ಗುರುವಾರ , ಅಕ್ಟೋಬರ್ 21, 2021
28 °C

ಲಖಿಂಪುರ ಹಿಂಸಾಚಾರ: ವಿಚಾರಣೆಗೆ ಹಾಜರಾಗಬೇಕಿದ್ದ ಕೇಂದ್ರ ಸಚಿವರ ಪುತ್ರ ಗೈರು

ಪಿಟಿಐ Updated:

ಅಕ್ಷರ ಗಾತ್ರ : | |

ಲಖಿಂಪುರ: ಲಖಿಂಪುರ–ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ವಾಹನ ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳಿಗ್ಗೆ 10 ಗಂಟೆಗೆ ಪೊಲೀಸರ ಮುಂದೆ ಹಾಜರಾಗಬೇಕೆಂದು ಹೇಳಿದ್ದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಅವರು ಬೆಳಿಗ್ಗೆ 10.30 ಆದರೂ ಪೊಲೀಸ್ ಠಾಣೆಗೆ ತಲುಪಿಲ್ಲ ಎಂದು ಮೂಲಗಳು ತಿಳಿಸಿವೆ.

ತನಿಖಾ ತಂಡದ ಮುಖ್ಯಸ್ಥರಾಗಿರುವ ಡೆಪ್ಯುಟಿ ಇನ್‌ಸ್ಪೆಕ್ಟರ್ ಜನರಲ್ (ಪ್ರಧಾನ ಕಚೇರಿ) ಉಪೇಂದ್ರ ಅಗರ್ವಾಲ್ ಅವರು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಂದರು. ಆದರೆ, 'ಆಶಿಶ್ ಮಿಶ್ರಾ ಇಲ್ಲಿಯವರೆಗೆ ಬಂದಿಲ್ಲ' ಎಂದು ಅಧಿಕೃತ ಮೂಲವು ಬೆಳಿಗ್ಗೆ 10.30 ರ ಸುಮಾರಿಗೆ ತಿಳಿಸಿದೆ.

ಘಟನೆಗೆ ಸಂಬಂಧಿಸಿದಂತೆ ಗುರುವಾರವಷ್ಟೇ ಪೊಲೀಸರು ಆಶಿಶ್‌ ಪಾಂಡೆ ಮತ್ತು ಲವಕುಶ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ಪೊಲೀಸರು ಆಶಿಶ್ ಮಿಶ್ರಾ ಮನೆಯ ಹೊರಗೆ ನೋಟಿಸ್ ಅಂಟಿಸಿ, ಹಿಂಸಾಚಾರಕ್ಕೆ ಸಂಬಂಧಿಸಿದಂತೆ ತಮ್ಮ ಮುಂದೆ ಹಾಜರಾಗಬೇಕು ಎಂದು ಹೇಳಿತ್ತು.

ಇದನ್ನೂ ಓದಿ: 

‌ಲಖಿಂಪುರ–ಖೇರಿಯಲ್ಲಿ ಭಾನುವಾರ (ಅ.3) ನಡೆದ ಹಿಂಸಾಚಾರದಲ್ಲಿ ಎಂಟು ಜನರು ಮೃತಪಟ್ಟಿದ್ದರು. ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್‌ ಮಿಶ್ರಾ ಅವರ ಬೆಂಗಾವಲು ಪಡೆಯ ಎರಡು ಎಸ್‌ಯುವಿಗಳು ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಹರಿದಿದ್ದವು. ಈ ವೇಳೆ ನಾಲ್ವರು ರೈತರು ಬಲಿಯಾಗಿದ್ದರು. ಆಕ್ರೋಶಗೊಂಡ ರೈತರು ಎರಡೂ ಎಸ್‌ಯುವಿಗಳಿಗೆ ಬೆಂಕಿ ಹಚ್ಚಿದ ಪರಿಣಾಮ ಈ ಎಸ್‌ಯುವಿಗಳಲ್ಲಿ ಇದ್ದವರಲ್ಲಿ ನಾಲ್ವರು ಮೃತಪಟ್ಟಿದ್ದರು.

ಈ ವೇಳೆ ಆಶಿಶ್ ಮಿಶ್ರಾ ವಾಹನವೊಂದರಲ್ಲಿದ್ದರು ಎಂದು ರೈತರು ಆರೋಪಿಸಿದ್ದರೆ, ಈ ಆರೋಪವನ್ನು ನಿರಾಕರಿಸಿದ್ದ ಸಚಿವ ಅಜಯ್ ಮಿಶ್ರಾ, ತನ್ನ ಮಗ ಬೇರೊಂದು ಕಾರ್ಯಕ್ರಮದಲ್ಲಿದ್ದ ಬಗ್ಗೆ ಸಾಕ್ಷ್ಯಗಳನ್ನು ಒದಗಿಸಲು ಸಿದ್ಧ ಎಂದಿದ್ದರು.

ಇದನ್ನೂ ಓದಿ: 

ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಸರ್ಕಾರವು ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಏಕಸದಸ್ಯ ತನಿಖಾ ಆಯೋಗವನ್ನು ರಚಿಸಿದೆ. ಅಲಹಾಬಾದ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪ್ರದೀಪ್‌ ಕುಮಾರ್‌ ಶ್ರೀವಾತ್ಸವ್‌ ಅವರು ಆಯೋಗದ ನೇತೃತ್ವ ವಹಿಸಿದ್ದು, ಎರಡು ತಿಂಗಳ ಒಳಗಾಗಿ ತನಿಖೆ ಪೂರ್ಣಗೊಳಿಸಿ, ವರದಿ ಸಲ್ಲಿಸಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು