ಶುಕ್ರವಾರ, ಮಾರ್ಚ್ 31, 2023
22 °C

‘ದಿ ಕಾಶ್ಮೀರ್‌ ಫೈಲ್ಸ್‌ ವಿವಾದ’: ಲಾಪಿಡ್‌ ಕ್ಷಮೆಯಾಚನೆಗೆ ಪಂಡಿತರ ಆಗ್ರಹ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

‘ದಿ ಕಾಶ್ಮೀರ್‌ ಫೈಲ್ಸ್‌’ ಹಿಂದಿ ಚಿತ್ರದ ಕುರಿತು 53ನೇ ಇಫಿ ಜ್ಯೂರಿ ಮುಖ್ಯಸ್ಥ ನಾದವ್‌ ಲಾಪಿಡ್ ಮಾಡಿರುವ ಟೀಕೆಗೆ ಕಾಶ್ಮೀರಿ ಪಂಡಿತರು ಆಕ್ರೋಶ ವ್ಯಕ್ತಪಡಿಸಿದ್ದು, ಹೇಳಿಕೆ ಕುರಿತು ಲಾಪಿಡ್‌ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದ್ದಾರೆ. 

ಸಮುದಾಯವೊಂದು ನಮ್ಮದೇ ದೇಶದಲ್ಲಿ ನಿರಾಶ್ರಿತರಾಗಿ ಬದುಕುವ ನೋವು ಒಬ್ಬ ವಿದೇಶನಿಗೆ ಅರ್ಥವಾಗುವುದಿಲ್ಲ ಎಂದು ಪಂಡಿತ ಸಮುದಾಯದ ಮುಖಂಡರು ಹೇಳಿದ್ದಾರೆ. 

ದಿ ಕಾಶ್ಮೀರ್‌ ಫೈಲ್ಸ್‌ ಚಿತ್ರವು ಅಸಭ್ಯ ಮತ್ತು ಕೀಳು ಅಭಿರುಚಿ ಹೊಂದಿದೆ. ರಾಜಕೀಯ ಪ್ರಚಾರ ಉದ್ದೇಶದ ಈ ಚಿತ್ರವು ಭಾರತದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಲು ಯೋಗ್ಯವಲ್ಲ ಎಂದು ಲಾಪಿಡ್‌ ಸೋಮವಾರ ಗೋವಾದಲ್ಲಿ ಮುಕ್ತಾಯಗೊಂಡ ಭಾರತೀಯ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪದಲ್ಲಿ ಹೇಳಿದ್ದರು. ಹೇಳಿಕೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆ ನಡೆಯುತ್ತಿದೆ. 

'ತನ್ನ ಗುರುತಿನ ಕಾರಣದಿಂದಲೇ ಕಿರುಕುಳಕ್ಕೊಳಗಾಗಿದ್ದ ಯಹೂದಿ ಸಮುದಾಯಕ್ಕೆ ಸೇರಿದ ವ್ಯಕ್ತಿಯಿಂದ ಈ ರೀತಿ ಮಾತು ಬಂದಿರುವುದನ್ನು ಕೇಳಲು ಆಶ್ಚರ್ಯವಾಗುತ್ತದೆ. 1990ರ ದಶಕದಲ್ಲಿನ ಕಾಶ್ಮೀರಿ ಪಂಡಿತರ ನೋವು ವಿದೇಶಿಗರ ಊಹೆಗೂ ನಿಲುಕದ್ದು’ ಎಂದು ಕಾಶ್ಮೀರಿ ಪಂಡಿತ್ ನೌಕರರ ನಾಯಕ ರಂಜನ್ ಜೋತ್ಶಿ ಹೇಳಿದ್ದಾರೆ. 

‘ಕಾಶ್ಮೀರ್‌ ಫೈಲ್ಸ್‌ ಚಿತ್ರದ ಪ್ರತಿ ದೃಶ್ಯವೂ 1990ರ ವಾಸ್ತವವನ್ನು ಬಿಂಬಿಸುತ್ತದೆ. ಆ ಅವಧಿಯಲ್ಲಿ ಸಣ್ಣ ಸಮುದಾಯವೊಂದು ಅನುಭವಿಸಿದ ಕಷ್ಟಗಳನ್ನು ಹೇಳುತ್ತದೆ. ಆ ಅವಧಿಯಲ್ಲಿನ ಕಾಶ್ಮೀರಿ ಪಂಡಿತ ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ, ದೌರ್ಜನ್ಯದ ಸಂಕಟಗಳು ಇಸ್ರೇಲಿ ಸಿನಿಮಾ ನಿರ್ದೇಶಕನಿಗೆ ಅರ್ಥವಾಗುವುದಿಲ್ಲ’ ಎಂದು ಅವರು ತಿಳಿಸಿದ್ದಾರೆ. 

‘‌ವಿವೇಕ್‌ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್‌ ಫೈಲ್ಸ್‌’ ಹಿಂದಿ ಚಿತ್ರದ ಕುರಿತ ಚರ್ಚೆಯು ಭಾರತ ಮತ್ತು ಇಸ್ರೇಲ್ ನಡುವಿನ ಸಂಬಂಧವನ್ನು ಮತ್ತಷ್ಟು ಬಲಪಡಿಸುತ್ತದೆ. ಈ ಚಿತ್ರದ ಕುರಿತು 53ನೇ ಇಫಿ ಜ್ಯೂರಿ ಮುಖ್ಯಸ್ಥ ನಾದವ್‌ ಲಾಪಿಡ್ ಮಾಡಿರುವ ಟೀಕೆ ಸಮರ್ಥನೀಯವಲ್ಲ’ ಎಂದು ಇಸ್ರೇಲ್ ಕಾನ್ಸುಲ್ ಜನರಲ್ ಕೊಬ್ಬಿ ಶೋಶಾನಿ ಹೇಳಿದ್ದಾರೆ. 

‘ನಾನು ಬೆಳಿಗ್ಗೆ ಮೊದಲು ಕರೆ ಮಾಡಿದ್ದು ಅನುಪಮ್ ಖೇರ್ ಅವರಿಗೆ. ಲಾಪಿಡ್‌ ಅವರ ವಿವಾದಿತ ಟೀಕೆ, ಅವರ ವೈಯಕ್ತಿಕ ಹೇಳಿಕೆಗಾಗಿ ನನ್ನ ಸ್ನೇಹಿತ ಅನುಪಮ್‌ ಬಳಿ ಕ್ಷಮೆಯಾಚಿಸಿರುವೆ. ಲಾಪಿಡ್‌ ಹೇಳಿಕೆಗೂ ಇಸ್ರೇಲ್‌ಗೂ ಅಧಿಕೃತ ಮತ್ತು ಅನಧಿಕೃತವಾಗಿಯೂ ಯಾವುದೇ ಸಂಬಂಧವಿಲ್ಲ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು