ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಫ್‌ಐ ನಿಷೇಧ: ಕೇರಳದಲ್ಲಿ ಕಟ್ಟೆಚ್ಚರ

Last Updated 28 ಸೆಪ್ಟೆಂಬರ್ 2022, 10:18 IST
ಅಕ್ಷರ ಗಾತ್ರ

ತಿರುವನಂತಪುರ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು (ಪಿಎಫ್‌ಐ) ಕೇಂದ್ರ ಸರ್ಕಾರ ನಿಷೇಧಿಸಿರುವ ಹಿನ್ನೆಲೆಯಲ್ಲಿ ಕೇರಳದಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ.

ಪಿಎಫ್‌ಐ ಪ್ರಬಲ ನೆಲೆ ಹೊಂದಿರುವ ಪ್ರದೇಶಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಇತ್ತೀಚೆಗೆ ನಡೆದ ಹರತಾಳ ಮತ್ತು ಮುನ್ನೆಚ್ಚರಿಕಾ ಕ್ರಮವಾಗಿ ಸುಮಾರು 2,000 ಪಿಎಫ್‌ಐ ಕಾರ್ಯಕರ್ತರನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೇಶದಾದ್ಯಂತ ಪಿಎಫ್‌ಐ ಕಚೇರಿಗಳ ಮೇಲೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಕಳೆದ ವಾರ ದಾಳಿ ನಡೆಸಿದ್ದನ್ನು ಖಂಡಿಸಿ ಕರೆ ನೀಡಿದ್ದ ಹರತಾಳದ ಸಂದರ್ಭ ವ್ಯಾಪಕ ಹಿಂಸಾಚಾರ ನಡೆದಿತ್ತು. ಇದಕ್ಕೆ ಸಂಬಂಧಿಸಿ ಸುಮಾರು 1,800 ಕಾರ್ಯಕರ್ತರನ್ನು ಬಂಧಿಸಲಾಗಿದ್ದು, 337 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿತ್ತು.

ತಿರುವನಂತಪುರ ಸೇರಿದಂತೆ ಕೇರಳದ ಹಲವು ಕಡೆಗಳಲ್ಲಿ ಪಿಎಫ್ಐ ಪ್ರಬಲ ನೆಲೆಗಳನ್ನು ಹೊಂದಿದೆ. ಕಳೆದ ಕೆಲವು ದಿನಗಳಲ್ಲಿ ಕೇರಳ ಪೊಲೀಸರು ಪಿಎಫ್‌ಐ ಮುಖಂಡರ ಅಂಗಡಿಗಳು ಹಾಗೂ ವಾಣಿಜ್ಯೋದ್ಯಮ ಕಚೇರಿಗಳ ಮೇಲೆ ದಾಳಿ ನಡೆಸಿ ಹಲವಾರು ದಾಖಲೆಗಳನ್ನು ಮತ್ತು ಆಯುಧಗಳನ್ನು ವಶಪಡಿಸಿಕೊಂಡಿದ್ದರು.

ಕೇರಳದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್, ಕರ್ನಾಟಕದ ಫೋರಂ ಫಾರ್ ಡಿಗ್ನಿಟಿ ಮತ್ತು ತಮಿಳುನಾಡಿನ ಮನಿತಾ ನೀತಿ ಪಸರೈ ಎಂಬ ಮೂರು ಮುಸ್ಲಿಂ ಸಂಘಟನೆಗಳು ವಿಲೀನಗೊಂಡು 2007ರಲ್ಲಿ ಪಿಎಫ್‌ಐ ಸಂಘಟನೆ ರೂಪುಗೊಂಡಿತ್ತು. ವಿಲೀನವಾದ 4 ತಿಂಗಳ ಬಳಿಕ ಫೆಬ್ರುವರಿ 2007ರಲ್ಲಿ ಬೆಂಗಳೂರಿನಲ್ಲಿ ರ್‍ಯಾಲಿ ನಡೆಸುವ ಮೂಲಕ ಅಧಿಕೃತವಾಗಿ ಸಂಘಟನೆ ಅಸ್ತಿತ್ವಕ್ಕೆ ಬಂದಿತ್ತು.

ಪಿಎಫ್‌ಐ ನಿಷೇಧಿಸಿ ಕೇಂದ್ರ ಸರ್ಕಾರ ಬುಧವಾರ ಬೆಳಿಗ್ಗೆ ಆದೇಶ ಹೊರಡಿಸಿತ್ತು. ಪಿಎಫ್‌ಐ ಹಾಗೂ ಅದರ ಅಂಗ ಸಂಸ್ಥೆಗಳನ್ನು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಲಾಗಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಮುಂದಿನ ಐದು ವರ್ಷಗಳ ಅವಧಿಗೆ ನಿಷೇಧ ವಿಧಿಸಲಾಗಿದೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT