ಲಖಿಂಪುರ ಖೇರಿ: ‘ಉತ್ತರ ಪ್ರದೇಶದ ಲಖಿಂಪುರ ಘಟನೆಗೆ ಸಂಬಂಧಿಸಿ ಕೇಂದ್ರದ ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ಅಜಯ್ ಮಿಶ್ರಾ ಅವರು ರಾಜೀನಾಮೆ ನೀಡಬೇಕು’ ಎಂದು ಬಿಕೆಯು ನಾಯಕ ರಾಕೇಶ್ ಟಿಕಾಯತ್ ಆಗ್ರಹಿಸಿದ್ದಾರೆ.
ಎಲ್ಲ ಆರೋಪಿಗಳನ್ನು ಬಂಧಿಸಬೇಕು. ರೈತರ ಜತೆ ಸರ್ಕಾರ ಮಾಡಿಕೊಂಡಿರುವ ಎಲ್ಲ ಒಪ್ಪಂದಗಳನ್ನು ಒಂದು ವಾರದ ಒಳಗೆ ಜಾರಿಗೊಳಿಸಬೇಕು. ಇಲ್ಲವಾದಲ್ಲಿ ದೇಶದಾದ್ಯಂತ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಕೇಂದ್ರ ಕೃಷಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರ ಪೈಕಿ ಪ್ರಮುಖರಾಗಿರುವ ಟಿಕಾಯತ್, ಸರ್ಕಾರಿ ಅಧಿಕಾರಿಗಳ ಜತೆ ಅಕ್ಟೋಬರ್ 4ರಂದು ರೈತರು ಮಾಡಿಕೊಂಡ ಒಪ್ಪಂದದ ನೇತೃತ್ವ ವಹಿಸಿದ್ದರು. ಈ ಒಪ್ಪಂದದ ಬಳಿಕ ರೈತರು ಪ್ರತಿಭಟನೆ ನಿಲ್ಲಿಸಿದ್ದರು. ಅಲ್ಲದೆ, ಮೃತ ರೈತರ ಮರಣೋತ್ತರ ಪರೀಕ್ಷೆಗೆ ಅವರ ಕುಟುಂಬದವರು ಸಮ್ಮತಿಸಿದ್ದರು.
ಒಮ್ಮತಕ್ಕೆ ಬಂದ ಬಳಿಕ ಮೃತ ರೈತರ ಕುಟುಂಬದವರಿಗೆ ₹45 ಲಕ್ಷ ಪರಿಹಾರ ನೀಡಲಾಗುವುದು ಮತ್ತು ಹೈಕೋರ್ಟ್ ಜಡ್ಜ್ ಅಧೀನದಲ್ಲಿ ನ್ಯಾಯಾಂಗ ತನಿಖೆ ನಡೆಸಲಾಗುವುದು ಎಂದು ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಟಿಕಾಯತ್ ಸಮ್ಮುಖದಲ್ಲಿ ತಿಳಿಸಿದ್ದರು.
‘ನಮ್ಮ ಪ್ರತಿಭಟನೆ ಕೊನೆಗೊಂಡಿಲ್ಲ. ಒಪ್ಪಂದ ಮಾಡಿಕೊಂಡಿರುವುದನ್ನು ಜಾರಿಗೊಳಿಸುತ್ತಾರೆಯೇ ಎಂದು 8 ದಿನಗಳ ಕಾಲ ಕಾದು ನೋಡಲಿದ್ದೇವೆ. ಜಾರಿಗೊಳಿಸದಿದ್ದಲ್ಲಿ ದೇಶದಾದ್ಯಂತ ಪ್ರತಿಭಟನೆ ನಡೆಸಲಿದ್ದೇವೆ’ ಎಂದು ಟಿಕಾಯತ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.