ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾರಾಷ್ಟ್ರ ಸುರಕ್ಷಿತವಲ್ಲ ಎನ್ನುವವರಿಗೆ ಇಲ್ಲಿ ಬದುಕುವ ಹಕ್ಕಿಲ್ಲ: ಗೃಹ ಸಚಿವ

ಮುಂಬೈ ಅನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ್ದ ನಟಿ ಕಂಗನಾ
Last Updated 4 ಸೆಪ್ಟೆಂಬರ್ 2020, 12:52 IST
ಅಕ್ಷರ ಗಾತ್ರ

ಮುಂಬೈ: ‘ಮಹಾರಾಷ್ಟ್ರ ಅಥವಾ ಮುಂಬೈ ಸುರಕ್ಷಿತವಲ್ಲ ಎಂದು ಯೋಚಿಸುವವರಿಗೆ ಈ ರಾಜ್ಯದಲ್ಲಿ ಬದುಕುವ ಹಕ್ಕಿಲ್ಲ’ ಎಂದು ನಟಿ ಕಂಗನಾ ರನೌತ್‌ ಅವರ ಹೆಸರನ್ನು ಉಲ್ಲೇಖಿಸದೆ ಮಹಾರಾಷ್ಟ್ರ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಹೇಳಿದ್ದಾರೆ.

ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ(ಪಿಒಕೆ) ಹೋಲಿಸಿದ್ದ ಕಂಗನಾ, ಮುಂಬೈ ಪೊಲೀಸರನ್ನೂ ಟ್ವೀಟ್‌ ಮೂಲಕ ಟೀಕಿಸಿದ್ದರು. ಮೂವಿ ಮಾಫಿಯಾಗಿಂತ ನಾನು ಮುಂಬೈ ಪೊಲೀಸರನ್ನು ಕಂಡರೆ ಹೆದರುತ್ತೇನೆ ಎಂದು ಉಲ್ಲೇಖಿಸಿದ್ದರು. ಇಂಥ ಹೇಳಿಕೆಗಳು ‘ಅಸಂಬದ್ಧ’ ಎಂದೂ ದೇಶ್‌ಮುಖ್‌ ಟೀಕಿಸಿದ್ದಾರೆ. ಮುಂಬೈ ಪೊಲೀಸರನ್ನು ಶ್ಲಾಘಿಸಿದ ದೇಶ್‌ಮುಖ್‌, ಹಲವು ಬಾರಿ ನಮ್ಮ ಪೊಲೀಸರನ್ನು ಬ್ರಿಟನ್‌ನ ಸ್ಕಾಟ್‌ಲೆಂಡ್‌ಯಾರ್ಡ್‌ ಪೊಲೀಸರಿಗೆ ಹೋಲಿಸಲಾಗಿದೆ. ಮುಂಬೈ ಆಗಿರಲಿ ಅಥವಾ ಇಡೀ ಮಹಾರಾಷ್ಟ್ರವೇ ಆಗಿರಲಿ, ಇವೆರಡೂ ಪೊಲೀಸರ ಕೈಯಲ್ಲಿ ಸುರಕ್ಷಿತವಾಗಿದೆ. ಇಂಥ ಸಂದರ್ಭದಲ್ಲಿ ಈ ರೀತಿ ಹೇಳಿಕೆಗಳು ಅಸಂಬದ್ಧ’ ಎಂದು ನಾಗ್ಪುರದಲ್ಲಿ ದೇಶ್‌ಮುಖ್‌ ಪ್ರತಿಕ್ರಿಯೆ ನೀಡಿದರು.

ಟ್ವೀಟ್‌ ಜೊತೆಗೆ ಸೆ.1ರಂದು ಪ್ರಕಟವಾಗಿದ್ದ ವರದಿಯೊಂದನ್ನು ಕಂಗನಾ ಟ್ಯಾಗ್‌ ಮಾಡಿದ್ದರು. ‘ನಗರ ಪೊಲೀಸರ ಬಗ್ಗೆ ಅವರಿಗೆ ಭಯವಿದ್ದರೆ ಅವರು ಮುಂಬೈಗೆ ಬರುವುದೇ ಬೇಡ’ ಎಂಬ ಶಿವಸೇನಾ ನಾಯಕ ಸಂಜಯ್‌ ರಾವುತ್‌ ಹೇಳಿಕೆ ಆ ವರದಿಯಲ್ಲಿ ಇತ್ತು. ಬಾಲಿವುಡ್‌ನಲ್ಲಿ ಇರುವ ಡ್ರಗ್‌ ಮಾಫಿಯಾವನ್ನು ಬಹಿರಂಗಗೊಳಿಸಲು ನನಗೆ ಹರಿಯಾಣ ಅಥವಾ ಹಿಮಾಚಲ ಪ್ರದೇಶ ಪೊಲೀಸರ ಭದ್ರತೆ ಬೇಕು, ಬದಲಾಗಿ ಮುಂಬೈ ಪೊಲೀಸರ ರಕ್ಷಣೆಯನ್ನು ನಾನು ಸ್ವೀಕರಿಸುವುದಿಲ್ಲ ಎಂದೂ ಕಂಗನಾ ಹೇಳಿದ್ದರು.

ಕಂಗನಾ ಹೇಳಿಕೆಯನ್ನು ಶಿವಸೇನಾ ಜೊತೆಗೆ ಮೈತ್ರಿ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‌ ಹಾಗೂ ಎನ್‌ಸಿಪಿಯೂ ಖಂಡಿಸಿದೆ.

ಕ್ರಮ ಕೈಗೊಳ್ಳಿ: ‘ನಗರ ಪೊಲೀಸರ ಹೆಸರಿಗೆ ಅಪಖ್ಯಾತಿ ತರುತ್ತಿರುವವರ ವಿರುದ್ಧ ಮಹಾರಾಷ್ಟ್ರ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಶಿವಸೇನಾ ನಾಯಕ ಸಂಜಯ್‌ ರಾವುತ್‌ ಆಗ್ರಹಿಸಿದ್ದಾರೆ.

ಮುಂಬೈಯನ್ನು ಪಿಒಕೆಗೆ ಹೋಲಿಸುವ ಕಂಗನಾ, ಮೊದಲು ಪಿಒಕೆಗೆ ಹೋಗಿ ಸುತ್ತಾಡಿ ಬರಲಿ. ತಮ್ಮ ಜೀವವನ್ನೇ ಪಣಕ್ಕಿಟ್ಟು ಪೊಲೀಸರು ಈ ನಗರದ ರಕ್ಷಣೆ ಮಾಡುತ್ತಿದ್ದಾರೆ. ಈ ನಗರಕ್ಕೆ ಸಂಬಂಧಿಸದೇ ಇರುವವರು ಈ ರೀತಿ ಹೇಳಿಕೆ ನೀಡುತ್ತಿದ್ದು, ಇವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ಮುಂಬೈ ಪೊಲೀಸರ ಹೆಸರು ಕೆಡಿಸುವುದರ ಹಿಂದೆ ದೊಡ್ಡ ಪಿತೂರಿಯೇ ಇದೆ. ಮಹಾರಾಷ್ಟ್ರದ ಅಸ್ಮಿತೆಯ ಮೇಲೆಯೇ ದಾಳಿ ನಡೆಸುತ್ತಿರುವವರಿಗೆ ಬೆಂಬಲವಾಗಿ ನಿಂತಿರುವ ರಾಜಕೀಯ ಪಕ್ಷಗಳು, ಮುಂಬೈನಲ್ಲಿ ಮತ ಕೇಳುವ ಹಕ್ಕು ಹೊಂದಿಲ್ಲ’ ಎಂದರು.

‘ಕಂಗನಾ ವಿಚಾರವಿರಿಸಿಕೊಂಡು ಬಿಜೆಪಿ ವಿರುದ್ಧ ಆರೋಪ ಮಾಡುವುದನ್ನು ಸಂಜಯ್‌ ರಾವುತ್‌ ನಿಲ್ಲಿಸಬೇಕು. ಅವರ ಹೇಳಿಕೆಗೆ ಬಿಜೆಪಿಯನ್ನು ತಳಕು ಹಾಕಬೇಡಿ’ ಎಂದು ಬಿಜೆಪಿ ನಾಯಕ ಆಶಿಶ್‌ ಶೆಲ್ಲರ್‌ ಹೇಳಿದ್ದಾರೆ.

ಸೆ.9ಕ್ಕೆ ಬರುತ್ತಿದ್ದೇನೆ: ಪ್ರಸ್ತುತ ಮನಾಲಿಯಲ್ಲಿ ಇರುವ ಕಂಗನಾ, ಸೆ.9ರಂದು ಮುಂಬೈಗೆ ಆಗಮಿಸುತ್ತಿರುವುದಾಗಿ, ಸಮಯವನ್ನೂ ತಿಳಿಸುವುದಾಗಿ ಟ್ವೀಟ್‌ ಮೂಲಕ ಹೇಳಿದ್ದು, ಧೈರ್ಯವಿದ್ದರೆ ತಡೆಯಿರಿ ಎಂದಿದ್ದಾರೆ.

ಶಿವಸೇನಾ ಮಹಿಳಾ ಘಟಕದಿಂದ ಪ್ರತಿಭಟನೆ: ಕಂಗನಾ ಹೇಳಿಕೆ ಖಂಡಿಸಿ, ಠಾಣೆಯ ಶಿವಸೇನಾ ಮಹಿಳಾ ಘಟಕದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು. ಮುಂಬೈ ಸುರಕ್ಷಿತವಲ್ಲದೇ ಇದ್ದರೆ, ನಗರ ಬಿಟ್ಟು ಹೋಗುವಂತೆ ಪ್ರತಿಭಟನಕಾರರು ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT