ಶುಕ್ರವಾರ, ಜುಲೈ 1, 2022
25 °C
ಕೋಲ್ಕತ್ತ ರ್‍ಯಾಲಿ

'ರಾವಣ, ರಾಕ್ಷಸ, ಗೂಂಡಾ...ಏನೆಲ್ಲ ಅಂದಿರಿ; ದೀದಿ, ಯಾಕಿಷ್ಟು ಕೋಪ ನಿಮಗೆ?'–ಮೋದಿ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಕೋಲ್ಕತ್ತದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ಕೋಲ್ಕತ್ತ: 'ಭವಾನಿಪುರದಲ್ಲಿ ನಿಲುಗಡೆಯಾಗಬೇಕಿದ್ದ ದೀದಿ ಅವರ ಸ್ಕೂಟಿಯು, ನಂದಿಗ್ರಾಮದ ಕಡೆಗೆ ದಿಢೀರ್‌ ತಿರುವು ಪಡೆದುಕೊಂಡಿದೆ' ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಂಗ್ಯವಾಡಿದರು.

ಬ್ರಿಗೇಡ್ ಪರೇಡ್ ಗ್ರೌಂಡ್ಸ್‌ನಲ್ಲಿ ನಡೆಯುತ್ತಿರುವ ಬಿಜೆಪಿಯ ಬೃಹತ್ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಿದ್ದಾರೆ. ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿರುವ ಬಾಲಿವುಡ್‌ ನಟ ಮಿಥುನ್‌ ಚಕ್ರವರ್ತಿ ಮತ್ತು ಪ್ರಧಾನಿ ಮೋದಿ ಶುಭಾಶಯ ವಿನಿಮಯ ಮಾಡಿಕೊಂಡರು.

ಇತ್ತೀಚೆಗೆ ವಿಧಾನಸಭೆ ಸ್ವರ್ಧಿಸುವ ಪಟ್ಟಿ ಬಿಡುಗಡೆ ಮಾಡಿರುವ ಮಮತಾ ಬ್ಯಾನರ್ಜಿ, ಭವಾನಿಪುರದ ಬದಲು ನಂದಿಗ್ರಾಮದಿಂದ ಮಾತ್ರವೇ ಸ್ಪರ್ಧಿಸುವುದಾಗಿ ಪ್ರಕಟಿಸಿದರು. ಇಂಧನ ದರ ಏರಿಕೆಯನ್ನು ವಿರೋಧಿಸಿ ದೀದಿ ಎಲೆಕ್ಟ್ರಿಕ್‌ ಸ್ಕೂಟರ್‌ ಏರಿ ಪ್ರಯಾಣಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ, ದೀದಿ ಸ್ಕೂಟಿಯ ವಿಚಾರ ಪ್ರಸ್ತಾಪಿಸಿದ್ದಾರೆ.

ಬಂಗಾಳದ ಜನರು ನಿಮ್ಮನ್ನು 'ದೀದಿ' (ಅಕ್ಕ) ಎಂದೇ ಪರಿಗಣಿಸಿದ್ದಾರೆ, ಆದರೆ ನೀವೇಕೆ ಸೋದರಳಿಯನ ಅತ್ತೆಯಾಗಿಯೇ ಉಳಿದಿರಿ? ಬಂಗಾಳದ ಜನರು ನಿಮ್ಮಿಂದು ಇದೊಂದು  ಪ್ರಶ್ನೆಯನ್ನಷ್ಟೇ ಕೇಳುತ್ತಿದ್ದಾರೆ ಎಂದು ಟೀಕಿಸಿದರು.

'ನನ್ನ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ...ಕೆಲವು ಬಾರಿ ರಾವಣ, ಮತ್ತೆ ಕೆಲವು ಸಲ ರಾಕ್ಷಸ, ಇನ್ನೂ ಕೆಲವೊಮ್ಮೆ ಗೂಂಡಾ.... ದೀದಿ, ಯಾಕಿಷ್ಟು ಕೋಪ ನಿಮಗೆ?' ಹಲವು ವರ್ಷಗಳಿಂದ ನಾನು ದೀದಿ ಅವರನ್ನು ಕಂಡಿದ್ದೇನೆ. ಎಡ ಪಕ್ಷಗಳ ವಿರುದ್ಧ ದನಿ ಎತ್ತಿದ  ಅದೇ ವ್ಯಕ್ತಿಯಾಗಿ ಅವರು ಉಳಿದಿಲ್ಲ. ಅವರು ಯಾರದ್ದೋ ಮಾತುಗಳನ್ನೀಗ ಆಡುತ್ತಿದ್ದಾರೆ, ಅವರು ಯಾರದೋ ನಿಯಂತ್ರಣದಲ್ಲಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು.

''ಈ ಜನರು ಸಾಕಷ್ಟು ಅನುಭವ ಇರುವವರು, ಬಹಳಷ್ಟು ಆಟವಾಡುತ್ತಾರೆ! ಬಹಳಷ್ಟು ಭ್ರಷ್ಟಾಚಾರ ಮಾಡಿದ್ದಾರೆ ಹಾಗೂ ಬಂಗಾಳದ ಜನರನ್ನು ಲೂಟಿ ಮಾಡಿದ್ದಾರೆ. ಅಂಫಾನ್‌ ಪರಿಹಾರದ ಹಣವನ್ನೂ ಕೊಳ್ಳೆ ಹೊಡೆದಿದ್ದಾರೆ. 'ಭ್ರಷ್ಟಾಚಾರದ ಒಲಿಂಪಿಕ್ಸ್‌' ಸ್ಪರ್ಧೆಯನ್ನೇ ಆಯೋಜಿಸಬಹುದು ಅಷ್ಟೊಂದು ಬಗೆಯ ಹಗರಣಗಳನ್ನು ನಡೆಸಿದ್ದೀರಿ. ಜನರು ಕಷ್ಟ ಪಟ್ಟು ದುಡಿದ ಹಣ ಹಾಗೂ ಅವರ ಜೀವದ ಎದುರು ಆಟವಾಡಿದ್ದೀರಿ. ಈಗ ಟಿಎಂಸಿಯ ಆಟ ಮುಗಿದಿದೆ ಹಾಗೂ ವಿಕಾಸ ಶುರುವಾಗಿದೆ....ಕೆಟ್ಟ ಆಡಳಿತದ ವಿರುದ್ಧ ಮತ ನೀಡಿ, ಬಿಜೆಪಿಗೆ ಮತ ನೀಡಿ'' ಎಂದು ಮೋದಿ ಆ‌ಗ್ರಹಿಸಿದರು.

'ನೀವು ಮಮತಾ ದೀದಿಯನ್ನು ನಂಬಿದಿರಿ, ದೀದಿ ಮತ್ತು ಅವರ ಅನುಯಾಯಿಗಳಿಂದ ನಿಮ್ಮ ಕನಸುಗಳು ಚೂರುಚೂರಾಗಿವೆ. ಅವರಿಂದ ನಿಮ್ಮ ಕನಸು ಚೂರಾಗಿದೆ, ಬೆಳವಣಿಗೆ ಕುಂಟಿತವಾಗಿದೆ, ಇಲ್ಲಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರವಾಗಿದೆ' ಎಂದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ ನಡೆಸಿದರು.

'ಬಂಗಾಳಕ್ಕೆ ಶಾಂತಿ, ಸ್ವತಂತ್ರ ಮತ್ತು ಅಭಿವೃದ್ಧಿ ಬೇಕಿದೆ. 2047ರ ವೇಳಗೆ ಪಶ್ಚಿಮ ಬಂಗಾಳ ಮತ್ತೆ ದೇಶವನ್ನು ಮುನ್ನಡೆಸುವ ಬಂಗಾಳವಾಗಿ ಹೊರಹೊಮ್ಮಲಿದೆ' ಎಂದರು.

'ತಾಯಿ, ತಾಯ್ನಾಡು, ಜನರು' ಇವರಿಗಾಗಿ ದುಡಿಯುವುದಾಗಿ ಅವರು ಭರವಸೆಗಳನ್ನು ನೀಡಿದ್ದರು. ಆದರೆ ನೀವು ಹೇಳಿ, ಕಳೆದ 10 ವರ್ಷಗಳಲ್ಲಿ ಟಿಎಂಸಿಯು ಸಾಮಾನ್ಯ ಜನರ ಜೀವನದಲ್ಲಿ ಬದಲಾವಣೆಯನ್ನು ತರಲು ಸಾಧ್ಯವಾಗಿದೆಯೇ? ತಾಯಂದಿರ ಮೇಲೆ ಬೀದಿಗಳಲ್ಲಿ ಹಾಗೂ ಅವರ ಮನೆಗಳಲ್ಲೇ ಹಲ್ಲೆ ನಡೆಸಲಾಗುತ್ತಿದೆ. ಇತ್ತೀಚೆಗೆ 80 ವರ್ಷ ವಯಸ್ಸಿನ ತಾಯಿಯ ಮೇಲೆ ನಡೆದಿರುವ ಅಮಾನುಷ ನಡೆಯು ಇಡೀ ದೇಶದ ಎದುರು ಬಹಿರಂಗವಾಗಿದೆ ಎಂದು ಟಿಎಂಸಿ ಸರ್ಕಾರದ ನಡೆಯನ್ನು ವಿರೋಧಿಸಿದರು.

ರಾಜ್ಯದಲ್ಲಿ ಚುನಾವಣಾ ದಿನಾಂಕ ಘೋಷಣೆಯಾದ ಬಳಿಕ ಬಿಜೆಪಿ ಹಮ್ಮಿಕೊಂಡಿರುವ ಬೃಹತ್ ರ್‍ಯಾಲಿ ಇದಾಗಿದೆ. ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಸೇರಿದಂತೆ ಹಲವು ಮುಖಂಡರು ಭಾಗಿಯಾಗಿದ್ದಾರೆ.

* ಜೀವನದಲ್ಲಿ ಮಹತ್ತರವಾದುದನ್ನು ಮಾಡುವ ಕನಸು ಕಂಡಿದ್ದೆ, ಆದರೆ ಪ್ರಮುಖ ಮುಖಂಡರು, ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವದ ನಾಯಕ, ಪ್ರಧಾನಿ ನರೇಂದ್ರ ಮೋದಿ ಜೀ ಅವರು ಹಾಜರಿರುವ ವೇದಿಕೆಯಲ್ಲಿ ಇರುವ ಕನಸನ್ನು ಯಾವತ್ತಿಗೂ ಕಂಡಿರಲಿಲ್ಲ.

– ಮಿಥುನ್‌ ಚಕ್ರವರ್ತಿ, ನಟ, ಬಿಜೆಪಿ ನಾಯಕ

ಓದಿ: 

ನರೇಂದ್ರ ಭಾಷಣದ ಪ್ರಮುಖಾಂಶಗಳು:

* ಬ್ರಿಗೇಡ್‌ ಪರೇಡ್‌ ಗ್ರೌಂಡ್ ಹಲವು ಮಹಾನ್‌ ನಾಯಕರಿಗೆ ಸಾಕ್ಷಿಯಾಗಿದೆ, ಹಾಗೇ ಪಶ್ಚಿಮ ಬಂಗಾಳದ ಬೆಳವಣಿಗೆಗೆ ಅಡ್ಡಿಯಾಗಿರುವವರನ್ನೂ ಕಂಡಿದೆ. ಬಂಗಾಳದ ಜನರು ಬದಲಾವಣೆಯ ಬಗೆಗಿನ ಭರವಸೆಯನ್ನು ಎಂದಿಗೂ ಕಳೆದು ಕೊಂಡಿಲ್ಲ. ಬೆಂಗಾಲ್‌ಗೆ 'ಶಾಂತಿ' ಬೇಕಿದೆ. 'ಬಂಗಾರದ ಬಂಗಾಳ', 'ಪ್ರಗತಿಶೀಲ ಬಂಗಾಳ' ಬೇಕಾಗಿದೆ ಎಂದರು.

* ಈ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ, ಎಡ ಪಕ್ಷಗಳು ಹಾಗೂ ಕಾಂಗ್ರೆಸ್‌, ಅವುಗಳ ಬಂಗಾಳದ ವಿರೋಧಿ ನೀತಿಗಳು ಒಂದು ಕಡೆಗಿವೆ. ಮತ್ತೊಂದು ಕಡೆಯಲ್ಲಿ ಬಂಗಾಳದ ಜನರಿದ್ದಾರೆ.

* ಬಂಗಳಾದ ಅಭಿವೃದ್ಧಿಯ ಭರವಸೆ ನೀಡಲು ನಾನು ಇಂದು ಇಲ್ಲಿಗೆ ಬಂದಿದ್ದೇನೆ. ಇಲ್ಲಿ ಹೂಡಿಕೆ ಹೆಚ್ಚಿಸಲು, ಬಂಗಳಾದ ಸಂಸ್ಕೃತಿ ಕಾಪಾಡಲು ಹಾಗೂ ಬದಲಾವಣೆಯನ್ನು ತರುವ ಭರವಸೆ ನೀಡುತ್ತೇನೆ ಎಂದು ಮೋದಿ ಹೇಳಿದರು.

* ಮುಂದಿನ 25 ವರ್ಷಗಳು ಬಂಗಾಳದ ಅಭಿವೃದ್ಧಿ ಅತ್ಯಂತ ಮುಖ್ಯವಾಗಿದೆ. ಮುಂದಿನ 5 ವರ್ಷಗಳ ಬೆಳವಣಿಗೆಯು ಇಲ್ಲಿನ ಮುಂದಿನ 25 ವರ್ಷಗಳ ನಂತರದ ಅಭಿವೃದ್ಧಿಯನ್ನು ನಿರ್ಧರಿಸಲಿವೆ ಎಂದರು.

* ನಾವು ರೈತರಿಗಾಗಿ, ಉದ್ಯಮಿಗಳು ಹಾಗೂ ಅಕ್ಕ–ತಂಗಿಯರು, ಹೆಣ್ಣು ಮಕ್ಕಳಿಗಾಗಿ ಕಠಿಣ ಶ್ರಮವಹಿಸಿ ದುಡಿಯುತ್ತೇನೆ. ಪ್ರತಿ ಕ್ಷಣವು ಅವರ ಕನಸುಗಳನ್ನು ಈಡೇರಿಸಲು ಶ್ರಮಿಸುತ್ತೇವೆ ಎಂದು ಭರವಸೆ ನೀಡಿದರು.

* 'ಅಸಲಿ ಬದಲಾವಣೆಯ' ಕಡೆಗೆ ನಿಮ್ಮ ನಂಬಿಕೆ ಇರಬೇಕು. ಬಂಗಾಳದ ಅಭಿವೃದ್ಧಿ, ಬಂಗಾಳದ ಪರಿಸ್ಥಿತಿಯ ಬದಲಾವಣೆ, ಹೂಡಿಕೆಯ ಹೆಚ್ಚಳ ಹಾಗೂ ಕೈಗಾರಿಕೆಗಳ ಹೆಚ್ಚಳ ಹಾಗೂ ಬಂಗಳಾದ ಮರುನಿರ್ಮಾಣದಲ್ಲಿ ನಂಬಿಕೆಯಿಡಿ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು