ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸೇನಾ ಮಾಹಿತಿ ಸೋರಿಕೆ ದೇಶದ್ರೋಹ: ಕಾಂಗ್ರೆಸ್‌

Published : 20 ಜನವರಿ 2021, 16:43 IST
ಫಾಲೋ ಮಾಡಿ
Comments

ನವದೆಹಲಿ: ‘ಮಿಲಿಟರಿ ಕಾರ್ಯಾಚರಣೆಯ ಅಧಿಕೃತ ರಹಸ್ಯಗಳನ್ನು ಸೋರಿಕೆ ಮಾಡುವುದು ದೇಶದ್ರೋಹದ ಕೆಲಸ. ಇಂತಹ ದುಷ್ಕೃತ್ಯದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕು’ ಎಂದು ಕಾಂಗ್ರೆಸ್‌ ಬುಧವಾರ ಒತ್ತಾಯಿಸಿದೆ.

‘ದೇಶದ್ರೋಹದ ಚಟುವಟಿಕೆಗಳಲ್ಲಿ ಪಾಲ್ಗೊಂಡವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದು ಅವಶ್ಯ. 2019ರಲ್ಲಿ ಪಾಕಿಸ್ತಾನದ ಬಾಲಾಕೋಟ್‌ ಮೇಲೆ ನಡೆದಿದ್ದ ವೈಮಾನಿಕ ದಾಳಿಗೂ ಮುನ್ನ ಈ ಮಾಹಿತಿಯನ್ನು ಸೋರಿಕೆ ಮಾಡಲಾಗಿತ್ತು. ಈ ಸಂಬಂಧ ಕೇಂದ್ರ ಸರ್ಕಾರವು ತನಿಖೆಗೆ ಆದೇಶಿಸಬೇಕು’ ಎಂದು ಕಾಂಗ್ರೆಸ್‌ ಮುಖಂಡರು ಆಗ್ರಹಿಸಿದರು.

ಮಾಜಿ ರಕ್ಷಣಾ ಸಚಿವ ಎ.ಕೆ.ಆ್ಯಂಟನಿ, ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್‌, ಮಾಜಿ ಗೃಹ ಸಚಿವ ಸುಶೀಲ್‌ಕುಮಾರ್‌ ಶಿಂಧೆ ಹಾಗೂ ಮಾಜಿ ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷೀದ್‌ ಜಂಟಿ ಪತ್ರಿಕಾಗೋಷ್ಠಿ ನಡೆಸಿ, ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದರು.

ಈ ವಿಷಯವನ್ನು ಮುಂಬರುವ ಬಜೆಟ್‌ ಅಧಿವೇಶದಲ್ಲಿ ಪಕ್ಷವು ಪ್ರಸ್ತಾಪಿಸಲಿದೆ. ಇತರ ಪಕ್ಷಗಳ ಬೆಂಬಲದೊಂದಿಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವುದಾಗಿಯೂ ಕಾಂಗ್ರೆಸ್‌ ನಾಯಕರು ಹೇಳಿದರು.

ಬಾಲಾಕೋಟ್‌ ದಾಳಿ ನಡೆಯುವುದಕ್ಕೆ ಕೆಲ ದಿನಗಳ ಮುಂಚೆ ರಿಪಬ್ಲಿಕ್‌ ಟಿ.ವಿ. ಮುಖ್ಯ ಸಂಪಾದಕ ಅರ್ನಬ್‌ ಗೋಸ್ವಾಮಿ ಅವರು ಬಾರ್ಕ್‌ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾರ್ಥೊ ದಾಸ್‌ಗುಪ್ತಾ ಅವರೊಂದಿಗೆ ವಾಟ್ಸ್‌ ಆ್ಯಪ್‌ನಲ್ಲಿ ಚಾಟ್‌ ನಡೆಸಿದ್ದರು. ಪಾಕಿಸ್ತಾನದ ಮೇಲೆ ಭಾರಿ ವೈಮಾನಿಕ ದಾಳಿ ನಡೆಯುವ ಕುರಿತ ಮಾಹಿತಿಯನ್ನು ಅವರು ದಾಸ್‌ಗುಪ್ತಾ ಜೊತೆ ಹಂಚಿಕೊಂಡಿದ್ದರು ಎನ್ನಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT