ಗುರುವಾರ , ಮಾರ್ಚ್ 30, 2023
23 °C

ಮೀನುಗಾರರ ಮೇಲಿನ ಪಾಕಿಸ್ತಾನದ ಅಪ್ರಚೋದಿತ ದಾಳಿಯನ್ನು ಗಂಭೀರವಾಗಿ ಪರಿಗಣಿಸಿದ ಭಾರತ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ನವದೆಹಲಿ:  ಗುಜರಾತ್‌ ಕರಾವಳಿ ತೀರದಲ್ಲಿ ಶನಿವಾರ ಪಾಕಿಸ್ತಾನ ಕಡಲ ಭದ್ರತಾ ಪಡೆ ನಡೆಸಿದ ‘ಅಪ್ರಚೋದಿತ  ಗುಂಡಿನ ದಾಳಿ’ಯಲ್ಲಿ ಮಹಾರಾಷ್ಟ್ರದ ಮೀನುಗಾರರೊಬ್ಬರು ಮೃತಪಟ್ಟ ವಿಷಯವನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದು ಮೂಲಗಳು ತಿಳಿಸಿವೆ.

 ಕೇಂದ್ರ ಸರ್ಕಾರವು ರಾಜತಾಂತ್ರಿಕ ಮಾರ್ಗಗಳ ಮೂಲಕ ವಿಷಯವನ್ನು ಪಾಕಿಸ್ತಾನ ಸರ್ಕಾರದ ಬಳಿಗೆ ಕೊಂಡೊಯ್ಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಗುಜರಾತ್‌ನ ಓಖಾದಿಂದ ಹೊರಟಿದ್ದ‘ಜಲ್‌ಪರಿ’ ಎಂಬ ಹೆಸರಿನ ಮೀನುಗಾರಿಕಾ ದೋಣಿಯ ಮೇಲೆ ಪಾಕಿಸ್ತಾನದ ಕಡಲ ಭದ್ರತಾ ಪಡೆ (ಪಿಎಂಎಸ್‌ಎ) ಸಿಬ್ಬಂದಿ ನಡೆಸಿದ ದಾಳಿಯಲ್ಲಿ ಶ್ರೀಧರ್ ರಮೇಶ್ ಚಾಮ್ರೆ (32) ಎಂಬುವವರು ಮೃತಪಟ್ಟಿದ್ದರು. ಚಾಮ್ರೆ ಮಹಾರಾಷ್ಟ್ರದ ಥಾಣೆಯವರು. ಪಿಎಂಎಸ್‌ಎ ನಡೆಸಿದ ಗುಂಡಿನ ದಾಳಿಯಲ್ಲಿ ಮತ್ತೊಬ್ಬ ಮೀನುಗಾರ ಕೂಡ ಗಾಯಗೊಂಡಿದ್ದಾರೆ ಎಂದು ಗೊತ್ತಾಗಿದೆ. ಈ ಕುರಿತು ‘ಡೆಕ್ಕನ್‌ ಹೆರಾಲ್ಡ್‌’ ವರದಿ ಮಾಡಿದೆ. 

ಈ ಮಧ್ಯೆ, ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ‘ಭಾರತೀಯ ಮೀನುಗಾರಿಕಾ ದೋಣಿ ಪಾಕಿಸ್ತಾನದ ಜಲ ಪ್ರದೇಶವನ್ನು ‘ಕಾನೂನುಬಾಹಿರವಾಗಿ ಅತಿಕ್ರಮಿಸಿತ್ತು’ ಎಂದು ಹೇಳಿದೆ. ಪಿಎಂಎಸ್‌ಎ ಸಿಬ್ಬಂದಿ ದೋಣಿಗೆ ಎಚ್ಚರಿಕೆ ನೀಡಿದರು. ಭಾರತದ ಜಲ ಪ್ರದೇಶಕ್ಕೆ ಹಿಂದಿರುಗುವಂತೆಯೂ, ಮಾರ್ಗ ಬದಲಾಯಿಸುವಂತೆಯೂ ತಿಳಿಸಿದರು.  ಆದರೆ ದೋಣಿ ಮಾರ್ಗವನ್ನು ಬದಲಾಯಿಸಲಿಲ್ಲ. ಹೀಗಾಗಿ ಪಿಎಂಎಸ್‌ಎ ಸಿಬ್ಬಂದಿ ಗುಂಡು ಹಾರಿಸಬೇಕಾಯಿತು ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. 

ದೋಣಿಯಲ್ಲಿದ್ದ ಇತರ ಆರು ಭಾರತೀಯರನ್ನು ಸಿಬ್ಬಂದಿ ಬಂಧಿಸಿದ್ದಾರೆ ಎಂದು ಪಾಕಿಸ್ತಾನ ಹೇಳಿಕೊಂಡಿದೆ. ಆದರೆ, ಬಂಧನವನ್ನು ಭಾರತ ಸರ್ಕಾರ ಖಚಿತಪಡಿಸಿಲ್ಲ. 

‘ನಾವು ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ವಿಷಯವನ್ನು ಪಾಕಿಸ್ತಾನದೊಂದಿಗೆ ರಾಜತಾಂತ್ರಿಕವಾಗಿ ಚರ್ಚಿಸಲಿದ್ದೇವೆ. ಪ್ರಕರಣದ ತನಿಖೆ ನಡೆಯುತ್ತಿದೆ,‘ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು