ಶನಿವಾರ, ಜನವರಿ 29, 2022
23 °C
ಕಾಶ್ಮೀರ ಸೇಬು ಬೆಳೆಗಾರರು ಹಾಗೂ ಮಾರಾಟಗಾರರ ಒತ್ತಾಯ

ಇರಾನಿ ಸೇಬು ‘ಅಕ್ರಮ’ ಆಮದು ನಿಷೇಧಿಸಿ: ಕಾಶ್ಮೀರ ಸೇಬು ಬೆಳೆಗಾರರ ಒತ್ತಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಇರಾನಿನಿಂದ ಸೇಬನ್ನು ಅಕ್ರಮವಾಗಿ ಆಮದು ಮಾಡಿಕೊಂಡು ದೇಶಿಯ ಮಾರುಕಟ್ಟೆಯಲ್ಲಿ ಕಡಿಮೆ ದರಕ್ಕೆ ಮಾರಾಟ ಮಾಡುತ್ತಿರುವ ಪರಿಣಾಮ ಕಾಶ್ಮೀರದ ಸೇಬು ಬೆಳೆಗಾರರು ಹಾಗೂ ವರ್ತಕರಿಗೆ ಭಾರಿ ಪ್ರಮಾಣದ ನಷ್ಟ ಉಂಟಾಗುತ್ತಿದೆ. ಹಾಗಾಗಿ ಇರಾನಿನ ಸೇಬು ಆಮದು ನಿಷೇಧಿಸುವಂತೆ ಎಂದು ಕಾಶ್ಮೀರ ಸೇಬು ಬೆಳೆಗಾರರು ಹಾಗೂ ಮಾರಾಟಗಾರರ ಒಕ್ಕೂಟ ಒತ್ತಾಯಿಸಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾಶ್ಮೀರ ಸೇಬು ಬೆಳೆಗಾರರು ಮಾರಾಟಗಾರರ ಒಕ್ಕೂಟದ ಅಧ್ಯಕ್ಷ ಬಶೀರ್‌ ಅಹ್ಮದ್‌ ಬಶೀರ್‌, 'ಅಕ್ರಮವಾಗಿ ಇರಾನಿನಿಂದ ಬರುವ ಸೇಬಿನಿಂದ ಕಾಶ್ಮೀರದ ಸೇಬಿನ ಮಾರುಕಟ್ಟೆಗೆ ತೀವ್ರ ಹೊಡೆತ ಬಿದ್ದಿದೆ. ಹಾಗಾಗಿ ಭಾರತದ ಮಾರುಕಟ್ಟೆಗೆ ಇರಾನಿ ಸೇಬುಗಳನ್ನು ಅಮದು ಮಾಡಿಕೊಳ್ಳಬಾರದು’ ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದರು. 

‘ಕಾಶ್ಮೀರ ಸೇಬಿಗೆ ಮಾರುಕಟ್ಟೆಯಲ್ಲಿ ಒಂದು ಬಾಕ್ಸ್‌ಗೆ ₹ 1200 ಇದ್ದ ಬೆಲೆ ಈಗ 600ಕ್ಕೆ ಇಳಿದಿದೆ. ನಮಗೆ ಸೇಬು ಬೆಳೆಯಲು 600 ಖರ್ಚಾಗುತ್ತದೆ. ಸಾಗಣೆ ವೆಚ್ಚ ₹ 300 ಸೇರಿ ಒಟ್ಟು ₹ 900 ಖರ್ಚಾಗುತ್ತದೆ. ಅಲ್ಲದೇ ಶೇ 12ರಷ್ಟಿದ್ದ ಜಿಎಸ್‌ಟಿ ಶೇ 18ರಷ್ಟು ಹೆಚ್ಚಳವಾಗಿದೆ. ಹೀಗಿರುವಾಗ ನಾವು ಕಡಿಮೆ ದರಕ್ಕೆ ಹೇಗೆ ಸೇಬು ಮಾರಾಟ ಮಾಡಲು ಸಾಧ್ಯ’ ಎಂದು ಅವರು ಪ್ರಶ್ನಿಸಿದರು.

‘ಭಾರತದ ಮಾರುಕಟ್ಟೆಗೆ ಬರುತ್ತಿರುವ ತೆರಿಗೆ ರಹಿತ ಇರಾನಿನ ಸೇಬಿನಿಂದ ಕಾಶ್ಮೀರದ ಸೇಬು ಬೆಳಗಾರರಿಗೆ ನಷ್ಟ  ಅನುಭವಿಸುವಂತಾಗಿದ್ದು, ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಿ ನಷ್ಟದಲ್ಲಿರುವ ನಮಗೆ ಅನುಕೂಲ ಮಾಡಿಕೊಡಬೇಕು’ ಎಂದು ಒತ್ತಾಯಿಸಿದ ಅವರು, ಕೇಂದ್ರ ಕೃಷಿ ಮಂತ್ರಿ ಭೇಟಿ, ಪ್ರಧಾನಿ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ಗೆ ಪತ್ರ ಬರೆದರೂ ಪ್ರಯೋಜನವಾಗಿಲ್ಲ. ಹಲವು ಮನವಿಗಳ ಹೊರತಾಗಿಯೂ ಕೇಂದ್ರ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲದ ಕಾರಣ ಸೇಬು ಬೆಳೆಗಾರರು ನಷ್ಟದಲ್ಲಿದ್ದಾರೆ ಎಂದು ಅಳಲು ತೋಡಿಕೊಂಡರು.

 ಪ್ರಧಾನಿ ಮೋದಿ ಅವರು ‘ಮೇಕ್‌ ಇನ್‌ ಇಂಡಿಯಾ’ ಅಂತ ಹೇಳುತ್ತಾರೆ. ಆದರೆ ಹೊರಗಿನ ಸೇಬು ಏತಕ್ಕಾಗಿ ತರಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ.ದುಬೈ ಹಾಗೂ ವಾಘಾ ಗಡಿ ಮೂಲಕ ದೇಶಕ್ಕೆ ಸೇಬು ಆಮದು ಮಾಡಿಕೊಂಡು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯಲ್ಲಿ ಇರಾನಿ ಸೇಬು ಮಾರುಕಟ್ಟೆಗೆ ಬಂದಿರುವುದರಿಂದ ನಮಗೆ ನಷ್ಟ ಉಂಟಾಗಿದೆ. ಸದ್ಯ ಸೇಬನ್ನು ಶೀತ ಸಂಗ್ರಹಾಗಾರ ಹಾಗೂ ಗೋದಾಮುಗಳಲ್ಲಿ ಇಡಲಾಗಿದ್ದು, ಪರಿಸ್ಥಿತಿ ಸುಧಾರಿಸದಿದ್ದರೆ ಅದೆಲ್ಲ ಹಾಳಾಗುತ್ತದೆ. ಇರಾನಿನಿಂದ ಸೇಬು ತರಿಸುವುದಾದರೆ ಶೇ 100 ರಷ್ಟು ಆಮದು ಶುಲ್ಕ ವಿಧಿಸಬೇಕು ಎಂದು ಒತ್ತಾಯಿಸಿದರು.

‘ಸುಸ್ಥಿತಿಯಲ್ಲಿಲ್ಲದ ಕಾಶ್ಮೀರದ ಆರ್ಥಿಕತೆಗೆ ಇಲ್ಲಿನ ತೋಟಗಾರಿಕೆ ಬೆಳೆಗಳಿಂದ 10ರಿಂದ 12 ಸಾವಿರ ಕೋಟಿ ಆದಾಯ ಬರುತ್ತಿದೆ. ಅಲ್ಲದೇ ಕಣಿವೆಯ ಲಕ್ಷಾಂತರ ಜನಕ್ಕೆ ಜೀವನೋಪಾಯದ ಮಾರ್ಗವಾಗಿದೆ’ ಎಂದು ಅವರು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು