ಭಾನುವಾರ, ಜುಲೈ 25, 2021
26 °C

ಪ್ರಯಾಣ ನಿರ್ಬಂಧ: ಇಟಲಿ ವಿ.ವಿಯ ಭಾರತೀಯ ವಿದ್ಯಾರ್ಥಿಗಳಿಗೆ ಸಂಕಷ್ಟ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್-19 ಉಲ್ಬಣದ ವೇಳೆ ಇಟಲಿಯಿಂದ ಭಾರತಕ್ಕೆ ಬಂದ ಭಾರತೀಯ ವಿದ್ಯಾರ್ಥಿಗಳು ಭಾರತದಲ್ಲೇ ಸಿಲುಕಿದ್ದಾರೆ.

ಭಾರತದಲ್ಲಿರುವ ತಮ್ಮ ಕುಟುಂಬದವರನ್ನು ಭೇಟಿಯಾಗಲು, ಆತ್ಮೀಯರ ಅಂತಿಮ ಕ್ರಿಯೆಯಲ್ಲಿ ಭಾಗಿಯಾಗಲು ಇಟಲಿಯಿಂದ ಆಗಮಿಸಿದ ವಿದ್ಯಾರ್ಥಿಗಳು ವಾಪಾಸು ಹೋಗಲಾರದೇ ಭಾರತದಲ್ಲೇ ಸಿಲುಕಿದ್ದಾರೆ. ಕಳೆದ ವರ್ಷ ಇಟಲಿಯಲ್ಲಿ ಕೋವಿಡ್‌ ಉಲ್ಬಣಗೊಂಡಾಗ ಭಾರತೀಯ ವಿದ್ಯಾರ್ಥಿಗಳು ಇದೇ ಪರಿಸ್ಥಿತಿಯನ್ನು ಎದುರಿಸಿದ್ದರು.

ಏಪ್ರಿಲ್‌ 28ಕ್ಕಿಂತ ಮೊದಲು ಭಾರತಕ್ಕೆ ಆಗಮಿಸಿದವರು ಪ್ರಯಾಣ ನಿರ್ಬಂಧಗಳಿಂದಾಗಿ ವಿದೇಶಕ್ಕೆ ಮರಳಲು ಸಾಧ್ಯವಾಗದೇ ಭಾರತದಲ್ಲೇ ಸಿಲುಕಿದ್ದಾರೆ.

‘ನಾನು ಫೆಬ್ರುವರಿಯಲ್ಲಿ ಇಟಲಿಯಿಂದ ಭಾರತಕ್ಕೆ ಬಂದಿದ್ದೆ. ನಾನು ಮರಳಿ ಹೋಗಬೇಕೆಂದು ಯೋಜನೆ ರೂಪಿಸಿದಾಗ ಇಟಲಿಯು ಭಾರತದ ಮೇಲೆ ಪ್ರಯಾಣ ನಿರ್ಬಂಧ ಹೇರಿತು. ಅದು ಈಗಲೂ ಮುಂದುವರಿದಿದೆ. ಇಟಲಿಯ ವಿಶ್ವವಿದ್ಯಾಲಯಗಳಲ್ಲಿ ಆನ್‌ಲೈನ್‌ ಮತ್ತು ಆಫ್‌ಲೈನ್‌ ಪರೀಕ್ಷೆಗಳು ನಡೆಯುತ್ತಿವೆ. ನಾವು ಈ ಬಗ್ಗೆ ಭಾರತೀಯ ರಾಯಭಾರ ಕಚೇರಿ, ಸಚಿವಾಲಯಗಳಿಗೆ ಮನವಿ ಮಾಡಿದ್ದೇವೆ. ಆದರೆ ಏನೂ ಪ್ರಯೋಜನವಿಲ್ಲ’ ಎಂದು ರೋಮ್‌ನ ಸಪಿಯೆಂಜಾ ವಿಶ್ವವಿದ್ಯಾಲಯದ ಎಂಎಸ್‌ಸಿ ಕಂಪ್ಯೂಟರ್‌ ವಿಭಾಗದ ವಿದ್ಯಾರ್ಥಿ ಓವೈಸಿ ಆರ್‌ ಖಾನ್‌ ತಿಳಿಸಿದರು.

‘ಭಾರತದ ಪ್ರಯಾಣಿಕರಿಗೆ ಇಟಲಿ ನಿರ್ಬಂಧ ಹೇರಿದೆ. ಅಷ್ಟೆ ಅಲ್ಲದೇ ಭಾರತೀಯ ಲಸಿಕೆಗೂ ಅನುಮೋದನೆ ಸಿಕ್ಕಿಲ್ಲ’ ಎಂದು ವೀಟಾ-ಸೆಲ್ಯೂಟ್ ಸ್ಯಾನ್ ರಾಫೆಲ್ ವಿಶ್ವವಿದ್ಯಾಲಯದ ಎಂಬಿಬಿಎಸ್‌ ವಿದ್ಯಾರ್ಥಿ ನಿಹಾಲ್‌ ವಿಕ್ರಂ ಸಿಂಗ್‌ ಹೇಳಿದ್ದಾರೆ.

ಭಾರತದ ಮೇಲೆ ಹೇರಲಾಗಿರುವ ಪ್ರಯಾಣ ನಿರ್ಬಂಧ ಯಾವಾಗ ಅಂತ್ಯಗೊಳ್ಳುವುದು ಎಂಬುದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇಟಲಿಯಲ್ಲಿರುವ ಭಾರತೀಯ ರಾಯಭಾರಿ ಅವರು ಜುಲೈ 9 ರಂದು ಅಲ್ಲಿನ ಸಮುದಾಯ ಪ್ರತಿನಿಧಿಗಳೊಂದಿಗೆ ಈ ಬಗ್ಗೆ ಮಾತುಕತೆ ನಡೆಸಿದ್ದರು.

‘ಭಾರತದಲ್ಲಿ ಸಿಲುಕಿರುವವರಿಗಾಗಿ ನಿಯಮಗಳ ಸಡಿಲಿಕೆ ಮತ್ತು ಪ್ರಯಾಣ ನಿರ್ಬಂಧ ಅಂತ್ಯಗೊಳಿಸುವ ಬಗ್ಗೆ ಇಟಲಿಯೊಂದಿಗೆ ರಾಯಭಾರಿ ಡಾ. ನೀನಾ ಮಲ್ಹೋತ್ರಾ ಅವರು ಮಾತುಕತೆ ನಡೆಸಿದ್ದಾರೆ’ ಎಂದು ಇಟಲಿಯಲ್ಲಿರುವ ಭಾರತದ ರಾಯಭಾರ ಕಚೇರಿ ಟ್ವೀಟ್‌ ಮಾಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು