ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಂ ಕೇರ್ಸ್‌ ನಿಧಿ: ವಿದೇಶದಲ್ಲೂ ಪ್ರಚಾರ

Last Updated 17 ಜನವರಿ 2021, 19:30 IST
ಅಕ್ಷರ ಗಾತ್ರ

ನವದೆಹಲಿ: ಇಸ್ಲಾಮಾಬಾದ್‌ ಮತ್ತು ಬೀಜಿಂಗ್‌ನಲ್ಲಿ ಇರುವ ಭಾರತದ ರಾಯಭಾರ ಕಚೇರಿಯ ವೆಬ್‌ಸೈಟ್‌ ಮತ್ತು ಸಾಮಾಜಿಕ ಜಾಲ ತಾಣ ಖಾತೆಗಳ ಮೂಲಕ ಪಿಎಂ ಕೇರ್ಸ್‌ ನಿಧಿಗೆ ಪ್ರಚಾರ ನೀಡಲಾಗಿದೆ. ಆದರೆ, ದೇಣಿಗೆ ನೀಡಬಹುದಾದ ವ್ಯಕ್ತಿಗಳನ್ನು ಇಲ್ಲಿ ಸಂಪರ್ಕಿಸಿಲ್ಲ, ಯಾರಿಂದಲೂ ದೇಣಿಗೆ ಬಂದಿಲ್ಲ ಎಂದು ಮಾಹಿತಿ ಹಕ್ಕು ಕಾಯ್ದೆ ಅಡಿ ಕೇಳಲಾದ ಪ್ರಶ್ನೆಗೆ ಉತ್ತರ ನೀಡಲಾಗಿದೆ.

ಮಾಹಿತಿ ಹಕ್ಕು ಕಾರ್ಯಕರ್ತ, ನಿವೃತ್ತ ಕಮೊಡೋರ್‌ ಲೋಕೇಶ್‌ ಬಾತ್ರಾ ಅವರು ವಿವಿಧ ದೇಶಗಳಲ್ಲಿರುವ 25 ರಾಯಭಾರ ಕಚೇರಿಗಳಿಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸಿದ್ದರು. ತಮ್ಮ ವೆಬ್‌ಸೈಟ್‌ ಮತ್ತು ಸಾಮಾಜಿಕ ಜಾಲತಾಣ ಖಾತೆಗಳನ್ನು ಬಳಸಿಕೊಂಡು ಪಿಎಂ ಕೇರ್ಸ್‌ ನಿಧಿಗೆ ಪ್ರಚಾರ ನೀಡಿದ್ದೇವೆ ಎಂದು ಹೆಚ್ಚಿನ ರಾಯಭಾರ ಕಚೇರಿಗಳು ತಿಳಿಸಿವೆ. ಕೆಲವೇ ಕೆಲವು ರಾಯಭಾರ ಕಚೇರಿಗಳು ಮಾತ್ರ ಭಾರತ ಮೂಲದ ವ್ಯಕ್ತಿಗಳನ್ನು ಸಂಪರ್ಕಿಸಿ, ಅವರಿಗೆ ನಿಧಿಯ ಬಗ್ಗೆ ಮಾಹಿತಿ ನೀಡಲು ಯತ್ನಿಸಿವೆ.

ಪಿಎಂ ಕೇರ್ಸ್‌ಗೆ ಪ್ರಚಾರ ನೀಡಲು, ದೇಣಿಗೆ ಸಂಗ್ರಹಿಸಲು ಯಾವ ವಿಧಾನ ಅನುಸರಿಸಲಾಗಿದೆ, ಯಾರನ್ನೆಲ್ಲ ಸಂಪರ್ಕಿಸಲಾಗಿದೆ ಎಂದು ಬಾತ್ರಾ ಅವರು ತಮ್ಮ ಅರ್ಜಿಯಲ್ಲಿ ಮಾಹಿತಿ ಕೇಳಿದ್ದರು.

ನಿಧಿಗೆ ಸಂಬಂಧಿಸಿದ ಮಾಹಿತಿ ಯನ್ನು ಪ್ರಸಾರ ಮಾಡುವುದಕ್ಕೆ ತನ್ನ ಸಾಮಾಜಿಕ ಜಾಲತಾಣ ಖಾತೆಯನ್ನು ಬಳಸಿಕೊಂಡಿರುವುದಾಗಿ ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನ್‌ ಕಚೇರಿ ತಿಳಿಸಿದೆ. ಆದರೆ, ಪಿಎಂ ಕೇರ್ಸ್‌ ನಿಧಿಗೆ ದೇಣಿಗೆ ನೀಡುವಂತೆ ವ್ಯಕ್ತಿಗಳು, ಸಂಘಟನೆಗಳು ಮತ್ತು ಅನಿವಾಸಿ ಭಾರತೀಯರನ್ನು (ಎನ್‌ಆರ್‌ಐ) ಕೋರಿಲ್ಲ. ವ್ಯಕ್ತಿಗಳು, ಸಂಘಟನೆಗಳು ಮತ್ತು ಎನ್‌ಆರ್‌ಐಗಳು ದೇಣಿಗೆಯನ್ನೂ ನೀಡಿಲ್ಲ ಎಂದು ಹೇಳಿದೆ.

ದೇಣಿಗೆ ಸಂಗ್ರಹ ಅಭಿಯಾನಕ್ಕೆ ಟ್ವಿಟರ್‌, ಫೇಸ್‌ಬುಕ್‌, ವಿ–ಚಾಟ್‌ ಮತ್ತು ವೈಬೊದಂತಹ ಸಾಮಾಜಿಕ ಜಾಲತಾಣಗಳು ಹಾಗೂ ವೆಬ್‌ಸೈಟ್‌ ಅನ್ನು ಬಳಸಿಕೊಳ್ಳಲಾಗಿದೆ ಎಂದು ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರ ಕಚೇರಿ ಹೇಳಿದೆ. ಆದರೆ, ಪಿಎಂ ಕೇರ್ಸ್‌ಗೆ ನಿಧಿ ಸಂಗ್ರಹಿಸಲು ಯಾರನ್ನೆಲ್ಲ ಸಂಪರ್ಕಿಸಲಾಗಿದೆ ಎಂಬ ಮಾಹಿತಿಯನ್ನು ಕಚೇರಿಯು ನೀಡಿಲ್ಲ.

ದೇಣಿಗೆ ಪಡೆಯುವುದಕ್ಕಾಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ಸಂಪರ್ಕಿಸಲಾಗಿದೆಯೇ ಎಂಬ ಪ್ರಶ್ನೆಗೆ ಆರು ರಾಯಭಾರ ಕಚೇರಿಗಳು ಉತ್ತರಿಸಿಲ್ಲ. ದೇಣಿಗೆಗಾಗಿ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳನ್ನು ಸಂಪರ್ಕಿಸಿಲ್ಲ ಎಂದು ಪ್ಯಾರಿಸ್‌, ರಿಯಾಧ್‌‌, ಕ್ಯಾನ್‌ಬೆರ, ಕೋಪೆನ್‌ಹೇಗನ್‌, ಮಾಸ್ಕೊ ಮತ್ತು ವೆಲ್ಲಿಂಗ್ಟನ್‌ನಲ್ಲಿರುವ ರಾಯಭಾರ ಕಚೇರಿಗಳು ತಿಳಿಸಿವೆ.

ಜಪಾನ್‌ ಕಂಪನಿಯ ದೇಣಿಗೆ ಇಂಗಿತ

ಜಪಾನ್‌ನ ನಿಸ್ಸಿ ಎಎಸ್‌ಬಿ ಮಷಿನ್‌ ಕಂಪನಿಯು ಅಲ್ಲಿರುವ ಭಾರತದ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ದೇಣಿಗೆ ನೀಡಲು ಆಸಕ್ತಿ ಇದೆ ಎಂದು ಹೇಳಿತ್ತು. ಪಿಎಂ ಕೇರ್ಸ್‌ಗೆ ಸಂಬಂಧಿಸಿ ಕಂಪನಿಯು ಕಳೆದ ಏಪ್ರಿಲ್‌ನಲ್ಲಿ ಕಳುಹಿಸಿದ್ದ ಇ–ಮೇಲ್‌ ಸಂದೇಶವನ್ನೂ ರಾಯಭಾರ ಕಚೇರಿಯು ಹಂಚಿಕೊಂಡಿದೆ. ಮಹಾರಾಷ್ಟ್ರದಲ್ಲಿ ತನ್ನ ತಯಾರಿಕಾ ಚಟುವಟಿಕೆ ಪುನರಾರಂಭಿಸಲು ನೆರವಾಗಿದ್ದಕ್ಕೆ ಈ ಸಂದೇಶದಲ್ಲಿ ಕಂಪನಿಯು ಕೃತಜ್ಞತೆಯನ್ನೂ ಅರ್ಪಿಸಿದೆ.

ಕತಾರ್‌ನ ನೆರವು: ಕತಾರ್‌ನ ಮೂರು ಕಂಪನಿಗಳು ಅಥವಾ ಅದರ ಪ್ರತಿನಿಧಿಗಳು ಪಿಎಂ ಕೇರ್ಸ್‌ಗೆ ನಿಧಿಗೆ ದೇಣಿಗೆ ನೀಡಿದ್ದಾರೆ ಎಂದು ಆ ದೇಶದಲ್ಲಿರುವ ರಾಯಭಾರ ಕಚೇರಿ ತಿಳಿಸಿದೆ. ಕಚೇರಿಯ 22 ಸಿಬ್ಬಂದಿ ಕೂಡ ದೇಣಿಗೆ ಕೊಟ್ಟಿದ್ದಾರೆ ಎಂದಿದೆ. ನಾರ್ವೆಯಲ್ಲಿರುವ ದೂತಾವಾಸವು ಅಲ್ಲಿರುವ ಭಾರತದ ಐದು ಮಾಹಿತಿ ತಂತ್ರಜ್ಞಾನ ಕಚೇರಿಗಳು ಮತ್ತು ಸಂಘಟನೆಗಳನ್ನು ಸಂಪರ್ಕಿಸಿತ್ತು. ಕೆನಡಾದಲ್ಲಿರುವ ಹೈಕಮಿಷನ್‌ ಕಚೇರಿಯು ಸಂಘಟನೆಗಳು ಮತ್ತು ವ್ಯಕ್ತಿಗಳಿಗೆ ನೇರವಾಗಿ ಸಂದೇಶಗಳನ್ನು ಕಳುಹಿಸಿ, ನಿಧಿಯ ಬಗ್ಗೆ ಪ‍್ರಚಾರ ಮಾಡುವಂತೆ ಕೋರಿತ್ತು.

‘ನಿಧಿ ನಿರ್ವಹಣೆ ಪಾರದರ್ಶಕವಲ್ಲ’

ಪಿಎಂ-ಕೇರ್ಸ್‌ ನಿಧಿಯ ನಿರ್ವಹಣೆಯಲ್ಲಿ ಪಾರದರ್ಶಕತೆಯ ಕೊರತೆ ಇದೆ ಎಂದು 100 ನಿವೃತ್ತ ಅಧಿಕಾರಿಗಳು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಈ ಪತ್ರವು ಟ್ವಿಟರ್‌ನಲ್ಲಿ ವೈರಲ್ ಆಗಿದೆ.

‘ಪಿಎಂ-ಕೇರ್ಸ್ ನಿಧಿಯ ಸ್ಥಾಪನೆ ಮತ್ತು ಅದರ ಬಳಕೆ ಬಗ್ಗೆ ನಡೆಯುತ್ತಿರುವ ಚರ್ಚೆಯನ್ನು ಗಮನಿಸುತ್ತಾ ಬಂದಿದ್ದೇವೆ. ಈ ಬಗ್ಗೆ ಹಲವು ಪ್ರಶ್ನೆಗಳು ತಲೆದೋರಿವೆ. ಆದರೆ ಈ ಪ್ರಶ್ನೆಗಳಿಗೆ ಈವರೆಗೆ ಉತ್ತರ ಸಿಕ್ಕಿಲ್ಲ. ಪ್ರಧಾನಿಗೆ ಸಂಬಂಧಿಸಿದ ಎಲ್ಲಾ ವ್ಯವಹಾರಗಳಲ್ಲಿ ಪ್ರಧಾನಿ ಹುದ್ದೆಯ ಘನತೆಯನ್ನು ಕಾಪಾಡುವ ಉದ್ದೇಶದಿಂದ ಪಾರದರ್ಶಕತೆಯನ್ನು ಕಾಪಾಡುವುದು ಅತ್ಯಗತ್ಯ. ಸಾರ್ವಜನಿಕ ಲೆಕ್ಕಪತ್ರ ನಿಯಮಗಳಿಗೆ ಬದ್ಧವಾಗಿರುವ ಸಲುವಾಗಿ ಈ ನಿಧಿಯ ಆರ್ಥಿಕ ವಿವರಗಳು, ಸಂಗ್ರಹ ಮತ್ತು ವೆಚ್ಚಕ್ಕೆ ಸಂಬಂಧಿಸಿದ ವಿವರಗಳನ್ನು ಸಾರ್ವಜನಿಕರಿಗೆ ಲಭ್ಯವಿರುವಂತೆ ನೋಡಿಕೊಳ್ಳಬೇಕು’ ಎಂದು ನಿವೃತ್ತ ಅಧಿಕಾರಿಗಳು ಪತ್ರದಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT