ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾನವೆನುವ ಗಂಧ ಚೆಲ್ಲಿ... ಲತಾ ಮಂಗೇಶ್ಕರ್ ನೆನಪು

Last Updated 6 ಫೆಬ್ರುವರಿ 2022, 21:30 IST
ಅಕ್ಷರ ಗಾತ್ರ

ಮಹಾತ್ಮ ಗಾಂಧಿಯ ತುಂಡುಬಟ್ಟೆ, ರವೀಂದ್ರನಾಥ ಟ್ಯಾಗೋರರ ಉದ್ದನೆ ಗಡ್ಡ ಹೇಗೆ ಭಾರತದ ಸಮಷ್ಟಿ ಪ್ರಜ್ಞೆಯ ಅವಿಭಾಜ್ಯ ತುಣುಕುಗಳೋ ಹಾಗೆಯೇ ಲತಾ ಮಂಗೇಶ್ಕರ್ ಕಂಠ. ಭಾರತೀಯ ಜನಪ್ರಿಯ ಸಂಗೀತದ ಸಾಮ್ರಾಜ್ಞಿ ಲತಾ. 36 ಭಾಷೆಗಳಲ್ಲಿ ಅವರ ಕಂಠಮಾಧುರ್ಯ ಅನಾವರಣಗೊಂಡಿದೆ. ಹಿಂದಿಯಲ್ಲೇ 1000ಕ್ಕೂ ಹೆಚ್ಚು ಸಿನಿಮಾ ಗೀತೆಗಳನ್ನು ಹಾಡಿದ್ದಾರೆ. ಮಠಾಠಿ, ಬಂಗಾಳಿ ಭಾಷೆಗಳ ಸಂಗೀತಕ್ಕೂ ಅವರ ಕಾಣ್ಕೆ ದೊಡ್ಡದು.

‘ಕಿತಿ ಹಸಾಲ್’ ಮರಾಠಿ ಚಿತ್ರಕ್ಕೆ ‘ನಾಚೂ ಯಾ ಗಾಡೆ’ ಲತಾ ಮೊದಲು ಹಾಡಿದ ಗೀತೆ. ಎಡಿಟಿಂಗ್ ಆದಮೇಲೆ ಆ ಹಾಡನ್ನೇ ಕಿತ್ತುಹಾಕಿದ್ದರು. ಆಗಿನ್ನೂ ಗಾಯಕಿಗೆ 13 ವರ್ಷ. ಆಮೇಲೆ ‘ಪಹೀಲಿ ಮಂಗಲಾ ಗೌರ್’ ಮರಾಠಿ ಸಿನಿಮಾಗೆ ‘ನತಾಲಿ ಚೈತ್ರಾಚಿ ನವಲಾಯ್’ ಎಂಬ ಹಾಡನ್ನು ಹಾಡಿದರು. ‘ಮಾತಾ ಏಕ್ ಸಪೂತ್ ಕಿ ದುನಿಯಾ’ ಧ್ವನಿಮುದ್ರಿಸಿದ ಮೊದಲ ಹಿಂದಿ ಗೀತೆ.

ವಿದ್ಯಾರ್ಥಿನಿ ಶಿಸ್ತು

1945ರಲ್ಲಿ ಇಂದೋರ್‌ನಿಂದ ಮುಂಬೈಗೆ ಸ್ಥಳಾಂತರಗೊಂಡ ಲತಾ, ಹಿಂದೂಸ್ಥಾನಿ ಸಂಗೀತ ಕಲಿಯಲು ಸೇರಿದ್ದು ಉಸ್ತಾದ್ ಅಮನ್ ಅಲಿ ಖಾನ್ ಗರಡಿಗೆ. ಭೇಂಡಿ ಬಜಾರ್ ಘರಾಣದ ಅಮನ್ ಸಂಗೀತದ ಸೂಕ್ಷ್ಮಗಳನ್ನು ಹೃದಯಕ್ಕಿಳಿಸಿದರು. ಲತಾ ಸಿನಿಮಾ ನಂಟಿಗೆ ತಂತು ಆಗಿದ್ದವರು ವಿನಾಯಕ ದಾಮೋದರ್ ಕರ್ನಾಟಕಿ. ಅವರು 1948ರಲ್ಲಿ ನಿಧನ ರಾದರು. ಆಮೇಲೆ ಈ ಗಾನಪ್ರತಿಭೆಯ ವೃತ್ತಿಬದುಕಿಗೆ ಸಾಣೆಹಿಡಿಯಲಾರಂಭಿಸಿದ್ದು ಸಂಗೀತ ನಿರ್ದೇಶಕ ಗುಲಾಂ ಹೈದರ್.

ಸಶಧರ್ ಮುಖರ್ಜಿ ಎಂಬ ನಿರ್ಮಾಪಕರು ‘ಶಹೀದ್’ ಎಂಬ ಸಿನಿಮಾಗೆ ಹೊಸ ಗಾಯಕಿಯ ಶೋಧದಲ್ಲಿದ್ದರು. ಲತಾ ಅವರನ್ನು ಮುಖರ್ಜಿ ಬಳಿಗೆ ಕರೆದುಕೊಂಡು ಹೋದದ್ದು ಗುಲಾಂ. ಧ್ವನಿಪರೀಕ್ಷೆ ನಡೆಸಿದ ಮುಖರ್ಜಿ, ‘ಇದು ತೆಳು ಕಂಠ. ನಮ್ಮ ಸಿನಿಮಾಗೆ ಹೊಂದುವುದಿಲ್ಲ’ ಎಂದು ತಿರಸ್ಕರಿಸಿಬಿಟ್ಟರು. ಗುಲಾಂ ಅವರಿಗೋ ನಖಶಿಖಾಂತ ಕೋಪ. ‘ಇವಳ ಕಂಠದ ಛಾಪು ಮುಂದೆ ಹೇಗಿರುತ್ತದೆ ಎಂದು ನೀವೇ ನೋಡುವಿರಂತೆ. ಇವಳಿಂದ ಹಾಡಿಸಲು ಕಾಲಿಗೆ ಬಿದ್ದು ಬೇಡಬೇಕಾದ ದಿನವೂ ಬಂದೀತು’ ಎಂದು ಭಾವಾವೇಶದಲ್ಲಿ ಹೇಳಿದಾಗ ಉದಯೋನ್ಮುಖ ಗಾಯಕಿಯ ಕಣ್ಣುಗಳು ಪಿಳಿಗುಟ್ಟಿದ್ದವು. ಅಷ್ಟೇ ಅಲ್ಲ, ಅದನ್ನೊಂದು ಹೊಣೆಗಾರಿಕೆ ಎಂದೇ ಮನಸ್ಸು ಭಾವಿಸಿತು. ನದೀಂ ಪಾಣಿಪತಿ ಬರೆದಿದ್ದ ‘ದಿಲ್‌ ಮೇರಾ ಥೋಡಾ, ಮುಝೆ ಕಹೀ ಕಾ ನಾ ಛೋಡಾ’ ಎಂಬ ಹಾಡನ್ನು ಗುಲಾಂ ಹೈದರ್ ಅದೇ ವರ್ಷ ಹಾಡಿಸಿದರು. ‘ಮಜ್‌ಬೂರ್’ ಸಿನಿಮಾದ ಆ ಹಾಡು ಲತಾಗೆ ಮೊದಲ ಬ್ರೇಕ್. ‘ಗುಲಾಂ ಹೈದರ್ ನನ್ನ ಗಾಡ್‌ಫಾದರ್. ನನ್ನಲ್ಲಿ ಅದಮ್ಯ ನಂಬಿಕೆ ಇಟ್ಟ ಮೊದಲ ಸಂಗೀತ ನಿರ್ದೇಶಕ’ ಎಂದು ಲತಾ ಪದೇ ಪದೇ ಹೇಳಿದ್ದು ಇದೇ ಕಾರಣಕ್ಕೆ.

ಗಾಯಕಿಯಿಂದ ಕಿವಿಮಾತು

ನೂರ್ ಜಹಾನ್ ಅನುಕರಿಸುವ ಗಾಯಕಿ ಇವಳು ಎಂಬ ಆರೋಪ ಮೊದಲು ಲತಾ ಮೇಲೆ ಇತ್ತು. ಅದನ್ನು ಬಲು ಬೇಗ ಕಳಚಿದರು. ಆ ಕಾಲಘಟ್ಟದಲ್ಲಿ ಹಿಂದಿ ಸಿನಿಮಾದ ಸಂಭಾಷಣೆ, ಸಾಹಿತ್ಯದಲ್ಲಿ ಇದ್ದುದು ಉರ್ದು ಆತ್ಮ. ಲತಾ ಮರಾಠಿಗರಾದ್ದರಿಂದ ಅವರ ಉಚ್ಚಾರಣೆಯಲ್ಲಿ ಲೋಪಗಳಿವೆ ಎಂದು ನಟ ದಿಲೀಪ್ ಕುಮಾರ್ ಒಮ್ಮೆ ಟೀಕಿಸಿದ್ದರು. ಅದನ್ನು ಗಂಭೀರವಾಗಿ ಪರಿಗಣಿಸಿದ ಗಾಯಕಿ, ಶಫಿ ಎಂಬ ಮೇಷ್ಟ್ರ ಬಳಿಗೆ ಹೋಗಿ ಉರ್ದು ಪಾಠವನ್ನೂ ಕಲಿತದ್ದು ಅವರೊಳಗಿನ ವಿದ್ಯಾರ್ಥಿಶಿಸ್ತಿಗೆ ಸಾಕ್ಷಿ. ಚಿಕ್ಕಂದಿನಲ್ಲಿ ತಾನು ಕೇಳಿ ಬೆಳೆದ ಗಾಯಕಿ ನೂರ್ ಜಹಾನ್ ಒಡನಾಟ ಸಿಕ್ಕಿದ್ದು ಬೋನಸ್ಸು. ವರ್ಷಗಟ್ಟಲೆ ಅವರಿಬ್ಬರ ನಡುವೆ ಸಂಗೀತದ ಚರ್ಚೆಗಳು ಗರಿಗೆದರಿದವು. ನೂರ್ ಜಹಾನ್ ಅನೇಕ ಸೂಕ್ಷ್ಮಗಳನ್ನು ಹೊಸ ಗಾಯಕಿಯ ಕಿವಿಯೊಳಗೆ ಹಾಕಿದರು. ಇವೆಲ್ಲ ಲತಾ ಬೆಳೆಯಲು ಅಗತ್ಯವಿದ್ದ ಗೊಬ್ಬರವಾದವು.

1949ರಲ್ಲಿ ‘ಮಹಲ್’ ಸಿನಿಮಾಗೆ ಖೇಮ್‌ಚಂದ್ ಪ್ರಕಾಶ್ ಹಾಡೊಂದನ್ನು ಸಂಯೋಜಿಸಿದರು. ‘ಆಯೇಗಾ ಆನೇವಾಲಾ’ ಎಂಬ ಆ ಹಾಡಿಗೆ ತುಟಿ ಚಲನೆ ಮಾಡಿದ ನಟಿ ಮಧುಬಾಲಾ. ಆ ಕಾಲದಲ್ಲಿ ಅಸಂಖ್ಯ ಅಭಿಮಾನಿಗಳ ಹೃದಯ ಕದ್ದ ನಟಿ. ಅವರ ಅಭಿನಯಕ್ಕೂ ಆ ಗೀತೆಗೂ ಸಂದ ಸಂಬಂಧ ಸಹೃದಯರ ಮನದಲ್ಲಿನ್ನೂ ಹಸಿರು. ಆ ಗೀತೆಯನ್ನು ಹಾಡಿದ ಲತಾ ಕಡೆಗೆ ಇಡೀ ಚಿತ್ರರಂಗದ ಕಣ್ಣು ಹೊರಳಿತು.

ಅನಿಲ್ ಬಿಸ್ವಾಸ್, ಸಿ. ರಾಮಚಂದ್ರ, ಹೇಮಂತ್ ಕುಮಾರ್, ಸಲೀಲ್ ಚೌಧರಿ, ದತ್ತಾ ನಾಯಕ್, ಸಜ್ಜದ್ ಹುಸೇನ್, ರೋಷನ್ ಹೀಗೆ ಹಲವು ಸಂಯೋಜಕರು ಲತಾ ಕಂಠವನ್ನು 1950ರ ದಶಕ ದಲ್ಲಿ ರೆಕಾರ್ಡಿಂಗ್ ಸ್ಟುಡಿಯೊಗೆ ಕರೆತಂದರು. ದೀದಾರ್, ಬೈಜು ಬಾವ್ರಾ, ಅಮರ್, ಮದರ್ ಇಂಡಿಯಾ ತರಹದ ಸಿನಿಮಾಗಳ ಹಾಡುಗಳಲ್ಲಿ ಬಗೆಬಗೆಯ ರಾಗಗಳಿದ್ದವು. ಬಹುತೇಕವು ಶಾಸ್ತ್ರೀಯ ಸಂಗೀತ ಪ್ರಧಾನ. ಅವೇ ಲತಾ ಪಾಲಿಗೆ ತಾಲೀಮು. ಬರ್ಸಾತ್, ಶ್ರೀ 420, ಚೋರಿ ಚೋರಿ ರೀತಿಯ ಸಿನಿಮಾಗಳಿಗೆ ಶಂಕರ್ ಜೈಕಿಶನ್ ಆಯ್ಕೆ ಮಾಡಿದ್ದು ಇವರದ್ದೇ ಕಂಠವನ್ನು. ಸಜಾ, ದೇವದಾಸ್ ಸಿನಿಮಾಗಳಿಗೆ ಎಸ್.ಡಿ. ಬರ್ಮನ್ ಅಗ್ರ ಗಾಯಕಿಯಾಗಿ ನೆಚ್ಚಿಕೊಂಡಿದ್ದೂ ಲತಾ ಅವರನ್ನೇ.

ಜಿಗಿತದ ದಶಕ

1960ರ ದಶಕದಲ್ಲಿ ಗಾಯಕಿಯಾಗಿ ಲತಾ ಅವರಿಗೆ ದೊಡ್ಡ ಜಿಗಿತ. ‘ಮೊಘಲ್–ಎ–ಆಜಂ’ ಚಿತ್ರದ ‘ಪ್ಯಾರ್ ಕಿಯಾ ತೋ ಡರ್‌ನಾ ಕ್ಯಾ’ ಹಾಡು ನೌಶಾದ್ ಮಟ್ಟು, ಲತಾ ಶಾರೀರದ ಅಪೂರ್ವ ಕೊಡುಗೆ. ಶಂಕರ್ ಜೈಕಿಶನ್ ಮಟ್ಟುಹಾಕಿದ ‘ಅಜೀಬ್ ದಾಸ್ತಾ ಹೈ ಯೇ’ ಅಂತೂ ನಿತ್ಯನೂತನ. ಈ ಎರಡೂ ಹಾಡುಗಳು ಹುಟ್ಟಿದ್ದು 1960ರಲ್ಲಿ. ಬರ್ಮನ್ ಅವರಿಗೆ ಸಹಾಯಕರಾಗಿದ್ದ ಜೈದೇವ್ ಸ್ವರ ಸಂಯೋಜಿಸಿದ ‘ಅಲ್ಲಾ ತೇರೋ ನಾಮ್’ ಭಜನೆ ಕೇಳದವರು ವಿರಳ. 1963ರಲ್ಲಿ ಇಂಡೊ–ಚೀನಾ ಯುದ್ಧದ ಹಿನ್ನೆಲೆ
ಯಲ್ಲಿ ಕವಿ ಪ್ರದೀಪ್ ಬರೆದ ‘ಯೇ ಮೇರೆ ವತನ್ ಕೆ ಲೋಗೋಂ’ ಹಾಡಿಗೆ ಸಿ. ರಾಮಚಂದ್ರ ಮಟ್ಟು ಹಾಕಿದರು. ಲತಾ ಕಂಠದ ಆ ಹಾಡು ಇವತ್ತೂ ಸ್ವಾತಂತ್ರ್ಯ ದಿನಾಚರಣೆಯಂದು ಪ್ರತಿಧ್ವನಿಸುತ್ತದೆ. ಗೈಡ್ ಸಿನಿಮಾದ ‘ಪಿಯಾ ತೋ ಸೆ ನೈನಾ ಲಾಗೆ ರೇ’, ‘ಜ್ಯುವೆಲ್ ಥೀಫ್‌’ನ ‘ಹೋಟೋಂ ಮೆ ಐಸಿ ಬಾತ್’ ಲತಾ ಕಂಠ–ಎಸ್‌.ಡಿ. ಬರ್ಮನ್ ಸಂಯೋಜನೆಯ ಮೋಡಿಗೆ ಕನ್ನಡಿ ಹಿಡಿದಿವೆ.

35 ವರ್ಷಗಳ ನಂಟು

ಲಕ್ಷ್ಮೀಕಾಂತ್–ಪ್ಯಾರೆಲಾಲ್ ಸಂಗೀತ ನಿರ್ದೇಶಕ ಜೋಡಿಯ ಸಾಹಚರ್ಯ ಸಿಕ್ಕಿದ್ದು 1963ರಲ್ಲಿ. ಅಲ್ಲಿಂದ 35 ವರ್ಷಗಳ ಅವಧಿ
ಯಲ್ಲಿ ಏನಿಲ್ಲವೆಂದರೂ 700 ಹಾಡುಗಳಲ್ಲಿ ಈ ಮೂವರ ಸಂಬಂಧವಿದೆ. ಮಿಲನ್, ಅನಿತಾ, ಪಾರಸ್ಮಣಿ ತರಹದ ಸಿನಿಮಾ
ಗಳು ಲತಾ ಜನಪ್ರಿಯತೆಗೆ ಅಗತ್ಯವಿದ್ದ ಹಾಡುಗಳನ್ನು ಕೊಟ್ಟವು.

ಮೀನಾ ಕುಮಾರಿ ಕಣ್ನೋಟದ ಮೋಹಪಾಶಕ್ಕೆ ಅರ್ಥ ಕಲ್ಪಿಸಿದ ‘ಚಲ್ತೆ ಚಲ್ತೆ’, ‘ಇನ್ಹೀ ಲೋಗೋ ನೇ’ ಹಾಡುಗಳು ಲತಾ ಕಂಠದಿಂದಲೇ ಜನಪ್ರಿಯ ವಾದವು. ‘ಪಾಕೀಜಾ’ ಚಿತ್ರದ ಈ ಹಾಡುಗಳ ಸಂಯೋಜಕ ಗುಲಾಂ ಮೊಹಮ್ಮದ್. ‘ರಂಗೀಲಾ ರೇ’, ‘ಖಿಲ್ತೇ ಹೈ ಗುಲ್ ಯಹಾಂ’, ‘ಪಿಯಾ ಬಿನಾ’ ಹಾಡುಗಳು ಇವತ್ತೂ ‘ಕ್ಯಾರವಾನ್‌’ ಮೂಲಕ ಸಹೃದಯರ ಕಿವಿತುಂಬುತ್ತಿವೆ. ಎಸ್‌.ಡಿ. ಬರ್ಮನ್ ಕಾಣ್ಕೆಗಳಿವು. ‘ಚಾಂದಿನಿ’ (ಸಂಗೀತ: ಶಿವಕುಮಾರ್ ಶರ್ಮ–ಹರಿಪ್ರಸಾದ್ ಚೌರಾಸಿಯಾ), ‘ರಾಮ್‌ ಲಖನ್’ ಚಿತ್ರದ ಹಾಡುಗಳಲ್ಲೂ ಲತಾ ಛಾಪು ಇತ್ತು. ‘ಮೈನೆ ಪ್ಯಾರ್ ಕಿಯಾ’, ‘ಹಮ್ ಆಪ್ಕೆ ಹೈ ಕೌನ್’ ಸಂಗೀತ
ಮಯ ಚಿತ್ರಗಳ ಲತಾ ಹಾಡುಗಳನ್ನೂ ಸಹೃದಯರು ಸ್ವೀಕರಿಸಿದರು. ಆದರೆ ಅಷ್ಟು ಹೊತ್ತಿಗೆ ಅವರ ಕಂಠದಲ್ಲಿ ದಣಿವಿತ್ತು.

‘ಉತ್ಸವ್’, ‘ಸಿಲ್‌ಸಿಲಾ’ ಸಿನಿಮಾಗೀತೆಗಳನ್ನು ಕೊಂಡಾಡಿದವರಿಗೆ ‘ವೀರ್‌ ಝರಾ’, ‘ಪುಕಾರ್’ ಚಿತ್ರಗಳ ಲತಾ ಹೆಚ್ಚೇನೂ ಹಿಡಿಸಲಿಲ್ಲ. ಇದಕ್ಕೂ ಲತಾ ಕಂಠದಲ್ಲಿ ಆಗಿದ್ದ ವಯೋಸಹಜ ಬದಲಾವಣೆಯೇ ಕಾರಣ.

ಟೀಕೆಗೂ ಟಾಂಗ್

ಕೊನೆ ಕೊನೆಯಲ್ಲಿ ಲತಾ ಕಂಠವನ್ನು ಅನೇಕರು ಟೀಕಿಸಿದರು. ಸಂಯೋಜಕ ಸಿ. ರಾಮಚಂದ್ರ ಅಂತೂ, ‘ಲತಾ ಕಂಠದ ಭೂತವಿದು, ವರ್ತಮಾನವಲ್ಲ’ ಎಂದು ಗೇಲಿ ಮಾಡಿದ್ದರು. ‘ಅವರೂ ಸಂಯೋಜಕರಾಗಿ ಈಗ ಭೂತವೇ’ ಎಂದು ಲತಾ ತಿರುಗೇಟು ನೀಡಿದ್ದರು.

ಇಳಯರಾಜ ಸಂಯೋಜಿಸಿದ ತೆಲುಗು, ತಮಿಳು, ಹಿಂದಿ ಗೀತೆಗಳಿಗೂ ಶಾರೀರವಾಗಿರುವ ಲತಾ, ಎರಡು ವರ್ಷಗಳ ಹಿಂದೆ ‘ಸೌಗಂಧ್ ಮುಝೆ ಇಸ್ ಮಿಟ್ಟಿ ಕೀ’ ಎಂಬ ಮಯೂರೇಶ್ ಪೈ ಸ್ವರ ಹಾಕಿದ್ದ ಸೇನಾಗೀತೆಯನ್ನು ಹಾಡಿದ್ದರು. ಅದು ಅವರ ಗಾನಪಯಣದ ಕೊನೆಯ ನಿಲ್ದಾಣ. ಯಾವ ಗಾಯಕ–ಗಾಯಕಿಯೂ ಮೆರೆಯದಷ್ಟು, ಉಳಿಯದಷ್ಟು ಕಾಲ ಚಿತ್ರಸಂಗೀತದ ಮೂಲಕ ಲತಾ ಹೆಸರು ಚಿರಸ್ಥಾಯಿಯಾಗಿದೆ. ಅವರ ಮಂದ್ರ ಸ್ಥಾಯಿ, ಸ್ಪಷ್ಟ ಉಚ್ಚಾರ, ಪಲುಕುಗಳು, ಲಾಲಿತ್ಯ ಕಾಡುತ್ತಲೇ ಇರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT