ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಸಿಕೆ ಅಡ್ಡಪರಿಣಾಮದ ಆರೋಪ: ತನಿಖೆಗೆ ಐಸಿಎಂಆರ್‌ ನೆರವು, ಪ್ರಯೋಗಕ್ಕಿಲ್ಲ ತಡೆ

Last Updated 30 ನವೆಂಬರ್ 2020, 3:12 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಪ್ರಾಯೋಗಿಕ ಲಸಿಕೆಯಿಂದ ಗಂಭೀರ ಅಡ್ಡಪರಿಣಾಮಗಳಾಗಿವೆ ಎಂಬ ವ್ಯಕ್ತಿಯೊಬ್ಬರ ಆರೋಪ ಕುರಿತಂತೆ ಭಾರತೀಯ ಔಷಧ ಮಹಾನಿಯಂತ್ರಕ (ಡಿಸಿಜಿಐ) ಮತ್ತು ಸಾಂಸ್ಥಿಕ ನೈತಿಕ ಸಮಿತಿಯು ತನಿಖೆ ನಡೆಸಲಿದೆ. ಈ ತನಿಖೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ (ಐಸಿಎಂಆರ್‌) ಕೂಡ ಈಗ ಕೈ ಜೋಡಿಸಿದೆ.

ಚೆನ್ನೈನ ರಾಮಚಂದ್ರ ಇನ್ಸ್‌ಟಿಟ್ಯೂಟ್‌ ಆಫ್‌ ಹಯರ್‌ ಎಜುಕೇಷನ್‌ ಎಂಡ್‌ ರಿಸರ್ಚ್‌ ಸೆಂಟರ್‌ನಲ್ಲಿ, ಸೆರಂ ಇನ್ಸ್‌ಟಿಟ್ಯೂಟ್‌ ಪರವಾಗಿ, ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಪ್ರಾಯೋಗಿಕ ಲಸಿಕೆ ಪಡೆದ ವ್ಯಕ್ತಿಯೊಬ್ಬರು ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ಅಕ್ಟೋಬರ್‌ 1 ರಂದು ಅವರಿಗೆ ಲಸಿಕೆಯ ಮೊದಲ ಡೋಸ್‌ ನೀಡಲಾಗಿತ್ತು. ಹತ್ತು ದಿನಗಳ ಬಳಿಕ ಅವರಲ್ಲಿ ನರಸಂಬಂಧಿ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ವ್ಯಕ್ತಿಯಲ್ಲಿ ಅನಾರೋಗ್ಯ ಕಾಣಿಸಿಕೊಳ್ಳಲು ಕೋವಿಡ್‌ ಲಸಿಕೆಯೇ ಕಾರಣ ಎಂದು ಚೆನ್ನೈನ ನರಶಾಸ್ತ್ರಜ್ಞರೊಬ್ಬರು ಹೇಳಿದ್ದಾರೆ. ವ್ಯಕ್ತಿಯು ಸೆರಂ ಇನ್ಸ್‌ಟಿಟ್ಯೂಟ್‌ಗೆ ನೋಟಿಸ್‌ ನೀಡಿದ್ದು, ₹5 ಕೋಟಿ ಪರಿಹಾರ ನೀಡಲು ಆಗ್ರಹಿಸಿದ್ದಾರೆ. ವ್ಯಕ್ತಿಯ ಅನಾರೋಗ್ಯಕ್ಕೆ ಲಸಿಕೆಯ ಜತೆ ಯಾವ ಸಂಬಂಧವೂ ಇಲ್ಲ ಎಂದು ಸೆರಂ ಸಂಸ್ಥೆಯು ಭಾನುವಾರ ಹೇಳಿದೆ. ಸಂಸ್ಥೆಗೆ ಕೆಟ್ಟ ಹೆಸರು ಬರುವಂತೆ ಮಾಡಿದ್ದಕ್ಕಾಗಿ ₹100 ಕೋಟಿ ಪರಿಹಾರ ನೀಡಬೇಕು ಎಂದಿದೆ.

'ಕೋವಿಶೀಲ್ಡ್‌ ಲಸಿಕೆಯ ಪ್ರಾಯೋಗಿಕ ಪರೀಕ್ಷೆಗೆ ಒಳಪಟ್ಟ ಸ್ವಯಂಸೇವಕರು ಹೇಳುತ್ತಿರುವ ಸಮಸ್ಯೆಗಳಿಗೂ, ಲಸಿಕೆಗೂ ಯಾವುದೇ ಸಂಬಂಧ ಇಲ್ಲ ಎಂಬುದು ಪ್ರಾಥಮಿಕ ಮೌಲ್ಯಮಾಪನಗಳಿಂದ ತಿಳಿದು ಬಂದಿದೆ,' ಎಂದು ಐಸಿಎಂಆರ್‌ ತಿಳಿಸಿದೆ.

ಜತೆಗೇ, 'ಲಸಿಕೆಯ ಪ್ರಯೋಗವನ್ನು ನಿಲ್ಲಿಸುವ ಶಿಫಾರಸು ಮಾಡಲು ಅಗತ್ಯವಿರುವ ಯಾವುದೇ ಕಾರಣಗಳು ಕಂಡುಬಂದಿಲ್ಲ,' ಎಂದು ನಿಯಂತ್ರಕದ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ಹೇಳಿದ್ದಾರೆ.

'ಈ ಹಂತದಲ್ಲಿ ಆತಂಕ ಪಡಲು ಕಾರಣಗಳಿಲ್ಲ. ಹಾಗೆಂದು, ಸಂಪೂರ್ಣ ಮೌಲ್ಯಮಾಪನ ನಡೆಯುವುದಿಲ್ಲ ಎಂದು ಅರ್ಥವಲ್ಲ. ಘಟನೆಗೆ ಸಂಬಂಧಿಸಿದ ಬೆಳವಣಿಗೆಗಳು ಇನ್ನೂ ನಡೆಯುತ್ತಿವೆ. ಅವುಗಳ ಮೇಲೆ ನಾವು ನಿಗಾ ವಹಿಸಿದ್ದೇವೆ,' ಎಂದು ಲಸಿಕೆ ಪ್ರಯೋಗಗಳಲ್ಲಿ ಭಾಗಿಯಾಗಿರುವ ಐಸಿಎಂಆರ್‌ನ ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥ ಸಮಿರನ್ ಪಾಂಡ ರಾಯಿಟರ್ಸ್‌ಗೆ ತಿಳಿಸಿದರು.

‘ಆರೋಪಗಳಲ್ಲಿ ಹುರುಳಿಲ್ಲ ಮತ್ತು ಅವು ದುರುದ್ದೇಶದಿಂದ ಕೂಡಿವೆ. ವ್ಯಕ್ತಿಯ ಅನಾರೋಗ್ಯದ ಬಗ್ಗೆ ಸಂಸ್ಥೆಗೆ ಸಹಾನುಭೂತಿ ಇದೆ. ಆದರೆ, ಅನಾರೋಗ್ಯಕ್ಕೆ ಕಾರಣ ಲಸಿಕೆ ಅಲ್ಲ’ ಎಂದು ಸೆರಂ ಸಂಸ್ಥೆಯು ಸ್ಪಷ್ಟಪಡಿಸಿದೆ.

‘ಈ ಆರೋಪದ ಸಂಬಂಧ ಪರಿಶೀಲನೆ ನಡೆಸಲಾಗಿದೆ. ಕ್ಲಿನಿಕಲ್ ಟ್ರಯಲ್‌ನಲ್ಲಿ ಪಡೆದ ಲಸಿಕೆಗೂ, ಆ ವ್ಯಕ್ತಿಯಲ್ಲಿ ಕಾಣಿಸಿಕೊಂಡ ನರಸಂಬಂಧಿ ಸಮಸ್ಯೆಯ ಮಧ್ಯೆ ಯಾವುದೇ ಸಂಬಂಧವಿಲ್ಲ’ ಎಂದು ಆರೋಗ್ಯ ಸಚಿವಾಲಯದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT