ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಳಿಗಾಲದ ಒಲಿಂಪಿಕ್ಸ್‌ ಉದ್ಘಾಟನೆ, ಸಮಾರೋಪ ಸಮಾರಂಭ ಬಹಿಷ್ಕರಿಸಿದ ಭಾರತ

Last Updated 4 ಫೆಬ್ರುವರಿ 2022, 2:35 IST
ಅಕ್ಷರ ಗಾತ್ರ

ನವದೆಹಲಿ: ಗಾಲ್ವಾನ್ ಕಣಿವೆಯ ಘರ್ಷಣೆಯಲ್ಲಿ ಭಾಗಿಯಾಗಿದ್ದ ಸೇನಾ ಅಧಿಕಾರಿ ಬೀಜಿಂಗ್‌ ಚಳಿಗಾಲದ ಒಲಿಂಪಿಕ್ಸ್‌ನ ಸಾಂಪ್ರದಾಯಿಕ ಜ್ಯೋತಿ ಹಿಡಿದಿದ್ದನ್ನು ಭಾರತ ರಾಜತಾಂತ್ರಿಕ ಮಾರ್ಗದಲ್ಲಿ ಆಕ್ಷೇಪಿಸಿದೆ.

‘ನಾವು ವರದಿಗಳನ್ನು ನೋಡಿದ್ದೇವೆ. ಚೀನಾದ ಕಡೆಯವರು ಒಲಿಂಪಿಕ್ಸ್‌ನಂತಹ ಸಮಾರಂಭವನ್ನು ರಾಜಕೀಯಗೊಳಿಸಲು ಆಯ್ಕೆ ಮಾಡಿಕೊಂಡಿರುವುದು ನಿಜಕ್ಕೂ ವಿಷಾದನೀಯ. ಬೀಜಿಂಗ್‌ನಲ್ಲಿರುವ ಭಾರತದ ರಾಯಭಾರಿ ಕಚೇರಿಯ ಅಧಿಕಾರಿಗಳು ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನೆ ಮತ್ತು ಸಮಾರೋಪ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ’ ಎಂದು ವಿದೇಶಾಂಗ ಇಲಾಖೆ ವಕ್ತಾರರಾದ ಅರಿಂದಮ್‌ ಬಾಗ್ಚಿ ಗುರುವಾರ ತಿಳಿಸಿದರು.

24ನೇ ಚಳಿಗಾಲದ ಒಲಿಂಪಿಕ್ಸ್‌ ಇಂದಿನಿಂದ ಆರಂಭವಾಗಲಿದೆ.

ಪ್ರದೀಪ್ ಕುಮಾರ್ ರಾವತ್ ಅವರನ್ನು ಚೀನಾದಲ್ಲಿ ಭಾರತದ ರಾಯಭಾರಿಯಾಗಿ ನಿಯೋಜಿಸಲಾಗಿದ್ದು, ಅವರು ಇನ್ನಷ್ಟೇ ಅಧಿಕಾರ ಸ್ವೀಕರಿಸಬೇಕಾಗಿದೆ. ಹೀಗಾಗಿ ಅಲ್ಲಿ, ಪ್ರಭಾರ ರಾಯಭಾರಿ ಇದ್ದಾರೆ.

ಚಳಿಗಾಲದ ಒಲಿಂಪಿಕ್ಸ್‌ ಜ್ಯೋತಿ ಹಿಡಿದ ‘ಪೀಪಲ್ಸ್ ಲಿಬರೇಶನ್ ಆರ್ಮಿ (ಚೀನಾ ಸೇನೆ)’ಯ ರೆಜಿಮೆಂಟ್ ಕಮಾಂಡರ್ ಕ್ವಿ ಫಾಬಾವೊ 2020ರ ಗಾಲ್ವಾನ್ ಕಣಿವೆ ಘರ್ಷಣೆಯಲ್ಲಿ ಭಾಗಿಯಾಗಿದ್ದರು. ಘರ್ಷಣೆಯಲ್ಲಿ ಭಾಗಿಯಾಗಿಯಾಗಿದ್ದ ಕ್ವಿ ತಲೆಗೆ ಗಂಭೀರ ಗಾಯವಾಗಿತ್ತು.

ಘರ್ಷಣೆಯಲ್ಲಿ ಭಾರತದ ಕನಿಷ್ಠ 20 ಸೈನಿಕರು, ಐವರು ಚೀನೀ ಸೈನಿಕರು ಮೃತಪಟ್ಟಿದ್ದರು. ಆದರೂ, ಚೀನಾ ತನ್ನ ಕಡೆಯ ಸಾವುನೋವುಗಳನ್ನು ಒಪ್ಪಿಕೊಂಡಿದ್ದು 8 ತಿಂಗಳ ನಂತರ.

ಭಾರತದ ಪರ ನಿಂತ ಅಮೆರಿಕ

ಗಾಲ್ವಾನ್‌ ಕಣಿವೆಯಲ್ಲಿ ಭಾರತದ ವಿರುದ್ಧ ನಿಂತಿದ್ದ ಅಧಿಕಾರಿಯೊಬ್ಬರಿಗೆ ಒಲಿಂಪಿಕ್ಸ್‌ನ ಸಾಂಪ್ರದಾಯಿಕ ಜ್ಯೋತಿ ನೀಡಿದ್ದನ್ನು ಅಮೆರಿಕ ಆಕ್ಷೇಪಿಸಿದೆ. ಈ ವಿಚಾರದಲ್ಲಿ ಭಾರತದ ಪರವಾಗಿ ನಿಲ್ಲುವುದಾಗಿ ಘೋಷಿಸಿದೆ.

‘ನೆರೆಹೊರೆಯವರನ್ನು ಬೆದರಿಸಲು ಚೀನಾ ನಡೆಸುತ್ತಿರುವ ಪ್ರಯತ್ನಗಳ ಮಾದರಿಯ ಬಗ್ಗೆ ನಾವು ಈ ಹಿಂದೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ನಾವು ನಮ್ಮ ಮಿತ್ರರ ಪರವಾಗಿ ನಿಲ್ಲುತ್ತೇವೆ’ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಇದಕ್ಕೂ ಮೊದಲು ಅಮೆರಿಕದ ಸೆನೆಟರ್‌ಗಳೂ ಕೂಡ ಘಟನೆಯನ್ನು ಖಂಡಿಸಿದ್ದರು.

ಒಲಿಂಪಿಕ್ಸ್‌ನ ನೇರ ಪ್ರಸಾರ ಮಾಡುವುದಿಲ್ಲ: ಡಿಡಿ

ಬೀಜಿಂಗ್‌ನಲ್ಲಿ ನಡೆಯುತ್ತಿರುವ ಚಳಿಗಾಲದ ಒಲಿಂಪಿಕ್ಸ್‌ನ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭಗಳನ್ನು ಡಿಡಿ ಸ್ಪೋರ್ಟ್ಸ್ ಚಾನೆಲ್ ನೇರ ಪ್ರಸಾರ ಮಾಡುವುದಿಲ್ಲ ಎಂದು ಪ್ರಸಾರ ಭಾರತಿ ಸಿಇಒ ಶಶಿ ಶೇಖರ್ ವೆಂಪತಿ ಗುರುವಾರ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT