ಸಿಲ್ವರ್ಲೈನ್ ರೈಲು ಯೋಜನೆ ಕೈಬಿಟ್ಟ ಕೇರಳ ಸರ್ಕಾರ?

ತಿರುವನಂತಪುರ: ಸಿಲ್ವರ್ಲೈನ್ ಸೆಮಿ ಹೈ–ಸ್ಪೀಡ್ ರೈಲು ಯೋಜನೆಗೆ ಕರ್ನಾಟಕ ಸರ್ಕಾರದ ಸಹಕಾರ ಪಡೆಯುವ ಪ್ರಯತ್ನ ವಿಫಲವಾದ ಬಳಿಕ ಕೇರಳವು ಈ ಯೋಜನೆಯನ್ನು ಕೈಬಿಟ್ಟಿದೆ.
ಭೂಮಾಪನ ಮತ್ತು ಭೂಸ್ವಾಧೀನಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ನಿಯೋಜಿಸಿದ್ದ 200 ಅಧಿಕಾರಿಗಳಿಗೆ ಮಾತೃ ಇಲಾಖೆಗೆ ಮರಳುವಂತೆ ನಿರ್ದೇಶಿಸಿ ಸರ್ಕಾರ ಆದೇಶ ಹೊರಡಿಸಿರುವುದು ಇದನ್ನು ಪುಷ್ಟೀಕರಿಸಿದೆ. ಕೇಂದ್ರ ಸರ್ಕಾರದ ಒಪ್ಪಿಗೆ ಪಡೆದ ನಂತರ ಯೋಜನೆ ಕುರಿತ ಮುಂದಿನ ತೀರ್ಮಾನಗಳನ್ನು ತಿಳಿಸಲಾಗುವುದು ಎಂದೂ ಆದೇಶದಲ್ಲಿ ಹೇಳಲಾಗಿದೆ.
‘ಯಾವುದೇ ಬೆಲೆ ತೆತ್ತಾದರೂ ಯೋಜನೆಯನ್ನು ಕಾರ್ಯರೂಪಕ್ಕೆ ತರುತ್ತೇವೆ’ ಎಂದು ಈ ಹಿಂದೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದರು. ಜನರ ತೀವ್ರ ವಿರೋಧದ ನಡುವೆಯೂ ಯೋಜನೆಗೆ ಸಂಬಂಧಿಸಿ ಗಡಿ ಗುರುತಿಸುವ ಕಲ್ಲುಗಳನ್ನು ಸ್ಥಾಪಿಸಲಾಗಿತ್ತು.
ಕೇಂದ್ರದ ಬಿಜೆಪಿ ಸರ್ಕಾರವು ಈ ಯೋಜನೆಗೆ ಇದುವರೆಗೂ ಒಪ್ಪಿಗೆ ನೀಡಿಲ್ಲ. ಯೋಜನೆಯನ್ನು ಮಂಗಳೂರಿನವರೆಗೆ ವಿಸ್ತರಿಸಲು ಕೇರಳ ಸರ್ಕಾರವು ಕರ್ನಾಟಕಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಆದರೆ ಈ ಬಗ್ಗೆ ಕರ್ನಾಟಕ ಸರ್ಕಾರವು ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಕೇಂದ್ರ ಸರ್ಕಾರದ ಒಪ್ಪಿಗೆ ಸಿಕ್ಕಿದ ನಂತರವೇ ಮುಂದಿನ ಹೆಜ್ಜೆ ಇಡಲು ತೀರ್ಮಾನಿಸಿರುವುದಾಗಿ ಇದೀಗ ಕೇರಳ ಸರ್ಕಾರ ಹೇಳಿದೆ. ರೈಲ್ವೆ ಇಲಾಖೆ ಕೂಡ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.