ಭಾನುವಾರ, ಮೇ 29, 2022
30 °C
ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮಹತ್ವದ ಮೈಲುಗಲ್ಲು

ಲಸಿಕೆ ಕಾರ್ಯಕ್ರಮಕ್ಕೆ ವರ್ಷ: 156 ಕೋಟಿಗೂ ಅಧಿಕ ಡೋಸ್‌ ನೀಡಿಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೇಶದಾದ್ಯಂತ ನಡೆಯುತ್ತಿರುವ ಕೋವಿಡ್‌–19 ವಿರುದ್ಧದ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಭಾನುವಾರ ಒಂದು ವರ್ಷ ತುಂಬಿತು. ಈ ಅವಧಿಯಲ್ಲಿ 156.76 ಕೋಟಿಗೂ ಅಧಿಕ ಡೋಸ್‌ಗಳನ್ನು ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಲಸಿಕೆ ಕಾರ್ಯಕ್ರಮಕ್ಕೆ ಒಂದು ವರ್ಷ ತುಂಬಿರುವ ನೆನಪಿಗಾಗಿ ವಿಶೇಷ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ವಯಸ್ಕರ ಪೈಕಿ ಶೇ 93ಕ್ಕೂ ಹೆಚ್ಚು ಜನರು ಲಸಿಕೆಯ ಮೊದಲ ಡೋಸ್‌ ಪಡೆದುಕೊಂಡಿದ್ದರೆ, ಎರಡೂ ಡೋಸ್‌ಗಳನ್ನು ಪಡೆದವರ ಪ್ರಮಾಣ ಶೇ 69.8ರಷ್ಟು ಎಂದೂ ತಿಳಿಸಿದೆ.

‘ಲಸಿಕೆ ನೀಡುವ ಪ್ರಮಾಣಕ್ಕೆ ಸಂಬಂಧಿಸಿದಂತೆ, ಕಳೆದ ವರ್ಷ ಏಪ್ರಿಲ್‌ 1ರಂದು 10 ಕೋಟಿ ಡೋಸ್‌ ಗಡಿ ದಾಟಿತ್ತು. ಜೂನ್‌ 25ರಂದು 25 ಕೋಟಿ, ಆಗಸ್ಟ್‌ 6ರಂದು 50 ಕೋಟಿ ಡೋಸ್‌ಗಳು ಹಾಗೂ ಸೆಪ್ಟೆಂಬರ್‌ 13ರಂದು 73 ಕೋಟಿ ಡೋಸ್‌ಗಳ ಗಡಿ ದಾಟಿತ್ತು’ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯಾ ಟ್ವೀಟ್‌ ಮಾಡಿದ್ದಾರೆ.

ಕಳೆದ ವರ್ಷ ಜನವರಿ 16ರಂದು ಆರೋಗ್ಯ ಕಾರ್ಯಕರ್ತರಿಗೆ ಮೊದಲು ಲಸಿಕೆ ಹಾಕುವ ಮೂಲಕ ದೇಶದಾದ್ಯಂತ ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎರಡನೇ ಹಂತದ ಲಸಿಕಾ ಕಾರ್ಯಕ್ರಮಕ್ಕೆ ಫೆಬ್ರುವರಿ 2ರಂದು ಚಾಲನೆ ನೀಡಲಾಯಿತು. ಈ ಹಂತದಲ್ಲಿ ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರಿಗೆ ಲಸಿಕೆ ನೀಡಲಾಯಿತು.

60 ವರ್ಷ ಮೇಲ್ಪಟ್ಟವರಿಗೆ ಹಾಗೂ ಮಧುಮೇಹ, ಅಧಿಕ ರಕ್ತದೊತ್ತಡ ಸೇರಿದಂತೆ ಇತರ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ 45 ವರ್ಷ ಮೇಲ್ಪಟ್ಟ ವಯೋಮಾನದವರಿಗೆ ಮಾರ್ಚ್‌ 1ರಿಂದ  ಲಸಿಕೆ ನೀಡಲು ಆರಂಭಿಸಲಾಯಿತು. ಅಲ್ಲದೇ, 45 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವುದಕ್ಕೆ ಏಪ್ರಿಲ್‌ 1ರಿಂದ ಹಾಗೂ 18 ವರ್ಷ ಮೇಲ್ಪಟ್ಟವರಿಗೆ ಮೇ 1ರಿಂದ ಲಸಿಕೆ ನೀಡುವುದಕ್ಕೆ ಚಾಲನೆ ನೀಡಲಾಯಿತು. ಈ ವರ್ಷ ಜನವರಿ 3ರಿಂದ 15–18 ವರ್ಷ ವಯೋಮಾನದವರಿಗೆ ನೀಡಲು ಆರಂಭಿಸಲಾಗಿದೆ. 

ಬೃಹತ್‌ ಕಾರ್ಯಕ್ರಮ: ಕೋವಿಡ್‌ ವಿರುದ್ಧದ ಲಸಿಕೆಯನ್ನು ತನ್ನ ಜನಸಂಖ್ಯೆಯ ಪೈಕಿ ಹೆಚ್ಚು ಜನರಿಗೆ ನೀಡಿದ ಜಗತ್ತಿನ ರಾಷ್ಟ್ರಗಳ ಸಾಲಿನಲ್ಲಿ ಭಾರತ ನಿಲ್ಲುತ್ತದೆ. 9 ತಿಂಗಳ ಅಲ್ಪ ಅವಧಿಯಲ್ಲಿಯೇ 100 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡುವ ಮೂಲಕ ಭಾರತ ಅಭೂತಪೂರ್ವ ಸಾಧನೆ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

ಒಂದೇ ದಿನ 2.51 ಡೋಸ್‌ ಲಸಿಕೆ ನೀಡಿ, ದಾಖಲೆ ಮಾಡಿರುವ ಹೆಗ್ಗಳಿಕೆಯೂ ಭಾರತದ್ದಾಗಿದೆ ಎಂದೂ ಸಚಿವಾಲಯ ತಿಳಿಸಿದೆ.

***

ಲಸಿಕೆಯಿಂದಾಗಿ ಕೋವಿಡ್‌–19 ವಿರುದ್ಧದ ಹೋರಾಟಕ್ಕೆ ದೊಡ್ಡ ಬಲ ಸಿಕ್ಕಂತಾಯಿತು. ಜನರ ಪ್ರಾಣ ಉಳಿಯಿತು. ಈ ಲಸಿಕೆ ಕಾರ್ಯಕ್ರಮದೊಂದಿಗೆ ಗುರುತಿಸಿಕೊಂಡಿರುವ ಪ್ರತಿಯೊಬ್ಬರಿಗೂ ಧನ್ಯವಾದ ಹೇಳುತ್ತೇನೆ. ಕಾರ್ಯಕ್ರಮಕ್ಕೆ ಯಶಸ್ಸು ಸಿಗುವಲ್ಲಿ ನಮ್ಮ ವೈದ್ಯರು, ನರ್ಸ್‌ಗಳು ಹಾಗೂ ಆರೋಗ್ಯ ಕಾರ್ಯಕರ್ತರ ಪಾತ್ರ ಅನನ್ಯ

–ನರೇಂದ್ರ ಮೋದಿ, ಪ್ರಧಾನಿ

***

ಕೋವಿಡ್‌ ಲಸಿಕೆ ನೀಡುವ ಕಾರ್ಯಕ್ರಮ ಯಶಸ್ವಿಯಾಗಿ ಒಂದು ವರ್ಷ ಪೂರೈಸಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಭಿನಂದಿಸುವೆ. ಜನರು ಹಾಗೂ ಸರ್ಕಾರ ಸವಾಲನ್ನು ಮೆಟ್ಟಿ ನಿಲ್ಲಲು ಸಾಧ್ಯ ಎಂಬುದನ್ನು ಈ ಕಾರ್ಯಕ್ರಮದ ಮೂಲಕ ಭಾರತ ಜಗತ್ತಿಗೆ ತೋರಿಸಿಕೊಟ್ಟಿದೆ. ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರಿಗೂ ಅಭಿನಂದನೆಗಳು

–ಅಮಿತ್‌ ಶಾ, ಕೇಂದ್ರ ಗೃಹ ಸಚಿವ

***

ಪ್ರಧಾನಿ ನರೇಂದ್ರ ಮೋದಿ ಅವರ ಸಮರ್ಥ ನಾಯಕತ್ವದಿಂದಾಗಿಯೇ ಲಸಿಕೆ ಕಾರ್ಯಕ್ರಮ ಯಶಸ್ವಿಯಾಗಿ ಒಂದು ಪೂರೈಸಲು ಸಾಧ್ಯವಾಗಿದೆ. ಈ ಸಾಧನೆಗಾಗಿ ಇಡೀ ಜಗತ್ತೇ ಭಾರತವನ್ನು ಕೊಂಡಾಡುತ್ತಿದೆ.

ಜೆ.ಪಿ.ನಡ್ಡಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು