ಬುಧವಾರ, ಏಪ್ರಿಲ್ 14, 2021
23 °C

ನ್ಯಾ.ಮಾರ್ಕಂಡೇಯ ಕಟ್ಜು ವಿರುದ್ಧ ನಿಂದನಾ ಮೊಕದ್ದಮೆಗೆ ಸಮ್ಮತಿ ಕೋರಿ ಅರ್ಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮಾರ್ಕಂಡೇಯ ಕಟ್ಜು ಅವರ ವಿರುದ್ಧ ನ್ಯಾಯಾಂಗ ನಿಂದನೆ ಮೊಕದ್ದಮೆ ದಾಖಲಿಸಲು ಅನುಮತಿ ನೀಡುವಂತೆ ಕೋರಿ ವಕೀಲರೊಬ್ಬರು ಸಾಲಿಸಿಟರ್‌ ಜನರಲ್‌ ತುಷಾರ್ ಮೆಹ್ತಾ ಅವರಿಗೆ ಶನಿವಾರ ಮನವಿ ಸಲ್ಲಿಸಿದ್ದಾರೆ.

ವಕೀಲ ಅಲಖ್‌ ಅಲೋಕ್‌ ಶ್ರೀವಾಸ್ತವ ಈ ಅರ್ಜಿ ಸಲ್ಲಿಸಿದ್ದಾರೆ. ದೇಶಭ್ರಷ್ಟ ವಜ್ರ ವ್ಯಾಪಾರಿ ನೀರವ್‌ ಮೋದಿ ಹಸ್ತಾಂತರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಮೂರ್ತಿ ಕಟ್ಜು ಅವರು ಸುಪ್ರೀಂಕೋರ್ಟ್‌ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿ, ಅದರ ಘನತೆಗೆ ಕುಂದು ತಂದಿದ್ದಾರೆ ಎಂಬುದು ವಕೀಲ ಶ್ರೀವಾಸ್ತವ ಅವರ ಆರೋಪ. 

ಇದಕ್ಕೂ ಮುನ್ನ, ಶ್ರೀವಾಸ್ತವ ಅವರು ಅನುಮತಿ ಕೋರಿ ಅಟಾರ್ನಿ ಜನರಲ್‌ ಕೆ.ಕೆ.ವೇಣುಗೋಪಾಲ ಅವರಿಗೆ ಮನವಿ ಸಲ್ಲಿಸಿದ್ದರು.

‘ಕಳೆದ 16 ವರ್ಷಗಳಿಂದ ನಾನು ನ್ಯಾಯಮೂರ್ತಿ ಕಟ್ಜು ಅವರೊಂದಿಗೆ ಒಡನಾಟ ಹೊಂದಿದ್ದೇನೆ. ಈಗಲೂ ಪರಸ್ಪರ ಸಂಪರ್ಕದಲ್ಲಿಯೂ ಇದ್ದೇವೆ. ಈ ಹಿನ್ನೆಲೆಯಲ್ಲಿ ನೀವು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ನನ್ನ ನಿರ್ಧಾರ ತಿಳಿಸುವುದು ಸಮಂಜಸ ಎನಿಸುವುದಿಲ್ಲ’ ಎಂದು ವೇಣುಗೋಪಾಲ ಅವರು ಮಾರ್ಚ್‌ 30ರಂದು ಶ್ರೀವಾಸ್ತವ ಅವರಿಗೆ ಪತ್ರ ಬರೆದ ಪತ್ರದಲ್ಲಿ ವಿವರಿಸಿದ್ದರು.

‘ಈ ವಿಷಯ ಕುರಿತ ಅನುಮತಿಗಾಗಿ ಸಾಲಿಸಿಟರ್‌ ಜನರಲ್‌ ಮೆಹ್ತಾ ಅವರನ್ನು ಸಂಪರ್ಕಿಸುವಂತೆಯೂ‘ ಅವರು ಪತ್ರದಲ್ಲಿ ಉಲ್ಲೇಖಿಸಿದ್ದರು.

ಈ ಹಿನ್ನೆಲೆಯಲ್ಲಿ ವಕೀಲ ಶ್ರೀವಾಸ್ತವ ಅವರು ಸಾಲಿಸಿಟರ್‌ ಜನರಲ್‌ ಮೆಹ್ತಾ ಅವರಿಗೆ ಅರ್ಜಿ ಸಲ್ಲಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು