ಮಂಗಳವಾರ, ಜೂನ್ 28, 2022
25 °C
‘ಕ್ಲಿಫ್‌ ಹೌಸ್‌‘ ನವೀಕರಣ ಕುರಿತು ವಿಧಾನಸಭೆಯಲ್ಲಿ ಚರ್ಚೆ

ಕೇರಳ: ಮುಖ್ಯಮಂತ್ರಿ ನಿವಾಸ ನವೀಕರಣಕ್ಕೆ ಯುಡಿಎಫ್‌ ವಿರೋಧ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರಂ: ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಅಧಿಕೃತ ನಿವಾಸ ‘ಕ್ಲಿಫ್ ಹೌಸ್‘ ಅನ್ನು ನವೀಕರಣಗೊಳಿಸುವ ಸರ್ಕಾರದ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ವಿರೋಧ ಪಕ್ಷ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಒಕ್ಕೂಟ ರಾಜ್ಯ ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿರುವಾಗ ಸುಮಾರು ₹1 ಕೋಟಿ ವೆಚ್ಚದಲ್ಲಿ ನವೀಕರಣ ಕಾರ್ಯ ಕೈಗೊಳ್ಳುವುದು ಎಷ್ಟು ಸರಿ ಎಂದು ವಾಗ್ದಾಳಿ ನಡೆಸಿದೆ.

ವಿಧಾನಸಭೆಯಲ್ಲಿ ಮಂಗಳವಾರ ನಡೆದ ಅಧಿವೇಶನದ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್‌ ಶಾಸಕ ಪಿ.ಟಿ. ಥಾಮಸ್‌, ‘ಆರ್ಥಿಕ ಪರಿಸ್ಥಿತಿ ಕಠಿಣವಾಗಿದೆ ಎಂದು ಸರ್ಕಾರವೇ ಹೇಳಿದೆ. ಇಂಥ ಸಮಯದಲ್ಲಿ ಮುಖ್ಯಮಂತ್ರಿಯವರ ಬಂಗಲೆಯ 'ನವೀಕರಣ'ಕ್ಕಾಗಿ ಸರ್ಕಾರ ಹೆಚ್ಚಿನ ಮೊತ್ತವನ್ನು ಹೇಗೆ ಖರ್ಚು ಮಾಡುತ್ತದೆ ಎಂಬುದನ್ನು ತಿಳಿಸಬೇಕು‘ ಎಂದು ಕೇಳಿದರು.

‘ರಾಜ್ಯದಲ್ಲಿ ಕಠಿಣ ಆರ್ಥಿಕ ನೀತಿ ಜಾರಿಗೆ ತರುವುದಾಗಿ ಹಣಕಾಸು ಸಚಿವರು, ಸದನಕ್ಕೆ ತಿಳಿಸಿದ್ದಾರೆ. ಹಾಗಾದರೆ, ಕಠಿಣ ಕ್ರಮಗಳನ್ನೂ ತೆಗೆದುಕೊಳ್ಳುತ್ತಾ, ಕಟ್ಟಡಗಳ ನವೀಕರಣಕ್ಕಾಗಿ ಕೋಟ್ಯಂತರ ರೂಪಾಯಿಗಳನ್ನು ಹೇಗೆ ಖರ್ಚು ಮಾಡುತ್ತಾರೆ ?. ಇವೆರಡನ್ನೂ ಜತೆಯಾಗಿ ಹೇಗೆ ತೆಗೆದುಕೊಂಡು ಹೋಗುತ್ತಾರೆ ಎಂಬುದನ್ನು ಅವರು ವಿವರಿಸಬೇಕು‘ ಎಂದು ಶಾಸಕ ಥಾಮಸ್‌ ಪ್ರಶ್ನಿಸಿದರು.

ವಿರೋಧಪಕ್ಷದವರ ಆರೋಪ, ಟೀಕೆಗಳನ್ನು ನಿರಾಕರಿಸಿದ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್, ‘ಆದಷ್ಟೂ ಖರ್ಚು ಕಡಿಮೆ ಮಾಡಲು ಸರ್ಕಾರ ಸಾಧ್ಯವಿರುವ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅದೇ ರೀತಿ, ಸರ್ಕಾರಿ ಒಡೆತನದಲ್ಲಿರುವ ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವುದು ಮುಖ್ಯವಾಗಿದೆ‘ ಎಂದು ಸದನಕ್ಕೆ ವಿವರಿಸಿದರು.

‘ರಾಜ್ಯದಲ್ಲಿ 100 ರಿಂದ 120 ವರ್ಷಗಳಷ್ಟು ಹಳೆಯದಾದ ಸರ್ಕಾರದ ಒಡೆತನದಲ್ಲಿರುವ ಹಲವು ಪಾರಂಪರಿಕ ಕಟ್ಟಡಗಳಿವೆ. ಅವುಗಳನ್ನು ಸಂರಕ್ಷಿಸಲು ಕಾಲಕಾಲಕ್ಕೆ ಕಟ್ಟಡಗಳ ನಿರ್ವಹಣಾ ಕಾರ್ಯ ಕೈಗೊಳ್ಳಬೇಕು. ಇಂಥ ಪಾರಂಪರಿಕ ಕಟ್ಟಡಗಳ ಸಾಲಿಗೆ ಮುಖ್ಯಮಂತ್ರಿ ಅಧಿಕೃತ ನಿವಾಸ ಕೂಡ ಸೇರುತ್ತದೆ‘ ಎಂದು ಬಾಲಗೋಪಾಲನ್ ವಿವರಿಸಿದರು.

‘ಅತಿಯಾಗಿ ಖರ್ಚು ಮಾಡುವುದನ್ನು ತಪ್ಪಿಸಬೇಕು ಎಂದರೆ, ಸರ್ಕಾರ ಮಾಡಲೇಬೇಕಾಗಿರುವ ಕೆಲವೊಂದು ಕೆಲಸಗಳನ್ನು ಸ್ಥಗಿತಗೊಳಿಸಬೇಕೆಂಬ ಅರ್ಥವಲ್ಲ‘ ಎಂದು ಹೇಳುವ ಮೂಲಕ ಬಾಲಗೋಪಾಲ್ ವಿರೋಧ ಪಕ್ಷಗಳಿಗೆ ಎಚ್ಚರಿಕೆ ನೀಡಿದರು.

ಮುಖ್ಯಮಂತ್ರಿ ವಿಜಯನ್ ಅವರ ಅಧಿಕೃತ ನಿವಾಸವನ್ನು ₹90 ಲಕ್ಷದಲ್ಲಿ ನವೀಕರಿಸಲು  ಎಲ್‌ಡಿಎಫ್‌ ನೇತೃತ್ವದ ಸರ್ಕಾರ ಅನುಮತಿ ನೀಡಿದೆ. ಯಾವುದೇ ಔಪಚಾರಿಕ ಟೆಂಡರ್‌ ಆಹ್ವಾನಿಸದೇ, ಉತ್ತರ ಕೇರಳದ ಮೂಲದ ಉರಲುಂಗಲ್‌ನ ಗುತ್ತಿಗೆದಾರರೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು.

79 ವರ್ಷಗಳಷ್ಟು ಹಳೆಯದಾದ ರಾಜರ ಆಳ್ವಿಕೆಯ ಕಾಲದಲ್ಲಿ ನಿರ್ಮಾಣವಾದ ‘ಕ್ಲಿಫ್‌ ಹೌಸ್‌‘ ನಗರದ ಹೃದಯಭಾಗದಲ್ಲಿರುವ ನಾಂತನ್‌ಕೋಡ್‌ನಲ್ಲಿದೆ. 1957 ರಲ್ಲಿ ಕೇರಳ ರಾಜ್ಯ ರಚನೆಯಾದ ನಂತರ ಇದೇ ಕಟ್ಟಡ ಬಹುಪಾಲು ಮುಖ್ಯಮಂತ್ರಿಗಳ ಅಧಿಕೃತ ನಿವಾಸವಾಗಿತ್ತು. ಹಿಂದಿನ ರಾಜರ ಆಳ್ವಿಕೆಯಲ್ಲಿ 'ದಿವಾನ್ ಪೇಶ್ಕರ್' (ರಾಜ್ಯ ಕಾರ್ಯದರ್ಶಿ) ಅವರ ಅಧಿಕೃತ ನಿವಾಸವಾಗಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು