ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಆರ್ಥಿಕ ವೇದಿಕೆಗೆ ಚಾಲನೆ: ಚೀನಾದ ಪ್ರಾಬಲ್ಯ ತಡೆ ಉದ್ದೇಶ

ಅಮೆರಿಕ, ಇಂಡೊ–ಪೆಸಿಫಿಕ್‌ ದೇಶಗಳ ಕೂಟ
Last Updated 23 ಮೇ 2022, 19:40 IST
ಅಕ್ಷರ ಗಾತ್ರ

ನವದೆಹಲಿ: ‘ಸಮೃದ್ಧಿಗಾಗಿ ಇಂಡೊ–ಪೆಸಿಫಿಕ್‌ ಆರ್ಥಿಕ ವೇದಿಕೆ’ಯನ್ನು (ಐಪಿಇಎಫ್‌) ಸೋಮವಾರ ಆರಂಭಿಸಲಾಗಿದ್ದು, ಭಾರತ, ಅಮೆರಿಕ ಮತ್ತು ಇತರ 10 ದೇಶಗಳು ಇದರ ಸದಸ್ಯ ರಾಷ್ಟ್ರಗಳಾಗಿವೆ. ಸದಸ್ಯ ದೇಶಗಳ ನಡುವಣ ಆರ್ಥಿಕ ಸಂಬಂಧವನ್ನು ಬಲಪಡಿಸುವುದು ಈ ವೇದಿಕೆ ಸ್ಥಾಪನೆಯ ಘೋಷಿತ ಉದ್ದೇಶ. ಆದರೆ, ಈ ಪ್ರದೇಶದಲ್ಲಿ ಚೀನಾದ ಆರ್ಥಿಕ ಪ್ರಭಾವವನ್ನು ತಡೆಯುವುದು ಹಿನ್ನೆಲೆಯಲ್ಲಿರುವ ಉದ್ದೇಶ ಎಂದು ಹೇಳಲಾಗಿದೆ.

ಅಮೆರಿಕದ ಉಮೇದಿನಂತೆ ಈ ವೇದಿಕೆ ಆರಂಭವಾಗಿದೆ. ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿ ಚೀನಾದ ವ್ಯಾಪಾರ ಪ್ರಾಬಲ್ಯ ತಗ್ಗಿಸಲು ಇಲ್ಲಿನ ದೇಶಗಳಿಗೆ ಬಲವಾದ ಆರ್ಥಿಕಕಾರ್ಯಸೂಚಿಯನ್ನು ಅಮೆರಿಕ ರೂಪಿಸಿದೆ.

‘ಜಾಗತಿಕ ಆರ್ಥಿಕ ಪ್ರಗತಿಯ ಎಂಜಿನ್‌ ಆಗಿ ಇಂಡೊ–ಪೆಸಿಫಿಕ್‌ ಪ್ರದೇಶವನ್ನು ರೂಪಿಸುವ ಸಾಮೂಹಿಕ ಇಚ್ಛೆಯೇ ಐಪಿಇಎಫ್‌ ಉದ್ದೇಶವಾಗಿದೆ. ಚಾರಿತ್ರಿಕವಾಗಿ, ಈ ಪ್ರದೇಶದಲ್ಲಿ ನಡೆಯುವ ವ್ಯಾಪಾರದ ಕೇಂದ್ರ ಸ್ಥಾನದಲ್ಲಿ ಭಾರತ ಇದೆ. ಜಗತ್ತಿನ ಅತ್ಯಂತ ಹಳೆಯ ವಾಣಿಜ್ಯ ಬಂದರು ಗುಜರಾತ್‌ನ ಲೊಥಲ್‌ನಲ್ಲಿ ಇತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಮತ್ತು ಜಪಾನ್‌ನ ಪ್ರಧಾನಿ ಫುಮಿಯೊ ಕಿಶಿಡಾ ಅವರು ವೇದಿಕೆ‌ಗೆ ಚಾಲನೆ ಕೊಡುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇಂಡೊ–ಪೆಸಿಫಿಕ್‌ ಪ್ರದೇಶದ ದೇಶಗಳ ನೆಲೆಗಟ್ಟು ಗಟ್ಟಿಗೊಳಿಸುವುದು, ಸುಸ್ಥಿರತೆ ಕಾಯ್ದುಕೊಳ್ಳುವುದು, ಎಲ್ಲರನ್ನೂ ಒಳಗೊಳ್ಳುವುದು,ಆರ್ಥಿಕ ಪ್ರಗತಿ, ನ್ಯಾಯಬದ್ಧತೆ ಮತ್ತು ಸ್ಪರ್ಧಾತ್ಮಕತೆ ಹೆಚ್ಚಿಸುವುದು ವೇದಿಕೆಯು ಇರಿಸಿಕೊಂಡಿರುವ ಗುರಿ ಎಂದು ವಿದೇಶಾಂಗ ಸಚಿವಾಲಯವು ಹೇಳಿದೆ.

ಜಗತ್ತಿನ ಜನಸಂಖ್ಯೆಯ ಶೇ 60ರಷ್ಟು ಇಂಡೊ–ಪೆಸಿಫಿಕ್‌ ಪ್ರದೇಶದಲ್ಲಿಯೇ ಇದೆ. ಹಾಗಾಗಿ ಮುಂದಿನ 30ವರ್ಷಗಳವರೆಗೆ ಜಾಗತಿಕ ಪ್ರಗತಿಗೆ ಈ ಪ್ರದೇಶದ ಕೊಡುಗೆಯೇ ಅತ್ಯಂತ ಹೆಚ್ಚು ಇರಲಿದೆ.

‘ಮುಕ್ತ, ನ್ಯಾಯಸಮ್ಮತ, ಎಲ್ಲರನ್ನೂ ಒಳಗೊಂಡ, ಪರಸ್ಪರ ಸಂಪ‍ರ್ಕಿತ, ಪುಟಿದೇಳಬಲ್ಲ, ಸುರಕ್ಷಿತ ಮತ್ತು ಸಮೃದ್ಧ ಇಂಡೊ–ಪೆಸಿಫಿಕ್ ಪ್ರದೇಶಕ್ಕೆ ಸುಸ್ಥಿರ ಮತ್ತು ಎಲ್ಲರನ್ನೂ ಒಳಗೊಂಡ ಆರ್ಥಿಕ ಪ್ರಗತಿಯ ಸಾಮರ್ಥ್ಯ ಇದೆ’ ಎಂದು ವೇದಿಕೆಗೆ ಚಾಲನೆ ನೀಡಿದ ಬಳಿಕ ನೀಡಿದ ಜಂಟಿ ಹೇಳಿಕೆಯಲ್ಲಿ ವಿವರಿಸಲಾಗಿದೆ.

ಟ್ರಾನ್ಸ್‌–ಪೆಸಿಫಿಕ್‌ ಪಾರ್ಟ್‌ನರ್‌ಶಿಪ್‌ ಎಂಬ ವೇದಿಕೆಯೊಂದು ಹಿಂದೆ ಇತ್ತು. ಆದರೆ, ಐದು ವರ್ಷಗಳ ಹಿಂದೆ, ಅಮೆರಿಕದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಈ ವೇದಿಕೆಯಿಂದ ಹೊರನಡೆದಿದ್ದರು. ಟ್ರಂಪ್ ಅವರಿಗೂ ಹಿಂದೆ ಅಮೆರಿಕದ ಅಧ್ಯಕ್ಷರಾಗಿದ್ದ ಬರಾಕ್‌ ಒಬಾಮಾ ಅವರು ಈ ವೇದಿಕೆಯನ್ನು ರೂಪಿಸಿದ್ದರು. ಆಗ, ಬೈಡನ್‌ ಅವರು ಉಪಾಧ್ಯಕ್ಷರಾಗಿದ್ದರು.

ಸದಸ್ಯ ರಾಷ್ಟ್ರಗಳು ಯಾವುವು?
ಭಾರತ, ಅಮೆರಿಕ, ಆಸ್ಟ್ರೇಲಿಯಾ, ಬ್ರೂನೈ, ಇಂಡೊನೇಷ್ಯಾ, ಜಪಾನ್‌, ದಕ್ಷಿಣ ಕೊರಿಯಾ, ಮಲೇಷ್ಯಾ, ನ್ಯೂಜಿಲೆಂಡ್‌, ಫಿಲಿಪ್ಪೀನ್ಸ್‌, ಥಾ‌ಯ್ಲೆಂಡ್‌ ಮತ್ತು ವಿಯೆಟ್ನಾಂ

ಭಾರತದ ಬೇಡಿಕೆಗೆ ಒಪ್ಪಿಗೆ
ವೇದಿಕೆಗೆ ಸಂಬಂಧಿಸಿದ ಹಲವು ವಿಚಾರಗಳ ಬಗ್ಗೆ ಭಾರತ ಮತ್ತು ಅಮೆರಿಕದ ಅಧಿಕಾರಿಗಳ ನಡುವೆ ಹಲವು ದಿನಗಳಿಂದ ಸಮಾಲೋಚನೆ ನಡೆದಿದೆ.

ಈ ವೇದಿಕೆಯು ಈಗಲೂ ಸಮಾಲೋಚನಾ ಹಂತದಲ್ಲಿಯೇ ಇದೆ. ಇತರ ದೇಶಗಳು ಸೇರ್ಪಡೆಯಾಗುವ ಅವಕಾಶ ಮುಕ್ತವಾಗಿದೆ ಎಂಬುದನ್ನು ಬಿಂಬಿಸುವಂತೆ ಒಪ್ಪಂದವನ್ನು ಬದಲಾಯಿಸಲಾಗಿದೆ. ಭಾರತದ ಬೇಡಿಕೆಯಂತೆ ಈ ಬದಲಾವಣೆ ಮಾಡಲಾಗಿದೆ. ಇದಾದ ಬಳಿಕವೇ ಭಾರತವು ಒಪ್ಪಂದಕ್ಕೆ ಸಹಿ ಹಾಕಿದೆ.

ಚೀನಾದ ವೇದಿಕೆಯೂ ಇದೆ
ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಎಂಬ ವೇದಿಕೆಯನ್ನು ಚೀನಾ ನೇತೃತ್ವದಲ್ಲಿ ಕೆಲ ತಿಂಗಳ ಹಿಂದೆ ಆರಂಭಿಸಲಾಗಿದೆ. ಈ ವೇದಿಕೆಯಲ್ಲಿ ಏಷ್ಯಾ–ಪೆಸಿಫಿಕ್‌ ಪ‍್ರದೇಶದ 15 ದೇಶಗಳು ಇವೆ. ಚೀನಾ ನೇತೃತ್ವದ ವೇದಿಕೆಯಲ್ಲಿ ಇರುವ ಹಲವು ದೇಶಗಳು ಅಮೆರಿಕವು ಹೊಸದಾಗಿ ಆರಂಭಿಸಿದ ವೇದಿಕೆಯಲ್ಲಿಯೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT