ಮಂಗಳವಾರ, ಜೂನ್ 22, 2021
28 °C
ಜೋ ಬೈಡನ್‌ ಮನದಲ್ಲಿ ಈಗಲೂ ಉಳಿದಿರುವ ಪ್ರಶ್ನೆ

ಜೊ ಬೈಡನ್‌ಗೆ ವಾಣಿಜ್ಯ ನಗರಿಯ ನಂಟು?

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಟಿಕ್‌ ಪಕ್ಷದಿಂದ ಸ್ಪರ್ಧಿಸುತ್ತಿರುವ ಜೋ ಬೈಡನ್‌ಗೂ ಭಾರತದ ಮುಂಬೈಗೂ ಏನಾದರೂ ನಂಟು ಇರಬಹುದಾ?
ಈ ಪ್ರಶ್ನೆ ಸ್ವತಃ ಜೋ ಬೈಡನ್‌ಗೆ ಕಾಡಿದ್ದಂತೂ ನಿಜ. ಅದು ಈಗಲ್ಲ, ಐದು ದಶಕಗಳ ಹಿಂದೆ. ಜೋ ಬೈಡನ್ ಅವರು ಭಾರತೀಯರನ್ನು ಭೇಟಿಯಾದಾಗಲೆಲ್ಲ ಈ ಮುಂಬೈ ನಂಟಿನ ಕಥೆಯನ್ನು ಹೇಳುವುದನ್ನು ಮರೆಯುವುದಿಲ್ಲ.
ಬೈಡನ್‌ ಅವರ ಮುಂಬೈ ನಂಟಿನ ಕಥೆ ಆರಂಭವಾಗುವುದು 1972ರಲ್ಲಿ. ಆ ಸಮಯದಲ್ಲಿ ಬೈಡನ್ ಮೊದಲ ಬಾರಿಗೆ ಸೆನೆಟರ್ ಆಗಿ ಆಯ್ಕೆಯಾಗಿರುತ್ತಾರೆ. ಆಗ ಅವರಿಗೆ ಮುಂಬೈನಿಂದ ಶುಭ ಹಾರೈಕೆಯ ಪತ್ರವೊಂದು ಬಂದಿತ್ತು.  ಆ ಪತ್ರದ ಕೊನೆಯಲ್ಲಿ ಬೈಡನ್ ಎಂದು ಬರೆದಿತ್ತು. ಆ ಪತ್ರ ಬರೆದ ವ್ಯಕ್ತಿ ತಮ್ಮಿಬ್ಬರ ನಡುವೆ ರಕ್ತ ಸಂಬಂಧವಿದೆ ಎಂದು ಉಲ್ಲೇಖಿಸಿದ್ದನಂತೆ.

ಆ ಪತ್ರವನ್ನಿಟ್ಟುಕೊಂಡು ಈ ’ಬೈಡನ್ ಫ್ರಂ ಮುಂಬೈ’ ಯಾರು ? ನನ್ನ ಕುಟುಂಬಕ್ಕೂ ಮುಂಬೈಗೂ ಏನಾದರೂ ಸಂಬಂಧವಿರಬಹುದೇ ? ಎಂದು ಹುಡುಕಾಟ ಆರಂಭಿಸಿದರು ಜೋ ಬೈಡನ್. ಆದರೆ ಯಾವುದೇ ಸುಳಿವು ಸಿಗುವುದಿಲ್ಲ. ಕೊನೆಗೆ  ರಾಜಕೀಯ ಚಟುವಟಿಕೆಗಳಲ್ಲಿ ನಿರತರಾಗಿದ್ದರಿಂದ ಆ ಕೆಲಸವನ್ನು ಮುಂದುವರಿಸಲು ಅವರಿಗೆ ಸಾಧ್ಯವಾಗಲಿಲ್ಲ.  

ಈಗ್ಗೆ ಐದು ವರ್ಷಗಳ ಹಿಂದೆ ಮುಂಬೈನಲ್ಲಿ ಬೈಡನ್‌ ಹೆಸರಿನ ಐವರು ಇದ್ದಾರೆಂದು ಜೊ ಅವರಿಗೆ ತಿಳಿದು ಬಂತು. ಆಗಲೂ ಜೊ ಅವರು ’ಬೈಡನ್ ಫ್ರಂ ಮುಂಬೈ’ ಹೆಸರಿನವರೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನ ನಡೆಸಿದ್ದರಂತೆ. 
ಜೊ ಬೈಡನ್, ಅಮೆರಿಕದ ಉಪಾಧ್ಯಕ್ಷರಾದ ನಂತರ ಜುಲೈ 24, 2013ರಂದು ಭಾರತಕ್ಕೆ ಭೇಟಿ ನೀಡಿದ್ದರು. ಅಂದು ಮುಂಬೈನ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್‌ನಲ್ಲಿ ಮಾಡಿದ ಭಾಷಣದಲ್ಲೂ ’ಬೈಡನ್ ಫ್ರಂ ಮುಂಬೈ’ ಕಥೆ ಹೇಳುತ್ತಾ, ಭಾರತದ ವಾಣಿಜ್ಯನಗರಿಯೊಂದಿಗಿರುವ ಸಂಬಂಧದ ಬಗ್ಗೆ ಖುಷಿಯಿಂದ ಹೇಳಿಕೊಂಡಿದ್ದರು. 

ಇದಾದ ಕೆಲವು ವರ್ಷಗಳ ನಂತರ ವಾಷಿಂಗ್ಟನ್ ಡಿಸಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ತಮ್ಮ ಪೂರ್ವಿಕರು 1700ರ ಸಮಯದಲ್ಲಿ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ಭಾರತಕ್ಕೆ ಭೇಟಿ ನೀಡುತ್ತಿದ್ದರು. ಆಗ ಮುಂಬೈಗೂ ಹೋಗಿರಬಹುದು’ ಎಂದು ಹೇಳಿದ್ದಾರೆ. 

ಅಷ್ಟೇ ಅಲ್ಲ, 1848ರಲ್ಲಿ ಬ್ರಿಟಿಷ್ ಈಸ್ಟ್ ಇಂಡಿಯಾ ಟೀ ಕಂಪನಿಯಲ್ಲಿ ಕ್ಯಾಪ್ಟನ್ ಆಗಿದ್ದ ಜೋ ಬಿಡೆನ್ ಅವರ ಪೂರ್ವಿಕರೊಬ್ಬರು ಭಾರತೀಯ ಮೂಲದ ಮಹಿಳೆಯನ್ನು ಮದುವೆಯಾಗಿ ಮುಂಬೈನಲ್ಲೇ ನೆಲೆಸಿದ್ದರು ಎಂಬುದನ್ನು ಉಲ್ಲೇಖಿಸಿದ್ದರು.
ಒಟ್ಟಾರೆ, ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದದಿಂದ ಸ್ಪರ್ಧಿಸುತ್ತಿರುವ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿಗಳಿಬ್ಬರಿಗೂ ಭಾರತದ ನಂಟಿದೆ ಎನ್ನುವಂತಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು