸಾಮಾಜಿಕ ನ್ಯಾಯವೂ ಒಂದು. ಆರ್ಥಿಕ ವಿಚಾರಗಳ ಕುರಿತು ಹೇಳುವುದಾದರೆ ಭಾರತ ನೆಹರೂಯುಗದ ಸಮಾಜವಾದದಿಂದ ದೂರ ಸರಿದು ದಶಕಗಳೇ ಆಗಿವೆ. ಕಾಂಗ್ರೆಸ್‌ ನೇತೃತ್ವದ ಸರ್ಕಾರ 1991ರಲ್ಲಿ ತಂದ ಆರ್ಥಿಕ ಸುಧಾರಣೆಗಳಿಂದಲೇ ಆ ಬದಲಾವಣೆಗಳು ಘಟಿಸಿವೆ. ನೆಹರೂ ಸಮಾಜವಾದವನ್ನು ಅಲ್ಲಗಳೆಯುವುದು ಇತ್ತೀಚೆಗೆ ಫ್ಯಾಷನ್‌ ಆಗಿಬಿಟ್ಟಿದೆ. ಸಮಾಜವಾದದ ಮಾದರಿಯಲ್ಲಿ ಹಲವು ಕೊರತೆಗಳು ಇದ್ದವು ಎನ್ನುವುದನ್ನು ನಾವು ನಿರಾಕರಿಸುವುದಿಲ್ಲ. ನೆಹರೂ ಅವರ ಸ್ವಂತ ಮೊಮ್ಮಗ ಕೂಡ ಇದನ್ನು ತುಂಬಾ ಸ್ಪಷ್ಟವಾಗಿ ಹೇಳಿದ್ದಾರೆ. ಆದರೆ, ನೆಹರೂ ಅವರ ಸಮಾಜವಾದ ಬಡವರ ಕಲ್ಯಾಣದ ಉದ್ದೇಶವನ್ನು ಹೊಂದಿತ್ತು. ಅಂತ್ಯೋದಯದ ಕನಸನ್ನು ಅದು ಕಂಡಿತ್ತು.

ಸಂಪತ್ತು ವೃದ್ಧಿ ಹಾಗೂ ಹಂಚಿಕೆಯಲ್ಲಿ ಖಾಸಗಿ ಸಹಭಾಗಿತ್ವವನ್ನು ಕಾಂಗ್ರೆಸ್‌ ಪಕ್ಷವೂ ಬೆಂಬಲಿಸುತ್ತದೆ. ಕಾಂಗ್ರೆಸ್‌ ಕೊಟ್ಟ ಇಬ್ಬರು ಪ್ರಧಾನಿಗಳಾದ ನರಸಿಂಹರಾವ್‌ ಮತ್ತು ಮನಮೋಹನ್‌ ಸಿಂಗ್‌ ಉದಾರೀಕರಣದ ಹರಿಕಾರರು ಎಂಬುದನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತೇವೆ. ರಾಜೀವ್‌ ಗಾಂಧಿ ಅವರು ತಂತ್ರಜ್ಞಾನ ಮತ್ತು ಟೆಲಿಕಾಂ ವಲಯಕ್ಕೆ ಕೊಟ್ಟ ಉತ್ತೇಜನ, ರಾವ್‌ ಅವರ ಆರ್ಥಿಕ ಸುಧಾರಣೆ ಮತ್ತು ಸಿಂಗ್‌ ಅವರು ಜಾಗತೀಕರಣಕ್ಕೆ ನೀಡಿದ ವೇಗದಿಂದ ದೇಶ ಯಾವ ರೀತಿಯಲ್ಲಿ ಪ್ರಗತಿಯತ್ತ ದಾಪುಗಾಲು ಹಾಕಿತೆಂದರೆ 2008ರ ಆರ್ಥಿಕ ಹಿಂಜರಿತದಿಂದ ಸಂಕಷ್ಟಕ್ಕೆ ಸಿಲುಕದಂತೆ ಅದು ಬಚಾವಾಯಿತು. ಇಷ್ಟಾಗಿಯೂ ನಾವು ಸಮಾಜವಾದಿಗಳು ಎಂದು ಕರೆದುಕೊಳ್ಳಲು ಇಷ್ಟಪಡುತ್ತೇವೆ. ಏಕೆಂದರೆ, ಸಮಾಜದ ದುರ್ಬಲ ವರ್ಗದವರ ಏಳ್ಗೆಯೂ ನಮಗೆ ಮುಖ್ಯವಾಗಿದೆ. ಆದ್ದರಿಂದಲೇ ಮಾಹಿತಿ ಹಕ್ಕು (ಆರ್‌ಟಿಐ), ಶಿಕ್ಷಣ ಹಕ್ಕು (ಆರ್‌ಟಿಇ), ಉದ್ಯೋಗದ ಹಕ್ಕು, ಆಹಾರದ ಹಕ್ಕು, ಭೂಮಿಗೆ ನ್ಯಾಯಸಮ್ಮತ ಬೆಲೆ ಪಡೆಯುವ ಹಕ್ಕು ನಮ್ಮ ಪಕ್ಷದ ನೇತೃತ್ವದ ಸರ್ಕಾರಕ್ಕೆ ಮುಖ್ಯವಾಗಿವೆ.

ನೆಹರೂ ಅವರು ಭಾರತೀಯ ಬಾಹ್ಯಾಕಾಶ ಸಂಸ್ಥೆ, ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) ಸ್ಥಾಪಿಸಿ ಭದ್ರಬುನಾದಿ ಹಾಕಿದ್ದರಿಂದಲ್ಲವೇ ದೇಶ ತಂತ್ರಜ್ಞಾನ ಕ್ಷೇತ್ರದಲ್ಲಿ ಇಷ್ಟೊಂದು ಪ್ರಗತಿ ಸಾಧಿಸಿರುವುದು? ನೆಹರೂ ಪ್ರಣೀತವಾದ ವಿದೇಶಾಂಗ ನೀತಿ ಎಷ್ಟು ಪ್ರಬಲವಾದುದು ಎನ್ನುವುದನ್ನು ಮತ್ತೆ ವಿಸ್ತರಿಸಿ ಹೇಳಬೇಕಿಲ್ಲ. ರಾಷ್ಟ್ರೀಯ ಭದ್ರತೆಯನ್ನು ಕಾಂಗ್ರೆಸ್‌ ಎಷ್ಟೊಂದು ಗಂಭೀರವಾಗಿ ತೆಗೆದುಕೊಂಡಿತ್ತು ಎನ್ನುವುದಕ್ಕೆ ಬಾಂಗ್ಲಾದೇಶದ ವಿಷಯದಲ್ಲಿ ಇಂದಿರಾ ಗಾಂಧಿ ವಹಿಸಿದ ನಿರ್ಣಾಯಕ ಮಧ್ಯಸ್ಥಿಕೆಗಿಂತ ಬೇರೆ ಉದಾಹರಣೆ ಬೇಕಿಲ್ಲ. ಗಡಿ ತಂಟೆಯ ವಿಷಯವಾಗಿ ಚೀನಾ ಜತೆಗೆ ನಡೆದ ಸಮ್‌ದೊರೊಂಗ್‌ ಛು ಮುಖಾಮುಖಿಯಲ್ಲಿ ರಾಜೀವ್‌ ಗಾಂಧಿ ನಡೆದುಕೊಂಡ ರೀತಿಯೂ ಉಲ್ಲೇಖನಾರ್ಹ. ಚೀನಾದೊಂದಿಗೆ ಈಗಿನ ಗಡಿ ವಿವಾದದಲ್ಲಿ ಏನಾಯಿತು, ಮೋದಿ ನೇತೃತ್ವದ ಸರ್ಕಾರ ಹೇಗೆ ಎಡವಿತು ಎಂಬುದು ಇಡೀ ದೇಶಕ್ಕೆ ಗೊತ್ತಿದೆ.

ಭಾರತಕ್ಕೆ ತೀರಾ ಅಗತ್ಯವಾಗಿರುವ ಪಕ್ಷ ಕಾಂಗ್ರೆಸ್‌. ರಾಷ್ಟ್ರಮಟ್ಟದಿಂದ ಸ್ಥಳೀಯಮಟ್ಟದವರೆಗೆ ನಾಯಕತ್ವದಲ್ಲಿ ಬಿಸಿರಕ್ತದ ಹೊಸಮುಖಗಳಿಗೆ ಅವಕಾಶ ನೀಡುವ ಮೂಲಕ ಅದು ಪುನರುತ್ಥಾನದ ಹಾದಿ ಹಿಡಿಯಬೇಕು. ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಬಲಗೊಳಿಸಬೇಕು. ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಗೆ ಚುನಾವಣೆ ಮೂಲಕವೇ ಸದಸ್ಯರನ್ನು ಆಯ್ಕೆ ಮಾಡಬೇಕು. ಆಡಳಿತ ಪಕ್ಷದ ವಿರುದ್ಧ ದಾಳಿ ನಡೆಸುವುದರಿಂದ ಕಾಂಗ್ರೆಸ್‌ ಮೇಲೆ ನಕಾರಾತ್ಮಕ ಪರಿಣಾಮವೇ ಹೆಚ್ಚು ಎನ್ನುವ ದೂರನ್ನು ನಾನು ನಿರಾಕರಿಸುವೆ. ದೇಶದ ಒಳಿತಿಗಾಗಿ ಸೂಕ್ತ ವಿಷಯಗಳನ್ನು ಮುಂದಿಟ್ಟುಕೊಂಡು ಧ್ವನಿ ಎತ್ತಲು ಹಿಂಜರಿಕೆ ಸಲ್ಲ. ‘ಎಲ್ಲಿದೆ ಸಬ್‌ಕಾ ಸಾಥ್‌ ಸಬ್‌ಕಾ ವಿಶ್ವಾಸ್‌’, ‘ಯಾರಿಗೆ ಬಂತು ಅಚ್ಛೇ ದಿನ್‌’ ಪ್ರಶ್ನೆಯನ್ನು ನಾವು ಕೇಳಬೇಕು. ಕೋವಿಡ್‌ನ ನಿರ್ವಹಣೆಯಲ್ಲಿ ಆದ ವೈಫಲ್ಯವನ್ನು ಎತ್ತಿತೋರಬೇಕು. ಪಕ್ಷ ಪುನರುತ್ಥಾನದತ್ತ ಸಾಗುವ ಹಾದಿಯೇ ಇದಾಗಿದೆ.

ಲೇಖಕ: ಕಾಂಗ್ರೆಸ್‌ ಸಂಸದ, (ಲೇಖನದ ಮೂಲ ಮತ್ತು ವಿಸ್ತೃತರೂಪ ಓಪನ್‌ ಮ್ಯಾಗಝಿನ್‌ನಲ್ಲಿ ಪ್ರಕಟ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT