ಗುರುವಾರ , ಆಗಸ್ಟ್ 18, 2022
25 °C

ಜಮ್ಮು–ಕಾಶ್ಮೀರವನ್ನು ಕರ್ನಾಟಕ ಮಾಡುವ ಪ್ರಯತ್ನ ತಡೆಯಬೇಕಿದೆ: ಒಮರ್‌ ಅಬ್ದುಲ್ಲಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶ್ರೀನಗರ: ‘ಕಣಿವೆ ರಾಜ್ಯವನ್ನು ಕರ್ನಾಟಕ ಮಾಡುವ ಪ್ರಯತ್ನವನ್ನು ತಡೆಯಬೇಕಿದೆ’ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿ.ಎಂ ಹಾಗೂ ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಉಪಾಧ್ಯಕ್ಷ ಒಮರ್‌ ಅಬ್ದುಲ್ಲಾ ಹೇಳಿದರು.

ಶ್ರೀನಗರದಲ್ಲಿ ಬುಧವಾರ ಪಕ್ಷದ ಯುವ ಮುಖಂಡರೊಂದಿಗೆ ಸಂವಾದದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್‌ಗೆ ನಿರ್ಬಂಧ ಹೇರಿ ವಿವಾದ ಎಬ್ಬಿಸಲಾಗಿದೆ. ಧರ್ಮದ ವಿಚಾರದಲ್ಲಿ ಮೂಗು ತೂರಿಸುವ ಕೆಲಸವನ್ನು ಯಾವುದೇ ಸರ್ಕಾರಗಳು ಮಾಡಬಾರದು’ ಎಂದು ಸಲಹೆ ನೀಡಿದರು.

‘ನಮ್ಮ ಜೀವನ ಶೈಲಿಯೇ ನಿಮಗೆ ಸಮಸ್ಯೆಯಾಗಿದೆ ಯಾಕೆ? ಆಜಾನ್‌ಗಾಗಿ ಲೌಡ್‌ ಸ್ವೀಕರ್‌ ಬಳಸಬೇಡಿ ಎಂದು ಹೇಳುತ್ತಿರುವುದೇಕೆ? ನಾವು ದೇವಸ್ಥಾನಗಳಲ್ಲಿ ಧ್ವನಿವರ್ಧಕ ಬಳಸಬೇಡಿ ಎಂದೂ ಹೇಳಿಲ್ಲ. ಹಲಾಲ್‌ ಕಟ್‌ ಮಾಂಸ ಖರೀದಿಸಬೇಡಿ ಎಂದು ಹೇಳುತ್ತಿದ್ದೀರೇಕೆ? ಹಲಾಲ್‌ ಮಾಂಸ ತಿನ್ನುವಂತೆ ನಿಮ್ಮನ್ನು ಒತ್ತಾಯಪಡಿಸಿಲ್ಲ. ಮುಸ್ಲಿಂತೇರರಿಗೆ ಹಲಾಲ್‌ ಕಟ್‌ ಮಾಂಸ ತಿನ್ನುವಂತೆ ಒತ್ತಾಯಪಡಿಸಿದ ಯಾವುದಾದರೂ ಒಬ್ಬ ಮುಸ್ಲಿಮನನ್ನು ತೋರಿಸಿ ಎಂದು ಸವಾಲು ಹಾಕಿದರು.

‘ದೇಶದಲ್ಲಿ ಪ್ರತಿಯೊಬ್ಬರಿಗೂ ಅವರವರ ಧರ್ಮವನ್ನು ಪಾಲಿಸುವ ಹಕ್ಕನ್ನು ನಮ್ಮ ಸಂವಿಧಾನ ನೀಡಿದೆ. ಸಂವಿಧಾನದಲ್ಲಿ ನಮ್ಮದು ಜಾತ್ಯತೀತ ದೇಶ ಎಂದು ಪ್ರತಿಪಾದಿಸಲಾಗಿದೆ. ಇದರ ಪ್ರಕಾರ ಎಲ್ಲ ಧರ್ಮಗಳು ಒಂದೇ. ಎಲ್ಲ ಧರ್ಮಗಳನ್ನು ಸಮಾನವಾಗಿ ಸ್ವೀಕರಿಸಿರುವ ಜಾತ್ಯತೀತ ಭಾರತವನ್ನು ಜಮ್ಮು –ಕಾಶ್ಮೀರ ಸೇರಿಕೊಂಡಿದೆ. ನಾವು ಒಪ್ಪಿಕೊಂಡ ದೇಶವಾಗಿ ಇಂದು ಭಾರತ ಉಳಿದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಒಂದು ಧರ್ಮವು ಮತ್ತೊಂದು ಧರ್ಮಕ್ಕಿಂತ ಶ್ರೇಷ್ಠವೆಂದು ಪರಿಗಣಿಸುವುದಾಗಿ ನಮಗೆ ಹೇಳಿಲ್ಲ. ಒಂದು ವೇಳೆ ಹಾಗೆ ಹೇಳಿದ್ದರೆ ನಮ್ಮ ನಿರ್ಧಾರವೂ ಬೇರೆಯಾಗಿರುತ್ತಿತ್ತೇನೊ’ ಎಂದು ಅವರು ಹೇಳಿದರು.

‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸಿರುವ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಗಳನ್ನು ಬೇಸಿಗೆಯ ರಜೆ ನಂತರ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂಕೋರ್ಟ್‌ ಹೇಳಿರುವುದು ಸ್ವಾಗತಾರ್ಹ.ಮುಖ್ಯ ನ್ಯಾಯಮೂರ್ತಿಗಳು ತ್ವರಿತಗತಿಯಲ್ಲಿ ವಿಚಾರಣೆ ನಡೆಸಬೇಕು’ ಎಂದು ಮನವಿ ಮಾಡಿದರು.

‘ಕ್ಷೇತ್ರ ಪುನರ್‌ ವಿಂಗಡಣಾ ಆಯೋಗದ ಅಸ್ತಿತ್ವವೇ ಕಾನೂನುಬಾಹಿರ ಎಂದು ನಾವು (ಎನ್‌ಸಿ) ಈಗಾಗಲೇ ಆಯೋಗಕ್ಕೆ ತಿಳಿಸಿದ್ದೇವೆ. ಜಮ್ಮು ಮತ್ತು ಕಾಶ್ಮೀರ ಮರುಸಂಘಟನಾ ಕಾಯ್ದೆಯ ಸಿಂಧುತ್ವವನ್ನು ನಾವು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದೇವೆ’ ಎಂದರು.

‘2019 ರ ಆಗಸ್ಟ್‌ನಿಂದ ಕಣಿವೆಯಲ್ಲಿ ಆಗಬಾರದ ಹಲವು ಬದಲಾವಣೆಗಳಾಗಿವೆ. ವಿಚಾರಣೆ ಮತ್ತಷ್ಟು ವಿಳಂಬವಾದರೆ ಹಳೆಯಸ್ಥಿತಿಗೆ ಮರಳುವುದು ಕಷ್ಟವಾಗುತ್ತದೆ. ಅದಕ್ಕಾಗಿಯೇ ಕೋರ್ಟ್‌ ತ್ವರಿತಗತಿಯಲ್ಲಿ ವಿಚಾರಣೆ ಕೈಗೆತ್ತಿಕೊಂಡು ತೀರ್ಪು ನೀಡಲಿ ಎಂದು ನಾವು ಬಯಸುತ್ತಿದ್ದೇವೆ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು