ಸೋಮವಾರ, ಮೇ 17, 2021
24 °C
ಹಿಜ್ಬುಲ್ ಮುಜಾಹಿದ್ದೀನ್ ಉಗ್ರರೊಂದಿಗೆ ನಂಟು ಹೊಂದಿದ್ದ ಆರೋಪ

ಪ್ರಕರಣದ ವರ್ಗಾವಣೆ ಕೋರಿದ್ದ ದೇವಿಂದರ್ ಸಿಂಗ್‌ ಅರ್ಜಿ ವಜಾ‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರರೊಂದಿಗೆ ನಂಟು ಹೊಂದಿದ್ದ ಆರೋಪದ ಮೇಲೆ ಅಮಾನತುಗೊಂಡಿರುವ ಡಿವೈಎಸ್'ಪಿ ದೇವಿಂದರ್ ಸಿಂಗ್, ತನ್ನ ವಿರುದ್ಧ ಜಮ್ಮುವಿನ ವಿಶೇಷ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣವನ್ನು ಶ್ರೀನಗರಕ್ಕೆ ವರ್ಗಾಯಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್‌ ವಜಾಗೊಳಿಸಿತು.

ಜನವರಿ 2020ರಲ್ಲಿ ಡಿವೈಎಸ್‌ಪಿಯಾಗಿದ್ದ ದೇವಿಂದರ್‌ ಸಿಂಗ್ ಅವರನ್ನು ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಉಗ್ರರರೊಂದಿಗೆ ಕಾರಿನಲ್ಲಿ ದೆಹಲಿಯತ್ತ ಪ್ರಯಾಣಿಸುತ್ತಿದ್ದ ವೇಳೆ ಬಂಧಿಸಲಾಗಿತ್ತು. ಸಿಂಗ್ ಪ್ರಯಾಣಿಸುತ್ತಿದ್ದ ಕಾರಿನಿಂದ ಎಕೆ 47 ಬಂದೂಕು ಮತ್ತು ಇತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿತ್ತು. ನಂತರ ಈ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಗೆ ಹಸ್ತಾಂತರಿಸಲಾಗಿತ್ತು.

ಸಿಂಗ್‌ ಮತ್ತು ಇತರ ಆರೋಪಿಗಳ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆ, 1967 ಮತ್ತು ಭಾರತೀಯ ದಂಡ ಸಂಹಿತೆಯ (ಐಪಿಸಿ) ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಎನ್ಐಎ ಜಮ್ಮುವಿನ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿತ್ತು.

ದೇವಿಂದರ್‌ ಸಿಂಗ್ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಸಂಜಯ್ ಧಾರ್ ನೇತೃತ್ವದ ನ್ಯಾಯಪೀಠ, ‘ಎನ್‌ಐಎ ತನಿಖೆ ನಡೆಸುವ ನಿಗದಿತ ಅಪರಾಧಕ್ಕೆ ಸಂಬಂಧಿಸಿದ ಪ್ರಕರಣವನ್ನು ಎನ್‌ಐಎ ಕಾಯ್ದೆ ಸೆಕ್ಷನ್ 11ರ ಅಡಿಯಲ್ಲಿ ಭಾರತ ಸರ್ಕಾರವು ರಚಿಸಿರುವ ವಿಶೇಷ ನ್ಯಾಯಾಲಯದಲ್ಲಿ ಮಾತ್ರ ವಿಚಾರಣೆಗೆ ಒಳಪಡಿಸಬಹುದು‘ ಎಂದು ಅಭಿಪ್ರಾಯಪಟ್ಟಿದೆ.

‘ಇಂಥ ಪ್ರಕರಣದ ವರ್ಗಾವಣೆಯನ್ನು ಸೆಕ್ಷನ್ 11ರ ಅಡಿಯಲ್ಲಿ ಸರ್ಕಾರ ರಚಿಸಿದ ಯಾವುದೇ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಬಹುದೇ ಹೊರತು, ಕಾಯ್ದೆಯ ಇತರ ಯಾವುದೇ ನಿಬಂಧನೆಗಳ ಅಡಿಯಲ್ಲಿ ರಚಿಸಲಾದ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸಲು ಸಾಧ್ಯವಿಲ್ಲ‘ ಎಂದು ನ್ಯಾಯಪೀಠ ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು