ಮಂಗಳವಾರ, ಮಾರ್ಚ್ 21, 2023
27 °C

ಉಗ್ರರಿಂದ ಮತ್ತೊಬ್ಬ ಕಾಶ್ಮೀರಿ ಪಂಡಿತನ ಹತ್ಯೆ

ಪಿಟಿಐ Updated:

ಅಕ್ಷರ ಗಾತ್ರ : | |

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶನಿವಾರ ಕಾಶ್ಮೀರಿ ಪಂಡಿತ ರೈತರೊಬ್ಬರನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ದಕ್ಷಿಣ ಕಾಶ್ಮೀರ ಜಿಲ್ಲೆಯ ಚೌಧರಿ ಗುಂಡ್ ಪ್ರದೇಶದ ನಿವಾಸಿ ಪುರನ್ ಕ್ರಿಶನ್ ಭಟ್ ಅವರು ಶೋಪಿಯಾನ್‌ನಲ್ಲಿ ಹಣ್ಣಿನ ತೋಟಕ್ಕೆ ಹೋಗುತ್ತಿದ್ದಾಗ ಉಗ್ರರು ಗುಂಡು ಹಾರಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವೈದ್ಯರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು‘ ಎಂದು ಕಾಶ್ಮೀರ ವಲಯ ಪೊಲೀಸರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ಘಟನೆ ನಡೆದ ಪ್ರದೇಶ ಸುತ್ತುವರಿಯಲಾಗಿದ್ದು, ಉಗ್ರರ ಸೆರೆಗೆ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು.

‘ಕ್ರಿಶನ್ ಭಟ್ ಮೇಲೆ ನಡೆಸಿದ ದಾಳಿ ಹೇಡಿತನದ ಕೃತ್ಯವಾಗಿದೆ. ದುಷ್ಕರ್ಮಿಗಳು ಮತ್ತು ಭಯೋತ್ಪಾದಕರಿಗೆ ಸಹಾಯ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಜನರಿಗೆ ಭರವಸೆ ನೀಡುತ್ತೇನೆ’ ಎಂದು ಲೆಫ್ಟಿನೆಂಟ್ ಗವರ್ನರ್‌ ಮನೋಜ್ ಸಿನ್ಹಾ ಟ್ವೀಟ್‌ ಮಾಡಿದ್ದಾರೆ.

ಸಂಬಂಧಿಕರೊಬ್ಬರ ಪ್ರಕಾರ, ‘ಮೃತ ಭಟ್‌ ಅವರಿಗೆ ಇಬ್ಬರು ಶಾಲೆಗೆ ಹೋಗುವ ಮಕ್ಕಳಿದ್ದಾರೆ. ಅವರು ಮನೆಯಿಂದ ಹೊರಬರಲಿಲ್ಲ. ನಮಗೆ ತುಂಬಾ ಭಯವಾಗಿದೆ’ ಎಂದು ಅವರು ಹೇಳಿದರು.

ಈ ದಾಳಿ ಕಣಿವೆಯ ಅಲ್ಪಸಂಖ್ಯಾತ ಸಮುದಾಯದವರಲ್ಲಿ ಭಯದ ಭಾವನೆ ಸೃಷ್ಟಿಸಿದೆ. ಕಳೆದ ಅಕ್ಟೋಬರ್‌ನಿಂದ ಕಾಶ್ಮೀರದಲ್ಲಿ ವಲಸೆ ಕಾರ್ಮಿಕರು ಮತ್ತು ಸ್ಥಳೀಯರಲ್ಲದವರ ಮೇಲೆ ಉಗ್ರರು ದಾಳಿ ಹೆಚ್ಚಿಸಿದ್ದಾರೆ.

ಆ.16 ರಂದು ಅದೇ ಜಿಲ್ಲೆಯ ಚೋಟಿಗಾಮ್ ಗ್ರಾಮದಲ್ಲಿ ಉಗ್ರರ ಗುಂಡಿನ ದಾಳಿಗೆ ಪಂಡಿತ್ ರೈತ ಮೃತಪಟ್ಟಿದ್ದರು. ಘಟನೆಯಲ್ಲಿ ಅವರ ಸಹೋದರ ಗಾಯಗೊಂಡಿದ್ದರು. 

‘ಕಾಶ್ಮೀರದಲ್ಲಿ ಯಾವುದೇ ಸಮುದಾಯದ ಸದಸ್ಯರು ಸುರಕ್ಷಿತವಾಗಿಲ್ಲ. ಕಾಶ್ಮೀರಿ ಪಂಡಿತರಿಗೆ ಒಂದೇ ಒಂದು ಆಯ್ಕೆ ಉಳಿದಿದೆ.  ಕಾಶ್ಮೀರ ತೊರೆಯಿರಿ ಅಥವಾ ಸ್ಥಳೀಯ ಜನರ ಬೆಂಬಲ ಹೊಂದಿರುವ ಧಾರ್ಮಿಕ ಮತಾಂಧ ಮನಸ್ಸುಗಳಿಂದ ಹತ್ಯೆಯಾಗುತ್ತೀರಿ’  ಎಂದು  ಕಾಶ್ಮೀರಿ ಪಂಡಿತ್ ಸಂಘರ್ಷ ಸಮಿತಿ (ಕೆಪಿಎಸ್‌ಎಸ್) ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು