ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತಕ್ಕೆ ಜಿ–20 ಅಧ್ಯಕ್ಷತೆ: ವಿದೇಶಾಂಗ ಸಚಿವ ಜೈಶಂಕರ್

ಯೂನಿವರ್ಸಿಟಿ ಕನೆಕ್ಟ್‌ ಕಾರ್ಯಕ್ರಮ
Last Updated 1 ಡಿಸೆಂಬರ್ 2022, 16:06 IST
ಅಕ್ಷರ ಗಾತ್ರ

ನವದೆಹಲಿ:‘ಅಂತರರಾಷ್ಟ್ರೀಯ ವ್ಯವಹಾರಗಳಿಗೆ ಸಂಬಂಧಿಸಿದ ಸಂದಿಗ್ಧ ಪರಿಸ್ಥಿತಿಯಲ್ಲಿ ನಮಗೆ ಜಿ–20 ಗುಂಪಿನ ಅಧ್ಯಕ್ಷತೆ ದೊರೆತಿದೆ. ಜಗತ್ತಿನ ಅತಿ ದುರ್ಬಲ ವರ್ಗಗಳ ಮೇಲೆ ಪರಿಣಾಮ ಬೀರುವಂತಹ ಹಲವು ಸಮಸ್ಯೆಗಳತ್ತ ವಿಶ್ವ ನಾಯಕರು ಗಮನ ಕೇಂದ್ರೀಕರಿಸಿರುವ ಸಮಯದಲ್ಲೇ ಅಧ್ಯಕ್ಷತೆ ಸಿಕ್ಕಿರುವುದು ಮಹತ್ವದ್ದಾಗಿದೆ’ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

ಭಾರತವು ಗುರುವಾರ ಜಿ–20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡಿದ್ದು, ಇದರ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದಜಿ–20 ಯೂನಿವರ್ಸಿಟಿ ಕನೆಕ್ಟ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ಜಿ–20 ಅಧ್ಯಕ್ಷತೆಯ ಅವಧಿಯಲ್ಲಿ ಭಾರತವು ಇಂಧನ ಮತ್ತು ಆಹಾರ ಭದ್ರತೆ, ಆರೋಗ್ಯ ಸೇವೆಯ ಲಭ್ಯತೆ, ಹವಾಮಾನ ನ್ಯಾಯದಂತಹ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ’ ಎಂದಿದ್ದಾರೆ.

‘ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕ ಒಳಗೊಂಡಂತೆ ಜಗತ್ತಿನ ದಕ್ಷಿಣ ರಾಷ್ಟ್ರಗಳ ಧ್ವನಿಯಾಗಿ ಹೊರಹೊಮ್ಮಲು ಭಾರತವು ಪ್ರಯತ್ನಿಸಲಿದೆ. ಅದು ಧ್ರುವೀಕರಣದ ಪರಿಣಾಮ ಮತ್ತು ಅಭಿವೃದ್ಧಿ ಹೊಂದಿದ ಜಗತ್ತಿನಲ್ಲಿನ ಸಂಘರ್ಷವನ್ನೂ ಎದುರಿಸಬೇಕಾಗುತ್ತದೆ’ ಎಂದೂ ತಿಳಿಸಿದ್ದಾರೆ.

‘ಭಾರತವು ಪ್ರಜಾಪ್ರಭುತ್ವದ ನೆಲೆಯಾಗಿದ್ದು, ಅದರ ಜಿ–20 ಅಧ್ಯಕ್ಷತೆಯು ಸಹಭಾಗಿತ್ವ, ಸಮಾಲೋಚನೆ ಹಾಗೂ ದೃಢತೆಯನ್ನು ಒಳಗೊಂಡಿರಲಿದೆ’ ಎಂದು ಹೇಳಿದ್ದಾರೆ.

‘ವಿವಿಧ ಆಸಕ್ತಿಗಳ ಸಮನ್ವಯಗೊಳಿಸುವಿಕೆಯು ಭಾರತದ ಇತಿಹಾಸ ಹಾಗೂ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿರುವ ವಿಷಯವಾಗಿದೆ. ನಾವು ಬಹಳ ಹಿಂದಿನಿಂದಲೂಬಹುತ್ವವಾದ ಮತ್ತು ಸಲಹಾ ಸಮಾಜದ ಭಾಗವಾಗಿದ್ದೇವೆ. ನಮ್ಮಲ್ಲಿ ಯಾವುದೇ ಸಮಸ್ಯೆಯ ಕುರಿತು ಸೂಕ್ತ ತೀರ್ಮಾನ ಕೈಗೊಳ್ಳುವ ಮುನ್ನ ಅದರ ಬಗ್ಗೆ ಮುಕ್ತವಾಗಿ ಚರ್ಚಿಸಲಾಗುತ್ತದೆ. ಈ ಗುಣ ನಮ್ಮ ವಂಶವಾಹಿಯಲ್ಲೇ ಬೆರೆತು ಹೋಗಿದೆ. ಹೀಗಾಗಿ ನಮಗೆ ಯಾವತ್ತೂ ವೈವಿಧ್ಯತೆ ಕುರಿತು ಅಭದ್ರತೆ ಕಾಡಿಲ್ಲ’ ಎಂದೂ ತಿಳಿಸಿದ್ದಾರೆ.

ಒಳಗೊಳ್ಳುವಿಕೆ ನಮ್ಮ ಕಾರ್ಯಸೂಚಿ: ಮೋದಿ
‘ಒಳಗೊಳ್ಳುವಿಕೆ, ಮಹಾತ್ವಕಾಂಕ್ಷೆ, ಕ್ರಿಯಾತ್ಮಕತೆ ಹಾಗೂ ನಿಖರತೆಯು ಭಾರತದ ಜಿ–20 ಅಧ್ಯಕ್ಷತೆಯ ಕಾರ್ಯಸೂಚಿಯಾಗಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾರತವು ಗುರುವಾರ ಜಿ–20 ಗುಂಪಿನ ಅಧ್ಯಕ್ಷತೆ ವಹಿಸಿಕೊಂಡ ಬೆನ್ನಲ್ಲೇ ಸರಣಿ ಟ್ವೀಟ್‌ ಮಾಡಿರುವ ಮೋದಿ, ‘ಒಂದು ಭೂಮಿ, ಒಂದು ಕುಟುಂಬ ಹಾಗೂ ಒಂದು ಭವಿಷ್ಯ’ ಭಾರತದ ಅಧ್ಯಕ್ಷತೆಯ ಧ್ಯೇಯವಾಕ್ಯವಾಗಿದ್ದು, ಏಕತೆಯನ್ನು ಉತ್ತೇಜಿಸುವ ದಿಸೆಯಲ್ಲಿ ನಾವು ಕೆಲಸ ಮಾಡಲಿದ್ದೇವೆ’ ಎಂದಿದ್ದಾರೆ.

‘ಭಯೋತ್ಪಾದನೆ, ಹವಾಮಾನ ಬದಲಾವಣೆ ಹಾಗೂ ಸಾಂಕ್ರಾಮಿಕ ಪಿಡುಗಿನಂತಹ ದೊಡ್ಡ ಸವಾಲುಗಳ ವಿರುದ್ಧ ನಾವೆಲ್ಲಾ ಒಂದಾಗಿ ಹೋರಾಡಬೇಕಿದೆ. ಜಿ–20 ಮಿತ್ರ ರಾಷ್ಟ್ರಗಳಷ್ಟೇ ಅಲ್ಲದೆ ಜಗತ್ತಿನ ದಕ್ಷಿಣ ಭಾಗದ ಇತರ ರಾಷ್ಟ್ರಗಳ ಜೊತೆಗೂ ಸಮಾಲೋಚನೆ ನಡೆಸಿ ನಮ್ಮ ಆದ್ಯತೆಗಳನ್ನು ರೂಪಿಸಲಾಗುತ್ತದೆ’ ಎಂದು ಹೇಳಿದ್ದಾರೆ.

‘ಭಾರತದ ಅಧ್ಯಕ್ಷತೆಯನ್ನು ಸಾಮರಸ್ಯ ಮತ್ತು ಭರವಸೆಯ ಪ್ರತೀಕವಾಗಿಸಲು ಹಾಗೂ ಮಾನವ ಕೇಂದ್ರಿತ ಜಾಗತೀಕರಣದ ಮಾದರಿ ರೂಪಿಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿದ್ದಾರೆ.

‘ಸುಸ್ಥಿರ ಜೀವನಶೈಲಿಯನ್ನು ಪ್ರೋತ್ಸಾಹಿಸುವ, ಆಹಾರ, ರಸಗೊಬ್ಬರ ಮತ್ತು ವೈದ್ಯಕೀಯ ಉತ್ಪನ್ನಗಳ ಜಾಗತಿಕ ಪೂರೈಕೆಯನ್ನು ರಾಜಕೀಯಗೊಳಿಸದೇ ಇರುವ ದಿಸೆಯಲ್ಲಿ ದೇಶವು ಕೆಲಸ ಮಾಡಲು ಎದುರು ನೋಡುತ್ತಿದೆ’ ಎಂದೂ ತಿಳಿಸಿದ್ದಾರೆ.

‘ದೇಶದ ಎಲ್ಲಾ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ವೇದಿಕೆ ಕಲ್ಪಿಸುವ ‘ಯೂನಿವರ್ಸಿಟಿ ಕನೆಕ್ಟ್‌’ ಕಾರ್ಯಕ್ರಮದ ಮೂಲಕ ಭಾರತ ತನ್ನ ಜಿ–20 ಅಧ್ಯಕ್ಷತೆ ಆರಂಭಿಸಿದೆ’ ಎಂದು ಯುಜಿಸಿ ಮುಖ್ಯಸ್ಥ ಎಂ.ಜಗದೀಶ್‌ಕುಮಾರ್‌ ಹೇಳಿದ್ದಾರೆ.

‘ಅಧ್ಯಕ್ಷತೆಯ ಅವಧಿಯಲ್ಲಿ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಭಾರತದ ಜಿ–20 ಅಧ್ಯಕ್ಷತೆಯ ಮಹತ್ವದ ಕುರಿತು ಅರಿವು ಮೂಡಿಸಲಿದ್ದಾರೆ. ಸಾಮರಸ್ಯವನ್ನು ಪ್ರತಿಪಾದಿಸುವ ಮೂಲಕ ಭಾರತವು ಜಗತ್ತಿನ ಇತರ ರಾಷ್ಟ್ರಗಳಿಗೆ ಹೇಗೆ ಮಾದರಿಯಾಗಲಿದೆ ಎಂಬುದನ್ನೂ ತಿಳಿಸಿಕೊಡಲಿದ್ದಾರೆ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT