ಭಾನುವಾರ, ನವೆಂಬರ್ 28, 2021
19 °C

ಲಸಿಕೆ: ಇಂದು ‘ಶತಕ’ ಸಾಧನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌ ಪಿಡುಗಿನ ವಿರುದ್ಧ ದೇಶದಾದ್ಯಂತ ಆರಂಭವಾದ ಲಸಿಕಾ ಅಭಿಯಾನವು 9 ತಿಂಗಳ ಬಳಿಕ 100 ಕೋಟಿ ಡೋಸ್‌ಗಳನ್ನು ಪೂರ್ಣಗೊಳಿಸಲು ಸಜ್ಜಾಗಿದೆ. ಈ ಮಹತ್ವದ ಮೈಲಿಗಲ್ಲನ್ನು ಭಾರತ ಗುರುವಾರ ದಾಖಲಿಸುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಲಸಿಕಾ ಅಭಿಯಾನದ ಈ ‘ಮಹಾನ್‌ ಸಾಧನೆ’ಯ ಆಚರಣೆಗೆ ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಕೋವಿನ್‌ ಪೋರ್ಟಲ್‌ನಲ್ಲಿ ಬುಧವಾರ ದಾಖಲಾಗಿದ್ದ ಅಂಕಿ ಅಂಶಗಳ ಪ್ರಕಾರ ದೇಶದಾದ್ಯಂತ 99.85 ಕೋಟಿ ಡೋಸ್‌ ಲಸಿಕೆ (ರಾತ್ರಿ ಪುಟ ಮುದ್ರಣಕ್ಕೆ ಹೋಗುವವರೆಗೆ) ನೀಡಲಾಗಿದೆ. ವಯಸ್ಕರಲ್ಲಿ ಶೇ 75ರಷ್ಟು ಜನರು ಮೊದಲ ಡೋಸ್‌ ಪಡೆದಿದ್ದರೆ, ಶೇ 31ರಷ್ಟು ಜನರು ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ.

ಎಲ್ಲ ಅರ್ಹರು ವಿಳಂಬ ಮಾಡದೇ ಲಸಿಕೆ ಹಾಕಿಸಿಕೊಳ್ಳುವಂತೆ ಕೋರಿರುವ ಆರೋಗ್ಯ ಸಚಿವ ಮನ್‌ಸುಖ್‌ ಮಾಂಡವೀಯ ಅವರು, ಈ ಮೂಲಕ ಭಾರತದ ಐತಿಹಾಸಿಕ ಲಸಿಕಾ ಅಭಿಯಾನಕ್ಕೆ ಕೊಡುಗೆ ನೀಡುವಂತೆ ಮನವಿ ಮಾಡಿದ್ದಾರೆ.

100 ಕೋಟಿ ಡೋಸ್‌ ಲಸಿಕೆ ಹಾಕಿದ ಸಾಧನೆಯ ಬಗ್ಗೆ ರೈಲು, ವಿಮಾನ ನಿಲ್ದಾಣ ಮತ್ತು ಬಂದರುಗಳಲ್ಲಿ
ಧ್ವನಿವರ್ಧಕಗಳ ಮೂಲಕ ಮಾಹಿತಿ ಭಿತ್ತರಿಸಲು ಸರ್ಕಾರ ಯೋಜಿಸಿದೆ. ಅಲ್ಲದೆ ಈ ವೇಳೆ ದೆಹಲಿಯ ಕೆಂಪುಕೋಟೆಯಲ್ಲೂ ಸರ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ಇಲ್ಲಿ ಸಚಿವ ಮನ್‌ಸುಖ್‌ ಮಾಂಡವೀಯ ಅವರು ಗಾಯಕ ಕೈಲಾಶ್ ಖೇರ್ ಅವರ ಹಾಡು ಮತ್ತು ದೃಶ್ಯ –ಶ್ರವಣ ಫಿಲಂ ಅನ್ನು ಬಿಡುಗಡೆ ಮಾಡುವರು.

ವಿಶ್ವದಲ್ಲಿ ಇಲ್ಲಿಯವರೆಗೆ ಚೀನಾ ಮಾತ್ರ 100 ಕೋಟಿ ಡೋಸ್‌ ಲಸಿಕೆ ನೀಡಿರುವ ಸಾಧನೆ ಮಾಡಿದೆ. ಅದು ಜೂನ್‌ನಲ್ಲಿಯೇ ಈ ಸಾಧನೆ ಮಾಡಿತ್ತು. ಅದರ ನಂತರ ಈ ಮೈಲಿಗಲ್ಲು ದಾಟುತ್ತಿರುವ ದೇಶ ಎಂಬ ಹೆಗ್ಗಳಿಕೆ ಭಾರತದ್ದಾಗಿದೆ.

ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಹುಟ್ಟುಹಬ್ಬದ ದಿನ ದೇಶದಲ್ಲಿ 2.5 ಕೋಟಿ ಜನರಿಗೆ ಕೋವಿಡ್‌ ಲಸಿಕೆ ನೀಡುವ ಮೂಲಕ ಭಾರತ ಸಾಧನೆ ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು