ಬುಧವಾರ, ನವೆಂಬರ್ 25, 2020
18 °C

ಚೀನಾದೊಂದಿಗಿನ ಗಡಿ ಸಂಘರ್ಷ ಕೊನೆಗೊಳಿಸಲು ಭಾರತ ಬಯಸಿದೆ: ಸಚಿವ ರಾಜನಾಥ್ ಸಿಂಗ್

ಪಿಟಿಐ Updated:

ಅಕ್ಷರ ಗಾತ್ರ : | |

Rajnath Singh

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗಿನ ಗಡಿ ಉದ್ವಿಗ್ನತೆಯನ್ನು ಕೊನೆಗೊಳಿಸಲು ಭಾರತ ಬಯಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಹೇಳಿದ್ದಾರೆ. ಆದರೆ ಅದೇ ವೇಳೆ ದೇಶದ ಒಂದು ಇಂಚು ಭೂಮಿಯನ್ನು ಸಹ ಯಾರೊಬ್ಬರು ಅತಿಕ್ರಮಿಸಲು ಭಾರತೀಯ ಸೈನಿಕರು ಬಿಡುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ.

ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಜಿಲ್ಲೆಯ ಭಾರತೀಯ ಸೇನೆಯ 33 ಕಾರ್ಪ್ಸ್‌ನ ಸುಕ್ನಾ ಮೂಲದ ಪ್ರಧಾನ ಕಚೇರಿಯಲ್ಲಿ ನಡೆದ ಶಸ್ತ್ರಾಸ್ತ್ರಗಳ ಪೂಜೆಯ ನಂತರ ಮಾತನಾಡಿದರು.

ಸಿಕ್ಕಿಂನಲ್ಲಿನ ನೈಜ ನಿಯಂತ್ರಣ ರೇಖೆಯ (ಎಲ್‌ಎಸಿ) ಸಮೀಪವಿರುವ ಎತ್ತರದ ಗಡಿ ಪ್ರದೇಶವಾದ ಶೆರಥಾಂಗ್‌ನಲ್ಲಿ ರಕ್ಷಣಾ ಸಚಿವರು ಪೂಜೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಅಲ್ಲಿಗೆ ಹೋಗಲು ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚೀನಾದೊಂದಿಗೆ ನಡೆಯುತ್ತಿರುವ ಗಡಿ ಉದ್ವೇಗವನ್ನು ಕೊನೆಗೊಳಿಸಲು ಮತ್ತು ಶಾಂತಿಯನ್ನು ಪುನಃಸ್ಥಾಪಿಸಲು ಭಾರತ ಬಯಸಿದೆ. ಇದು ನಮ್ಮ ಉದ್ದೇಶ. ಆದರೆ ಕೆಲವೊಮ್ಮೆ, ಕೆಲವು ದುಷ್ಕೃತ್ಯಗಳು ನಡೆಯುತ್ತಲೇ ಇರುತ್ತವೆ. ನಮ್ಮ ಸೈನಿಕರು ನಮ್ಮ ಭೂಮಿಯ ಒಂದು ಇಂಚನ್ನು ಕೂಡ ಯಾರೊಬ್ಬರು ಆಕ್ರಮಿಸಲು ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ನನಗೆ ತುಂಬಾ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 

ಸಿಕ್ಕಿಂ ವಲಯದಲ್ಲಿನ ಎಲ್‌ಎಸಿ ಬಳಿ ರಕ್ಷಣಾ ಸಚಿವರು ಶಸ್ತ್ರ ಪೂಜೆಯನ್ನು ನೆರವೇರಿಸುವಾಗ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ. ನರವಾನೆ ಮತ್ತು ಸೇನೆಯ ಹಲವಾರು ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. ಪೂಜೆ ನಂತರ, ಸಿಂಗ್ ಸುಕ್ನಾದಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಸಿಕ್ಕಿಂನ ಹೊಸ ರಸ್ತೆಯನ್ನು ಉದ್ಘಾಟಿಸಿದರು.

ಲಡಾಖ್‌ನ ಭಾರತ-ಚೀನಾ ಗಡಿಯಲ್ಲಿ ಇತ್ತೀಚೆಗೆ ಏನಾದರೂ ಸಂಭವಿಸಿದರೂ ಭಾರತೀಯ ಸೈನಿಕರ ಧೈರ್ಯ ಮತ್ತು ಕಾರ್ಯಗಳನ್ನು ಇತಿಹಾಸಕಾರರು ಸುವರ್ಣ ಅಕ್ಷರಗಳಲ್ಲಿ ಬರೆದಿಡುತ್ತಾರೆ ಎಂದು ಎಂದು ಆತ್ಮವಿಶ್ವಾಸದಿಂದ ಮತ್ತು ದೃಢವಾದ ಮಾಹಿತಿಯ ಆಧಾರದ ಮೇಲೆ ನಾನು ಹೇಳಬಲ್ಲೆ ಎಂದು ಹೇಳಿದರು.

ಸಿಕ್ಕಿಂ, ಅರುಣಾಚಲ ಪ್ರದೇಶ ಸೆಕ್ಟರ್‌ಗಳು ಸೇರಿದಂತೆ ಸುಮಾರು 3,500 ಕಿ.ಮೀ ಉದ್ದದ ಎಲ್‌ಎಸಿಯಾದ್ಯಂತ ಭಾರತೀಯ ಸೇನೆಯು ಯೋಧರ ಹಾಗೂ ಶಸ್ತ್ರಾಸ್ತ್ರಗಳ ನಿಯೋಜನೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಯೋಧರ ಜತೆ ದಸರಾ ಹಬ್ಬ ಆಚರಣೆ ಹಾಗೂ ಚೀನಾ ಜತೆಗಿನ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಸೇನಾ ಸನ್ನದ್ಧತೆಯ ಬಗ್ಗೆ ಪರಿಶೀಲನೆ ನಡೆಸಲು ಸಿಂಗ್ ಎರಡು ದಿನಗಳ ಪಶ್ಚಿಮ ಬಂಗಾಳ ಹಾಗೂ ಸಿಕ್ಕಿಂ ಭೇಟಿ ಹಮ್ಮಿಕೊಂಡಿದ್ದಾರೆ.

ಜೂನ್ 15 ರಂದು ಪೂರ್ವ ಲಡಾಕ್‌ನ ಗಾಲ್ವನ್ ಕಣಿವೆಯಲ್ಲಿ ಚೀನಾದ ಸೈನ್ಯದೊಂದಿಗೆ ಹೋರಾಡುತ್ತಿರುವಾಗ ಇಪ್ಪತ್ತು ಭಾರತೀಯ ಸೈನಿಕರು ತಮ್ಮ ಪ್ರಾಣವನ್ನೇ ಅರ್ಪಿಸಿದರು. ಅಂದಿನಿಂದ ಉಭಯ ದೇಶಗಳ ನಡುವಿನ ಗಡಿ ಉದ್ವಿಗ್ನತೆಯು ಹೆಚ್ಚಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು