ಶುಕ್ರವಾರ, ಡಿಸೆಂಬರ್ 4, 2020
24 °C
ಕೇರಳ ಸರ್ಕಾರದ ವಿಶೇಷ ಯೋಜನೆ

ಕೇರಳ: ಕೈದಿಗಳ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರ: ಜೈಲಿನಲ್ಲಿರುವ ಕೈದಿಗಳ ಮಕ್ಕಳ ಶಿಕ್ಷಣಕ್ಕಾಗಿ ಕೇರಳ ಸರ್ಕಾರವು ₹20 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಇದರಲ್ಲಿ ₹15 ಲಕ್ಷವನ್ನು ಮೂಲಭೂತ ಶಿಕ್ಷಣಕ್ಕಾಗಿ ಹಾಗೂ ₹5 ಲಕ್ಷವನ್ನು ವೃತ್ತಿಪರ ಶಿಕ್ಷಣಕ್ಕಾಗಿ ಮಂಜೂರು ಮಾಡಲಾಗಿದೆ ಎಂದು ರಾಜ್ಯ ಸಾಮಾಜಿಕ ನ್ಯಾಯ ಸಚಿವರಾದ ಕೆ.ಕೆ.ಶೈಲಜಾ ತಿಳಿಸಿದ್ದಾರೆ.

ಈ ಎಲ್ಲಾ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ಪರಿಚಯಿಸಬೇಕು ಎಂಬ ಉದ್ದೇಶದಿಂದ ಸಾಮಾಜಿಕ ನ್ಯಾಯ ಇಲಾಖೆಯು ಈ ಶೈಕ್ಷಣಿಕ ನೆರವನ್ನು ಜಾರಿಗೊಳಿಸಿದೆ. ‘ಕುಟುಂಬದಲ್ಲಿ ದುಡಿಯುವ ವ್ಯಕ್ತಿಗಳು ಜೈಲು ಸೇರಿದಾಗ ಮಕ್ಕಳ ಶಿಕ್ಷಣಕ್ಕೂ ತೊಡಕ್ಕಾಗುತ್ತದೆ. ಅವರ ಶಿಕ್ಷಣ, ಅಧ್ಯಯನಕ್ಕೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಸರ್ಕಾರ ಈ ಯೋಜನೆ ಜಾರಿ ಮಾಡಿದೆ’ ಎಂದು ಸಚಿವರು ಹೇಳಿದ್ದಾರೆ.

ಮೂಲಭೂತ ಶಿಕ್ಷಣಕ್ಕೆ ನೆರವು ನೀಡುವ ಯೋಜನೆಯಡಿಯಲ್ಲಿ ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ 1ರಿಂದ 5ನೇ ತರಗತಿ ಮಕ್ಕಳಿಗೆ ಪ್ರತಿ ತಿಂಗಳು ₹300, 6ರಿಂದ 10ನೇ ತರಗತಿ ಮಕ್ಕಳಿಗೆ ₹500, ಹಾಗೂ ಪದವಿ ಪೂರ್ವ ಓದುತ್ತಿರುವವರಿಗೆ ₹750, ಪದವಿ ಮತ್ತು ವೃತ್ತಿಪರ ಕೋರ್ಸ್‌ಗಳಲ್ಲಿ ವ್ಯಾಸಂಗ ಮಾಡುತ್ತಿರುವವರಿಗೆ ₹1,000 ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.

ಜೀವಾವಧಿ ಅಥವಾ ಗಲ್ಲುಶಿಕ್ಷೆಗೆ ಗುರಿಯಾಗಿರುವ ಕೈದಿಗಳ ಮಕ್ಕಳ ಶಿಕ್ಷಣಕ್ಕೂ ವೃತ್ತಿಪರ ಶಿಕ್ಷಣಕ್ಕಾಗಿ ನೆರವು ಯೋಜನೆಯಡಿ ನೆರವು ನೀಡಲಾಗುತ್ತದೆ. ವಿವಿಧ ಕೋರ್ಸ್‌ಗಳಿಗೆ ನಿಗದಿಯಾಗಿರುವ ಶುಲ್ಕದರದ ಪ್ರಕಾರ ಗರಿಷ್ಠ ₹1 ಲಕ್ಷದವರೆಗೆ ಸಹಾಯ ಮಾಡಲಾಗುತ್ತದೆ. ಬಡತನ ರೇಖೆಗಿಂತ ಕಡಿಮೆ ಆದಾಯ ಹೊಂದಿರುವ ಮಕ್ಕಳು ಈ ಸೌಲಭ್ಯ ಪಡೆಯಲಿದ್ದಾರೆ. ಒಂದು ವೇಳೆ ಹೆತ್ತವರಿಬ್ಬರು ಜೈಲಿನಲ್ಲಿದ್ದು, ಮಕ್ಕಳನ್ನು ನೋಡಿಕೊಳ್ಳುವ ಸಂಬಂಧಿಕರು ಬಡತನ ರೇಖೆಗಿಂತ ಹೆಚ್ಚು ಆದಾಯ ಹೊಂದಿದ್ದರೂ ಅಂತಹ ಮಕ್ಕಳ ಶಿಕ್ಷಣಕ್ಕೆ ಹಣ ದೊರೆಯುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು