ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೌಕಾಪಡೆ ಸೇವೆಗೆ ಐಎನ್‌ಎಸ್‌ ಕವರತ್ತಿ ನಿಯೋಜನೆ

Last Updated 22 ಅಕ್ಟೋಬರ್ 2020, 11:36 IST
ಅಕ್ಷರ ಗಾತ್ರ

ವಿಶಾಖಪಟ್ಟಣಂ: ಸ್ವದೇಶಿ ನಿರ್ಮಿತ, ಜಲಾಂತರ್ಗಾಮಿ ನಿಗ್ರಹ ಯುದ್ಧ ನೌಕೆ (ಎಎಸ್‌ಡಬ್ಲ್ಯು) ಐಎನ್‌ಎಸ್‌ ಕವರತ್ತಿಯನ್ನು ಸೇನಾ ಮುಖ್ಯಸ್ಥ ಜನರಲ್ಎಂ.ಎಂ. ನರವಣೆ ಗುರುವಾರ ನೌಕಾಪಡೆಗೆ ಸೇರ್ಪಡೆಗೊಳಿಸಿದರು.

‘ಪ್ರಾಜೆಕ್ಟ್‌ 28’ (ಕಮೋರ್ಟಾ ಕ್ಲಾಸ್‌) ಅಡಿ ಈಗಾಗಲೇ ಮೂರು ಅತ್ಯಾಧುನಿಕ ಎಎಸ್‌ಡಬ್ಲ್ಯುಗಳನ್ನು ನೌಕಾಪಡೆಯ ಸೇವೆಗೆ ನಿಯೋಜಿಸಲಾಗಿದ್ದು, ಕವರತ್ತಿಯು ಯೋಜನೆಯಡಿ ನಿರ್ಮಾಣಗೊಂಡ ನಾಲ್ಕನೇ ಎಎಸ್‌ಡಬ್ಲ್ಯು ಆಗಿದೆ. ಈ ಯುದ್ಧನೌಕೆಯನ್ನು ‘ಡೈರೆಕ್ಟರೇಟ್‌ ಆಫ್‌ ನೇವಲ್‌ ಡಿಸೈನ್‌’ ವಿನ್ಯಾಸಗೊಳಿಸಿದೆ. ಕೋಲ್ಕತ್ತದ ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್ಸ್‌ ಆ್ಯಂಡ್‌ ಎಂಜಿನಿಯರ್ಸ್‌ ಕಂಪನಿ ಈ ಯುದ್ಧನೌಕೆಯನ್ನು ನಿರ್ಮಾಣ ಮಾಡಿದೆ.

ಯುದ್ಧಕ್ಕೆ ಸಜ್ಜಾಗಿರುವ ನೌಕೆಯಾಗಿ ಇದನ್ನು ಸೇವೆಗೆ ನಿಯೋಜಿಸಲಾಗಿದ್ದು, ನೌಕೆಯಲ್ಲಿನ ಎಲ್ಲಾ ಉಪಕರಣಗಳು ಹಾಗೂ ಶಸ್ತ್ರಾಸ್ತ್ರಗಳನ್ನು ಸಮುದ್ರದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ. ಸಮುದ್ರದಾಳದಲ್ಲಿರುವ ಶತ್ರುರಾಷ್ಟ್ರಗಳ ಜಲಾಂತರ್ಗಾಮಿ ನೌಕೆಗಳನ್ನು ಪತ್ತೆಹಚ್ಚುವ ಹಾಗೂ ಅವುಗಳನ್ನು ನಾಶಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಜಲಾಂತರ್ಗಾಮಿ ನೌಕೆಗಳನ್ನು ನಾಶಪಡಿಸುವುದಷ್ಟೇ ಅಲ್ಲದೆ, ಶತ್ರು ರಾಷ್ಟ್ರಗಳ ಯುದ್ಧ ನೌಕೆಗಳು ಹಾಗೂ ಜಲಾಂತರ್ಗಾಮಿಗಳ ದಾಳಿಯಿಂದಲೂ ರಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

‘ಯುದ್ಧನೌಕೆಯ ಶೇ 90ರಷ್ಟು ಭಾಗ ಸ್ವದೇಶಿಯಾಗಿದ್ದು, ಶಸ್ತ್ರಾಸ್ತ್ರಗಳು ಹಾಗೂ ಸೆನ್ಸರ್‌ಗಳು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. ಭಾರತ ಈ ಕ್ಷೇತ್ರದಲ್ಲೂ ಮುಂಚೂಣಿಯಲ್ಲಿದೆ ಎನ್ನುವುದನ್ನು ಈ ನೌಕೆ ಪ್ರದರ್ಶಿಸಿದೆ. ಕವರತ್ತಿ ಸೇರ್ಪಡೆಯಿಂದ ನೌಕಾಪಡೆಯ ಬಲ ಮತ್ತಷ್ಟು ಹೆಚ್ಚಿದೆ’ ಎಂದು ನೌಕಾಪಡೆ ತಿಳಿಸಿದೆ.

ಸದೃಢ ನೌಕೆ: ಯುದ್ಧನೌಕೆಯನ್ನು ಕಾರ್ಬನ್ ಫೈಬರ್‌ ಮಿಶ್ರಲೋಹದಿಂದ ತಯಾರಿಸಲಾಗಿದೆ. ಕಾರ್ಬನ್ ಫೈಬರ್‌ ದೀರ್ಘಕಾಲ ಬಾಳಿಕೆ ಬರುವ ಸದೃಢವಾದ ಲೋಹವಾಗಿದೆ. ಭಾರತೀಯ ಹಡಗು ತಯಾರಿಕಾ ಕ್ಷೇತ್ರದಲ್ಲಿ ಇದು ಸಾಧನೆ ಎಂದು ನೌಕಾಪಡೆಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT