ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂರ್ವ ಲಡಾಖ್ ಗಡಿ: ನಿರ್ಣಾಯಕ ಪ್ರದೇಶಗಳಲ್ಲಿ ಪ್ರಾಬಲ್ಯ ಹೆಚ್ಚಿಸಿದ ಭಾರತೀಯ ಸೇನೆ

Last Updated 11 ಸೆಪ್ಟೆಂಬರ್ 2020, 5:33 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಖ್‌ ಗಡಿಯ ನಿರ್ಣಾಯಕ ಪರ್ವತ ಪ್ರದೇಶಗಳಲ್ಲಿ ಭಾರತೀಯ ಸೇನೆ ಪ್ರಾಬಲ್ಯ ಹೆಚ್ಚಿಸಿದೆ. ಪಾಂಗಾಂಗ್ ಸರೋವರ ಬಳಿ ಚೀನಾ ಸೇನೆಯ ವಶದಲ್ಲಿರುವ ಪ್ರದೇಶಗಳಲ್ಲಿನ ಚಟುವಟಿಕೆಗಳ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿ ಇದು ಮುಖ್ಯವಾದ್ದಾಗಿದೆ. ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ತಿಳಿಗೊಳಿಸಲು ಕಮಾಂಡರ್ ಮತ್ತು ಕಮಾಂಡಿಂಗ್ ಆಫೀಸರ್ ಮಟ್ಟದ ಮಾತುಕತೆ ಪ್ರಗತಿಯಲ್ಲಿರುವ ಮಧ್ಯೆಯೇ ಮುಖ್ಯ ಪ್ರದೇಶಗಳಲ್ಲಿ ಸೇನೆ ಪ್ರಾಬಲ್ಯ ಹೆಚ್ಚಿಸಿದೆ ಎಂದು ಮೂಲಗಳು ತಿಳಿಸಿವೆ.

ಚೀನಾ ಸೇನೆಯ ವಶದಲ್ಲಿರುವ ‘ಫಿಂಗರ್ 4’ ಪ್ರದೇಶದ ಮೇಲೆ ಹದ್ದಿನಗಣ್ಣಿಡಲು ಪಾಂಗಾಗ್ ಸರೋವರದ ಸುತ್ತಲಿನ ಪರ್ವತ ಪ್ರದೇಶಗಳು ಮತ್ತು ವ್ಯೂಹಾತ್ಮಕ ಸ್ಥಳಗಳಲ್ಲಿ ಹೆಚ್ಚಿನ ಪಡೆಗಳನ್ನು ನಿಯೋಜಿಸಲಾಗಿದೆ.

ಸದ್ಯ ಪಾಂಗಾಂಗ್ ಸರೋವರದ ಉತ್ತರ ದಂಡೆಯ ‘ಫಿಂಗರ್ 4’ರಿಂದ ‘ಫಿಂಗರ್ 8’ರ ವರೆಗಿನ ಪ್ರದೇಶಗಳಲ್ಲಿ ಚೀನಾ ಸೇನೆ ಇದೆ. ವ್ಯೂಹಾತ್ಮಕವಾಗಿ ಬಹುಮುಖ್ಯವಾಗಿರುವ, ದಕ್ಷಿಣ ದಂಡೆಯ ರೇಝಾಂಗ್–ಲಾ ಮತ್ತು ರೇಖಿನ್–ಲಾದ ಪರ್ವತ ಪ್ರದೇಶಗಳ ಮೇಲೆ ಭಾರತೀಯ ಸೇನೆ ಆಗಸ್ಟ್ ಅಂತ್ಯದ ವೇಳೆಗೆ ಸಂಪೂರ್ಣ ಹಿಡಿತ ಸಾಧಿಸಿದೆ.

ಈ ಮಧ್ಯೆ, ಉಭಯ ಸೇನೆಗಳು ಬ್ರಿಗೇಡ್ ಕಮಾಂಡರ್ ಮತ್ತು ಕಮಾಂಡಿಂಗ್ ಆಫೀಸರ್ ಮಟ್ಟದಲ್ಲಿ ಪ್ರತ್ಯೇಕ ಮಾತುಕತೆ ನಡೆಸಿವೆ. ಚುಶುಲ್ ಪ‍್ರದೇಶದಲ್ಲಿ ಮಾತುಕತೆ ನಡೆದಿದೆ. ಉದ್ವಿಗ್ನ ಪರಿಸ್ಥಿತಿಯನ್ನು ತಿಳಿಗೊಳಿಸುವುದೇ ಮಾತುಕತೆಯ ಮುಖ್ಯ ಉದ್ದೇಶವಾಗಿತ್ತು ಎಂದೂ ಮೂಲಗಳು ತಿಳಿಸಿವೆ.

ಗಡಿಯಲ್ಲಿ ಯಥಾಸ್ಥಿತಿ ಉಲ್ಲಂಘಿಸಲು ಚೀನಾ ಸೇನೆ ಯತ್ನಿಸಿದೆ. ಅದನ್ನು ತಡೆಯಲು ಮುಂದಾದಾಗ ಗಾಳಿಯಲ್ಲಿ ಗುಂಡು ಹಾರಿಸಿದೆ ಎಂದು ಭಾರತೀಯ ಸೇನೆ ಇತ್ತೀಚೆಗೆ ಆರೋಪಿಸಿತ್ತು. ಭಾರತೀಯ ಸೇನೆ ಚೀನಾ ಪಡೆಗಳತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ಚೀನಾ ಆರೋಪಿಸಿತ್ತು. ಘಟನೆ ಬಳಿಕ ಗಡಿಯಲ್ಲಿನ ಉದ್ವಿಗ್ನ ಪರಿಸ್ಥಿತಿ ಹೆಚ್ಚಾಗಿದೆ.

ಒಪ್ಪಂದಗಳಿಗೆ ಬದ್ಧತೆ ತೋರಬೇಕು: ಭಾರತ ಮತ್ತು ಚೀನಾದ ವಿದೇಶಾಂಗ ಸಚಿವರಾದ ಎಸ್‌. ಜೈಶಂಕರ್‌ ಮತ್ತು ವಾಂಗ್ ಯಿ ಅವರು ಮಾಸ್ಕೊದಲ್ಲಿ ಗುರುವಾರ ಮಾತುಕತೆ ನಡೆಸಿದ್ದಾರೆ. ಈ ವೇಳೆ, ಗಡಿಯಲ್ಲಿನ ಸಂಘರ್ಷ ತಪ್ಪಿಸುವುದಕ್ಕಾಗಿ ದ್ವಿಪಕ್ಷೀಯವಾದ ಎಲ್ಲ ಒಪ್ಪಂದಗಳಿಗೆ ಚೀನಾವು ಕಟ್ಟುನಿಟ್ಟಿನ ಬದ್ಧತೆ ತೋರಬೇಕು ವಾಂಗ್ ಯಿ ಅವರಿಗೆ ಜೈಶಂಕರ್‌ ಹೇಳಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT