ಸೋಮವಾರ, ಸೆಪ್ಟೆಂಬರ್ 20, 2021
21 °C

ಕರ್ನಾಟಕ–ಆಂಧ್ರ ಗಡಿರೇಖೆ ಗುರುತಿಸುವ ಕಾರ್ಯ ಪೂರ್ಣ; ವಿವಾದ ಅಂತ್ಯ: ಕೇಂದ್ರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ‘ಬಳ್ಳಾರಿ ಸಮೀಪದ ಮೀಸಲು ಅರಣ್ಯ ಪ್ರದೇಶಕ್ಕೆ ಅಂಟಿಕೊಂಡಿರುವ ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿರೇಖೆ ಗುರುತಿಸುವ ಸಮೀಕ್ಷಾ ಕಾರ್ಯ ಪೂರ್ಣಗೊಂಡಿದ್ದು, ಗಡಿ ವಿವಾದ ಬಗೆಹರಿದಿದೆ’ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಬಿಜೆಪಿಯ ಕೆ.ಸಿ.ರಾಮಮೂರ್ತಿ ಅವರ ಪ್ರಶ್ನೆಗೆ ಲಿಖಿತ ಉತ್ತರದ ಮೂಲಕ ರಾಜ್ಯಸಭೆಗೆ ಈ ವಿಷಯ ತಿಳಿಸಿರುವ ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಾದ್ ರಾಯ್, ಓಬಳಾಪುರಂ ಗ್ರಾಮದ ಹತ್ತಿರ ಈ ಸಮೀಕ್ಷಾ ಕಾರ್ಯ ಪೂರ್ಣಗೊಳಿಸಲಾಗಿದೆ. ಉಭಯ ರಾಜ್ಯಗಳು ಪೂರ್ಣ ಸಮ್ಮತಿ ಸೂಚಿಸಿವೆ ಎಂದು ವಿವರಿಸಿದ್ದಾರೆ.

ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಬಳ್ಳಾರಿ ಮೀಸಲು ಅರಣ್ಯ ಪ್ರದೇಶದ ಬಳಿ ಉಭಯ ರಾಜ್ಯಗಳ ಗಡಿಯನ್ನು ಗುರುತಿಸಲು ಭಾರತೀಯ ಸರ್ವೇಯರ್ ಜನರಲ್ ಅವರು ಸಮೀಕ್ಷೆ ನಡೆಸಿ ಸಲ್ಲಿಸಿದ್ದ ವರದಿಯನ್ನು ಕೇಂದ್ರ ಸರ್ಕಾರ ಅನುಷ್ಠಾನಕ್ಕೆ ತಂದಿದೆ ಎಂದು ಸಚಿವರು ಹೇಳಿದ್ದಾರೆ.

ಸುದೀರ್ಘ ಚರ್ಚೆ ನಡೆಸಿ ಉಭಯ ರಾಜ್ಯಗಳ ಒಪ್ಪಿಗೆ ಪಡೆದು, ಔಪಚಾರಿಕವಾಗಿ ಗಡಿ ರೇಖೆಯನ್ನು ಗುರುತಿಸುವಂತೆ ಭಾರತೀಯ ಸರ್ವೇಯರ್ ಜನರಲ್ ಅವರನ್ನು ಕೋರಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ಸಮೀಕ್ಷೆಯಲ್ಲಿ ಸರ್ವೇ ಆಫ್‌ ಇಂಡಿಯಾದ ಅಧಿಕಾರಿಗಳು ಹಾಗೂ ಉಭಯ ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಂತರರಾಜ್ಯ ಗಡಿರೇಖೆ ಗುರುತಿಸುವ ಒಟ್ಟು 76 ಗಡಿ ಕಂಬಗಳನ್ನು ಅಳವಡಿಸಲಾಗಿದೆ. ಈ ಜಂಟಿ ಕಾರ್ಯದ ದಾಖಲೆಗಳಿಗೆ ಉಭಯ ರಾಜ್ಯ ಸರ್ಕಾರಗಳ ಅಧಿಕಾರಿಗಳ ಸಹಿಯನ್ನು ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಅಂತರರಾಜ್ಯ ಗಡಿ ಪ್ರದೇಶಕ್ಕೆ ಅಂಟಿಕೊಂಡಿರುವ ಗಣಿಗಳಲ್ಲಿ ಅತ್ಯುತ್ಕೃಷ್ಟ ಕಬ್ಬಿಣದ ಅದಿರು ಲಭ್ಯ ಇರುವುದರಿಂದ ಗಡಿ ವಿವಾದ ಉಂಟಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು