ಮಂಗಳವಾರ, ಆಗಸ್ಟ್ 16, 2022
22 °C

ಪಶ್ಚಿಮ ಬಂಗಾಳದಲ್ಲಿ ಸ್ಪರ್ಧೆಗೆ ಜೆಡಿಯು ಚಿಂತನೆ: ಬಿಜೆಪಿ ಜತೆ ಇರಲಿದೆಯೇ ಮೈತ್ರಿ?

ಪಿಟಿಐ Updated:

ಅಕ್ಷರ ಗಾತ್ರ : | |

ಪಟ್ನಾ: ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯ ಗಣನೀಯ ಸಂಖ್ಯೆಯ ಸ್ಥಾನಗಳಲ್ಲಿ ಸ್ಪರ್ಧಿಸಲು ಎದುರು ನೋಡುತ್ತಿರುವುದಾಗಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಗುರುವಾರ ಹೇಳಿದೆ.

ಈ ಕುರಿತು ಮಾತನಾಡಿರುವ ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಗುಲಾಮ್ ರಸೂಲ್ ಬಲಿಯಾವಿ 'ಪಶ್ಚಿಮ ಬಂಗಾಳದ ಪಕ್ಷದ ಘಟಕವು ಕನಿಷ್ಠ 75 ಸ್ಥಾನಗಳಿಗೆ ಸ್ಪರ್ಧಿಸಲು ಬಯಸಿದೆ. ಪಕ್ಷದ ನಾಯಕತ್ವದ ನಿರ್ಧಾರದ ಮೇಲೆ ಸ್ಪರ್ಧೆಯ ಸಂಖ್ಯೆ ಹೆಚ್ಚಾಗಬಹುದು,' ಎಂದು ಅವರು ಹೇಳಿದ್ದಾರೆ.

294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಗೆ ಕೆಲವೇ ತಿಂಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆಗಳಿವೆ. ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಉತ್ತಮ ಸಾಧನೆ ಮಾಡಿರುವ ಬಿಜೆಪಿ, ವಿಧಾನಸಭೆ ಚುನಾವಣೆಯಲ್ಲೂ ಉಮೇದಿನಲ್ಲಿದೆ. ಈ ಮೂಲಕ ಮಮತಾ ಬ್ಯಾನರ್ಜಿ ಅವರ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮರಳಿ ಅಧಿಕಾರ ಹಿಡಿಯದಂತೆ ಮಾಡುವ ಇರಾದೆಯಲ್ಲಿದೆ.

' ಪಶ್ಚಿಮ ಬಂಗಾಳದ ಈ ಹಿಂದಿನ ಚುನಾವಣೆಗಳಲ್ಲಿ ಜೆಡಿಯು ಸ್ಪರ್ಧೆ ಮಾಡಿದೆ. ಈ ಬಾರಿಯೂ ಸ್ಪರ್ಧೆ ಮಾಡಲು ಬಯಸಿದ್ದೇವೆ. ಮಾಲ್ಡಾ, ಮುರ್ಷಿದಾಬಾದ್, ಪುರುಲಿಯಾ ಮತ್ತು ಬಂಕುರಾ ಮುಂತಾದ ಜಿಲ್ಲೆಗಳಲ್ಲಿ ಜೆಡಿಯು ದೊಡ್ಡ ಮಟ್ಟದಲ್ಲಿ ಸದಸ್ಯತ್ವ ಅಭಿಯಾನ ನಡೆಸಿದೆ. ಬಿಹಾರ ಮೂಲದವರು ನೆಲೆಸಿರುವ ಸ್ಥಳಗಳಲ್ಲಿ ಪಕ್ಷವು ಉತ್ತಮ ಸಾಧನೆ ಮಾಡುವ ಭರವಸೆಯಿದೆ. ಅಲ್ಲದೇ, ನಿತೀಶ್ ಕುಮಾರ್ ಅವರ ಉತ್ತಮ ಆಡಳಿತವು ಪಶ್ಚಿಮ ಬಂಗಾಳದಲ್ಲೂ ಸಂಚಲನ ಸೃಷ್ಟಿಸಿದೆ,' ಎಂದು ಬಲಿಯಾವಿ ಅಭಿಪ್ರಾಯಪಟ್ಟಿದ್ದಾರೆ.

ಬಿಹಾರದಂತೆಯೇ ಪಶ್ಚಿಮ ಬಂಗಾಳದಲ್ಲಿಯೂ ಬಿಜೆಪಿಯೊಂದಿಗಿನ ಮೈತ್ರಿ ಮುಂದುವರಿಯುವುದೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಬಲಿಯಾವಿ, 'ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರನ್ನೂ ಜೊತೆಗೇ ಕರೆದೊಯ್ಯುವ ವಿಷಯದಲ್ಲಿ ಬಿಜೆಪಿ ಯೋಚಿಸಬೇಕು ಎಂಬುದು ನನ್ನ ಅಭಿಪ್ರಾಯ. ಒಂದು ವೇಳೆ ಹಾಗೆ ಆಗದೇ ಹೋದರೆ, ಪ್ರತಿ ಪಕ್ಷಕ್ಕೂ ತನ್ನ ನೆಲೆ ವಿಸ್ತರಿಸುವ ಹಕ್ಕಿದೆ,' ಎಂದು ಅವರು ಸ್ಪಷ್ಟಪಡಿಸಿದರು.

ಜೆಡಿಯುನ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಭಾಗವಹಿಸಲೆಂದು ಬಿಹಾರಕ್ಕೆ ಆಗಮಿಸಿರುವ ಪಶ್ಚಿಮ ಬಂಗಾಳದ ಜೆಡಿಯು ನಿಯೋಗದಲ್ಲಿದ್ದ ಬಬ್ಲು ಮಹ್ತೋ ಮೈತ್ರಿ ಕುರಿತು ಮಾತನಾಡಿದ್ದಾರೆ. 'ನಾವು (ಪಶ್ಚಿಮ ಬಂಗಾಳದ ಜೆಡಿಯು ಘಟಕ) ಎನ್‌ಡಿಎ ಮೈತ್ರಿ ಕೂಟದ ಭಾಗವೆಂದೇ ಭಾವಿಸಿದ್ದೇವೆ. ವಿಧಾನಸಭಾ ಚುನಾವಣೆ ಮಾತ್ರವಲ್ಲದೆ ಪಂಚಾಯತ್ ಮತ್ತು ಪುರಸಭೆಯ ಚುನಾವಣೆಗಳಲ್ಲೂ ಸ್ಪರ್ಧಿಸಲು ಬಯಸಿದ್ದೇವೆ. ಆದರೆ ಬಿಜೆಪಿಯೊಂದಿಗಿನ ಮೈತ್ರಿಯ ಅಂತಿಮ ತೀರ್ಮಾನ ಪಕ್ಷದ ಹೈಕಮಾಂಡ್‌ ತೆಗೆದುಕೊಳ್ಳಲಿದೆ,' ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು