ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಖಿಂಪುರ ಪ್ರಕರಣ: 2ನೇ ಎಫ್‌ಐಆರ್; ಪ್ರತ್ಯೇಕ ವರದಿ ಸಲ್ಲಿಸಲು ‘ಸುಪ್ರೀಂ’ ಸೂಚನೆ

Last Updated 26 ಅಕ್ಟೋಬರ್ 2021, 15:40 IST
ಅಕ್ಷರ ಗಾತ್ರ

ನವದೆಹಲಿ: ಕೃಷಿ ಸುಧಾರಣಾ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ವಾಹನ ಹರಿದು ನಾಲ್ವರು ರೈತರು ಸಾವಿಗೀಡಾದ ಬೆನ್ನಲ್ಲೇ. ಅ. 3ರಂದು ನಡೆದ ಲಖಿಂಪುರ ಖೇರಿ ಹಿಂಸಾಚಾರದಲ್ಲಿ ಪತ್ರಕರ್ತ ಸೇರಿದಂತೆ ನಾಲ್ವರನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದ ಎರಡನೇ ಎಫ್‌ಐಆರ್ ಕುರಿತು ಪ್ರತ್ಯೇಕ ವರದಿಯನ್ನು ಸಲ್ಲಿಸುವಂತೆ ಉತ್ತರಪ್ರದೇಶ ಸರ್ಕಾರಕ್ಕೆ ಮಂಗಳವಾರ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.

ಈ ಸಂಬಂಧ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೈಗೊಂಡ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ನೇತೃತ್ವದ ನ್ಯಾಯಪೀಠವು ಮೊದಲ ಎಫ್‌ಐಆರ್‌ನ ಸಾಕ್ಷಿಗಳ ರಕ್ಷಣೆ ಮತ್ತು ಅವರ ಹೇಳಿಕೆಗಳನ್ನು ತ್ವರಿತವಾಗಿ ದಾಖಲಿಸುವಂತೆ ಆದೇಶ ನೀಡಿತು.

ಹಿಂಸಾಚಾರದಲ್ಲಿ ಹತ್ಯೆಗೀಡಾದ ಶ್ಯಾಮಸುಂದರ್ ಅವರ ಪತ್ನಿ ರೂಬಿ ದೇವಿ ಅವರ ಪರ ಹಾಜರಾದ ಹಿರಿಯ ವಕೀಲ ಅರುಣ್ ಭಾರದ್ವಾಜ್ ‘ಶ್ಯಾಮಸುಂದರ್ ಅವರ ಹತ್ಯೆಗೆ ಕಾರಣರಾದ ಮೂವರು ಆರೋಪಿಗಳು ಆರಾಮವಾಗಿ ಓಡಾಡಿಕೊಂಡಿದ್ದಾರೆ. ಅವರ ವಿರುದ್ಧ ಪೊಲೀಸರು ಯಾವುದೇ ಕ್ರಮವನ್ನು ಕೈಗೊಂಡಿಲ್ಲ’ ಎಂದು ನ್ಯಾಯಾಲಯದ ಮುಂದೆ ವಾದ ಮಂಡಿಸಿದರು.

ಹತ್ಯೆಗೀಡಾದ ಪತ್ರಕರ್ತ ರಮಣ್ ಕಶ್ಯಪ್ ಅವರ ಕುಟುಂಬದ ಪರ ಹಾಜರಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರ್ಷವೀರ್ ಪ್ರತಾಪ್ ಶರ್ಮಾ, ಆರೋಪಿಗಳನ್ನು ಬಂಧಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ನ್ಯಾಯಾಲಯವನ್ನು ಕೋರಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಉತ್ತರವನ್ನು ಸಲ್ಲಿಸುವಂತೆ ಉತ್ತರಪ್ರದೇಶ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಹರೀಶ್ ಸಾಳ್ವೆ ಅವರಿಗೆ ನ್ಯಾಯಪೀಠವು ಸೂಚಿಸಿದೆ.

ಪ್ರಕರಣದ ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ನ. 8ಕ್ಕೆ ನಿಗದಿಪಡಿಸಿತು.

ಕೇವಲ 23 ಜನ ಮಾತ್ರ ಪ್ರತ್ಯಕ್ಷದರ್ಶಿಗಳು: ‘ಸುಪ್ರೀಂ’ ಅಚ್ಚರಿ
ನವದೆಹಲಿ: ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ನ್ಯಾಯಪೀಠವು, ‘4ರಿಂದ 5 ಸಾವಿರ ಜನರು ಸೇರಿದ್ದ ಸಭೆಯಲ್ಲಿ ಕೇವಲ 23 ಜನರನ್ನು ಮಾತ್ರ ಘಟನೆಯ ಪ್ರತ್ಯಕ್ಷದರ್ಶಿಗಳೆಂದು ಗುರುತಿಸಲಾಗಿದೆ’ ಎಂದು ಆಶ್ಚರ್ಯ ವ್ಯಕ್ತಪಡಿಸಿತು.

ಆಗ ವರದಿಯನ್ನು ಓದಿ ಹೇಳಿದ ಉತ್ತರಪ್ರದೇಶ ಸರ್ಕಾರದ ಪರ ಹಾಜರಿದ್ದ ಹಿರಿಯ ವಕೀಲ ಹರೀಶ್ ಸಾಳ್ವೆ, ‘68 ಜನರಲ್ಲಿ 30 ಸಾಕ್ಷಿಗಳು ಮಾತ್ರ ಸಿಆರ್‌ಪಿಸಿ ಸೆಕ್ಷನ್ 164ರ ಅಡಿಯಲ್ಲಿ ತಮ್ಮ ಹೇಳಿಕೆಗಳನ್ನು ದಾಖಲಿಸಿದ್ದಾರೆ. ಅದರಲ್ಲಿ 23 ಮಂದಿ ಮಾತ್ರ ಪ್ರತ್ಯಕ್ಷದರ್ಶಿಗಳು’ ಎಂದರು.

ಆಗ ನ್ಯಾಯಪೀಠವು ‘ನೂರಾರು ರೈತರಿದ್ದ ರ‍್ಯಾಲಿಯಲ್ಲಿ ಕೇವಲ 23 ಮಂದಿ ಮಾತ್ರ ಪ್ರತ್ಯಕ್ಷದರ್ಶಿಗಳೇ’ ಎಂದೂ ಪ್ರಶ್ನಿಸಿತು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಸಾಳ್ವೆ, ‘ಈ ವಿಷಯದಲ್ಲಿ ಡಿಜಿಟಲ್ ಸಾಕ್ಷ್ಯಗಳನ್ನೂ ಪರಿಶೀಲಿಸಲಾಗುತ್ತಿದೆ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಮೇರೆಗೆ 16 ಆರೋಪಿಗಳನ್ನು ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT