ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳ ಸಿ.ಎಂ.ವಿರುದ್ಧ ಹೇಳಿಕೆ ನೀಡಲು ಒತ್ತಡ: ಸ್ವಪ್ನಾ ಹೇಳಿಕೆ ತಳ್ಳಿ ಹಾಕಿದ ಇ.ಡಿ

ಚಿನ್ನ ಅಕ್ರಮ ಸಾಗಣೆ ಪ್ರಕರಣ: ವಿವಾದ ಸೃಷ್ಟಿಸಿದ ಆಡಿಯೊ ಕ್ಲಿಪ್‌
Last Updated 20 ನವೆಂಬರ್ 2020, 12:11 IST
ಅಕ್ಷರ ಗಾತ್ರ

ತಿರುವನಂತಪುರ/ನವದೆಹಲಿ: ಕೇರಳದ ಚಿನ್ನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್‌ ಆಡಿಯೊ ಕ್ಲಿಪ್‌ವೊಂದರಲ್ಲಿ ನೀಡಿದ್ದಾರೆ ಎನ್ನಲಾದ ಹೇಳಿಕೆಯನ್ನು ಜಾರಿ ನಿರ್ದೇಶನಾಲಯ (ಇ.ಡಿ) ತಳ್ಳಿ ಹಾಕಿದೆ.

ಆನ್‌ಲೈನ್‌ ಸುದ್ದಿ ಪೋರ್ಟಲ್‌ವೊಂದು ಸ್ವಪ್ನಾ ಸುರೇಶ್‌ ಅವರದ್ದು ಎನ್ನಲಾದ ಆಡಿಯೊ ಕ್ಲಿಪ್‌ವೊಂದನ್ನು ಬಿಡುಗಡೆ ಮಾಡಿತ್ತು. ಇದರಲ್ಲಿ ಜಾರಿ ನಿರ್ದೇಶನಾಲಯದ ವಿರುದ್ಧ ಸ್ವಪ್ನಾ ಸುರೇಶ್‌ ಹೇಳಿಕೆ ನೀಡಿದ್ದಾರೆ.

‘ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ವಿರುದ್ಧ ಹೇಳಿಕೆ ನೀಡುವಂತೆ ಜಾರಿ ನಿರ್ದೇಶನಾಲಯ ಒತ್ತಡ ಹೇರುತ್ತಿದೆ’ ಎಂದು ಸ್ವಪ್ನಾ ಸುರೇಶ್‌ ದೂರಿರುವುದು ಈ ಆಡಿಯೊ ಕ್ಲಿಪ್‌ನಲ್ಲಿದೆ. ಜತೆಗೆ, ತಾನು ನೀಡಿರುವ ಹೇಳಿಕೆಗಳಿರುವ ದಾಖಲೆಗಳಿಗೆ ಓದದೆ ಸಹಿ ಹಾಕುವಂತೆ ಸೂಚಿಸಲಾಗಿತ್ತು ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಜಾರಿ ನಿರ್ದೇಶನಾಲಯ, ‘ಹಲವು ಮಂದಿ ಭಾಗಿಯಾಗಿರುವ ಈ ಪ್ರಕರಣದ ಬಗ್ಗೆ ಸಮಗ್ರವಾಗಿ ತನಿಖೆ ಕೈಗೊಳ್ಳಲಾಗಿದೆ. ಜೈಲಿನ ನಿಯಮಾವಳಿಗಳನ್ನು ಉಲ್ಲಂಘಿಸಿ ಧ್ವನಿಯನ್ನು ದಾಖಲಿಸಿಕೊಂಡಿರುವ ಬಗ್ಗೆ ಮತ್ತು ಹೊರಗೆ ವಿತರಿಸಿರುವ ಬಗ್ಗೆ ತನಿಖೆ ನಡೆಸುವಂತೆ ಕೇರಳದ ಕಾರಾಗೃಹದ ಇಲಾಖೆಗೆ ಪತ್ರ ಬರೆಯಲಾಗಿದೆ’ ಎಂದು ತಿಳಿಸಿದೆ.

‘ಈ ಪ್ರಕರಣದಲ್ಲಿ ಸ್ವಪ್ನಾ ಸುರೇಶ್‌ ಪ್ರಮುಖ ಆರೋಪಿಯಾಗಿದ್ದಾರೆ. ಆಡಿಯೊ ಕ್ಲಿಪ್‌ನಲ್ಲಿ ಕೆಲವರ ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಪ್ರಸ್ತಾಪಿಸಿರುವುದನ್ನು ಪರಿಶೀಲಿಸಿದಾಗ ತನಿಖೆಗೆ ಅಡ್ಡಿಪಡಿಸುವ ಉದ್ದೇಶ ಹೊಂದಿರುವುದು ಸ್ಪಷ್ವವಾಗಿ ಗೋಚರಿಸುತ್ತದೆ’ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಲಿಂಕ್:ಆಂಡ್ರಾಯ್ಡ್ ಆ್ಯಪ್|ಐಒಎಸ್ ಆ್ಯಪ್

‘ಈ ಆಡಿಯೊ ಕ್ಲಿಪ್‌ ನೈಜವಾಗಿದ್ದರೆ ಇದೊಂದು ನಿಯಮವಾಳಿಗಳ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಜತೆಗೆ, ಕಾನೂನು ಪ್ರಕ್ರಿಯೆ ಮತ್ತು ತನಿಖೆ ಮೇಲೆ ಪ್ರಭಾವ ಬೀರುವ ಉದ್ದೇಶ ಹೊಂದಿದೆ’ ಎಂದು ಮೂಲಗಳು ತಿಳಿಸಿವೆ.

ರಾಜ್ಯ ಕಾರಾಗೃಹ ಇಲಾಖೆ ಆಡಿಯೊ ಕ್ಲಿಪ್‌ ಬಗ್ಗೆ ತನಿಖೆಗೆ ಆದೇಶ ನೀಡಿದೆ. ತನಿಖೆಯ ಜವಾಬ್ದಾರಿ ವಹಿಸಿಕೊಂಡಿರುವ ದಕ್ಷಿಣ ವಲಯದ ಡಿಐಜಿ ಅಜಯಕುಮಾರ್‌ ಅವರು ತಿರುವನಂತಪುರದ ಮಹಿಳಾ ಕಾರಾಗೃಹಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದರು.

‘ಆಡಿಯೊ ಕ್ಲಿಪ್‌ನಲ್ಲಿರುವ ಧ್ವನಿ ತನ್ನದೇ ಎಂದು ಸ್ವಪ್ನಾ ಸುರೇಶ್‌ ತಿಳಿಸಿದ್ದಾರೆ. ಆದರೆ, ಜೈಲಿನಲ್ಲಿ ರಿಕಾರ್ಡಿಂಗ್‌ ಮಾಡಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ಇನ್ನೂ ತನಿಖೆ ಮುಂದುವರಿದಿದೆ’ ಎಂದು ಅಜಯಕುಮಾರ್‌ ತಿಳಿಸಿದ್ದಾರೆ.

ಸದ್ಯ ಸ್ವಪ್ನಾ ಸುರೇಶ್‌ ನ್ಯಾಯಾಂಗ ವಶದಲ್ಲಿದ್ದಾರೆ. ಸ್ವಪ್ನಾ ಸುರೇಶ್‌ ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲೂ ಕೋಲಾಹಲ ಸೃಷ್ಟಿಸಿದೆ. ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಸಿಪಿಐ (ಎಂ) ದೂರಿದೆ.

ಎನ್‌ಐಎ ಶೋಧ:

ಚಿನ್ನದ ಕಳ್ಳ ಸಾಗಣೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶುಕ್ರವಾರ ಕೇರಳದ ಐದು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಈ ಪ್ರಕರಣದಲ್ಲಿ ಆರೋಪಿಗಳಾಗಿರುವ ಮೊಹಮ್ಮದ್‌ ಅಸ್ಲಂ, ಅಬ್ದುಲ್‌ ಲತೀಫ್‌, ನಜರುದ್ದೀನ್‌ ಶಾ, ರಮಜಾನ್‌ ಪಿ ಮತ್ತು ಮುಹಮ್ಮದ್‌ ಮಾನ್ಸೂರ್‌ ಅವರ ನಿವಾಸಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯಕೈಗೊಳ್ಳಲಾಗಿದೆ.

ಈ ಸಂದರ್ಭದಲ್ಲಿ ಹಲವು ಎಲೆಕ್ಟ್ರಾನಿಕ್‌ ವಸ್ತುಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎನ್‌ಐಎ ತಿಳಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಇದುವರೆಗೆ 21 ಮಂದಿಯನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT