ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿಯಲ್ಲಿ ಲಾಕ್‌ಡೌನ್‌ ನಿಯಮ ಸಡಿಲಿಕೆ; ಮಾರ್ಗಸೂಚಿ ಪಾಲಿಸಲು ಕೇಜ್ರಿವಾಲ್‌ ಮನವಿ

Last Updated 7 ಜೂನ್ 2021, 6:10 IST
ಅಕ್ಷರ ಗಾತ್ರ

ನವದೆಹಲಿ: ‘ದೆಹಲಿಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ವಿಧಿಸಿರುವ ನಿರ್ಬಂಧಗಳನ್ನು ಸಡಿಲಗೊಳಿಸಲಾಗುತ್ತಿದ್ದು, ಈ ವೇಳೆ ಜನರು ಎಲ್ಲಾ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸೋಮವಾರ ಮನವಿ ಮಾಡಿದ್ದಾರೆ.

‘ಸೋಮವಾರದಿಂದ ಶೇಕಡ 50ರಷ್ಟು ಪ್ರಯಾಣಿಕರೊಂದಿಗೆ ಮೆಟ್ರೊ ರೈಲುಗಳು ಸಂಚರಿಸಲಿವೆ. ಸಮ–ಬೆಸ ಸಂಖ್ಯೆಯ ಆಧಾರದಲ್ಲಿ ಮಾರುಕಟ್ಟೆಗಳು ಮತ್ತು ಮಾಲ್‌ಗಳು ತೆರೆಯಬೇಕೆಂದು ನಿಬಂಧನೆ ವಿಧಿಸಲಾಗಿದೆ’ ಎಂದು ಕೇಜ್ರಿವಾಲ್‌ ಹೇಳಿದ್ದಾರೆ.

‘ದೆಹಲಿಯಲ್ಲಿ ಸೋಮವಾರದಿಂದ ಬಹುತೇಕ ಚಟುವಟಿಕೆಗಳು ಆರಂಭಗೊಳ್ಳಲಿವೆ. ಆದರೆ ಸೋಂಕನ್ನು ನಿಯಂತ್ರಿಸಲು ನಾವೆಲ್ಲರೂ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಆಗಾಗ ಕೈಗಳನ್ನು ಶುಚಿಗೊಳಿಸುವುದನ್ನು ಮಾಡುತ್ತಿರಬೇಕು. ಇದರಲ್ಲಿ ಯಾವುದೇ ನಿರ್ಲಕ್ಷ್ಯ ತೋರಬಾರದು’ ಎಂದು ಟ್ವೀಟ್‌ ಮಾಡಿದ್ದಾರೆ.

‘ನಾವು ಕೊರೊನಾ ಸೋಂಕಿನಿಂದಲೂ ದೂರವಿರಬೇಕು. ಇದರೊಂದಿಗೆ ಆರ್ಥಿಕತೆಯನ್ನು ಸರಿ ದಾರಿಗೆ ತರಬೇಕು’ ಎಂದು ಅವರು ತಿಳಿಸಿದ್ದಾರೆ.

ಮಾಲ್‌ಗಳು, ಮಾರುಕಟ್ಟೆ ಮತ್ತು ಮಾರುಕಟ್ಟೆ ಮಳಿಗೆಗಳು(ಸಾಪ್ತಾಹಿಕ ಮಾರುಕಟ್ಟೆಗಳನ್ನು ಹೊರತುಪಡಿಸಿ) ಸೋಮವಾರದಿಂದ ಸಮ–ಬೆಸ ಸಂಖ್ಯೆಯ ಆಧಾರದಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 8ರವರೆಗೆ ಕಾರ್ಯನಿರ್ವಹಿಸಲಿದೆ.

ಮೆಟ್ರೊ ಸೇವೆ ಆರಂಭ: ಮೇ 20ರಿಂದ ಡಿಎಂಆರ್‌ಸಿ ಮೆಟ್ರೊ ಸೇವೆಗಳನ್ನು ಸಂಪೂರ್ಣ ಸ್ಥಗಿತಗೊಳಿಸಿತ್ತು. ಇದೀಗ ಕೊರೊನಾ ಪ್ರಕರಣಗಳು ಇಳಿಕೆಯಾದ್ದರಿಂದ ಸೋಮವಾರದಿಂದ ಮೆಟ್ರೊ ಸೇವೆಗಳು ಆರಂಭಗೊಂಡಿದೆ.

‘ವಿವಿಧ ಲೇನ್‌ಗಳಲ್ಲಿ ರೈಲುಗಳ ನಡುವೆ 5ರಿಂದ 15 ನಿಮಿಷಗಳ ಅಂತರವಿರಲಿದೆ’ ಎಂದು ಡಿಎಂಆರ್‌ಸಿ ಅಧಿಕಾರಿಯೊಬ್ಬರು ತಿಳಿಸಿದರು.

‘ಬುಧವಾರದಿಂದ ಮೆಟ್ರೊ ರೈಲುಗಳ ಸಂಖ್ಯೆಯನ್ನು ಏರಿಸಲಾಗುವುದು. ಕೇವಲ ಕುಳಿತು ಪ್ರಯಾಣಿಸಲು ಅವಕಾಶವಿದ್ದು, ಎರಡು ಸೀಟುಗಳ ನಡುವೆ ಅಂತರವಿರಲಿದೆ. ಒಟ್ಟು ಸಾಮರ್ಥ್ಯಕ್ಕಿಂತ ಶೇಕಡ 10–15 ರಷ್ಟು ಜಾಗವನ್ನು ಬಳಸಲಾಗುವುದು’ ಎಂದು ಡಿಎಂಆರ್‌ಸಿ ತಿಳಿಸಿದೆ.

ದೆಹಲಿಯಲ್ಲಿ 381 ಹೊಸ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಇದು ಎರಡೂವರೆ ತಿಂಗಳಿನಲ್ಲಿ ವರದಿಯಾದ ಅತಿ ಕಡಿಮೆ ಪ್ರಕರಣಗಳಾಗಿವೆ. ಇದೇ ವೇಳೆ 35 ಮಂದಿ ಮೃತಪಟ್ಟಿದ್ದಾರೆ. ದೆಹಲಿಯಲ್ಲಿ ಸೋಂಕು ‍ದೃಢೀಕರಣ ಪ್ರಮಾಣವು ಶೇಕಡ 0.5ಕ್ಕೆ ಇಳಿದಿದೆ ಎಂದು ಆರೋಗ್ಯ ಇಲಾಖೆ ಭಾನುವಾರ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT