ಮಂಗಳವಾರ, ಡಿಸೆಂಬರ್ 7, 2021
23 °C

ಜನರ ಜೀವಿತಾವಧಿ ಮೇಲೂ ಕೋವಿಡ್‌-19 ಪರಿಣಾಮ ಬೀರಿದೆ: ಐಐಪಿಎಸ್‌ ಅಧ್ಯಯನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಜನರ ಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿರುವ ಕೋವಿಡ್‌ ಪಿಡುಗಿನ ಪರಿಣಾಮ, ಭಾರತದಲ್ಲಿ ಜನರ ಜೀವಿತಾವಧಿಯು ಕನಿಷ್ಠ ಎರಡು ವರ್ಷ ಕುಗ್ಗಿದೆ. ಅಂಕಿ ಅಂಶಗಳ ವಿಶ್ಲೇಷಣೆ ಆಧರಿಸಿ ಇಲ್ಲಿನ ಅಂತರರಾಷ್ಟ್ರೀಯ ಜನಸಂಖ್ಯಾ ಅಧ್ಯಯನ ಸಂಸ್ಥೆ (ಐಐಪಿಎಸ್‌) ವಿಜ್ಞಾನಿಗಳು ಈ ಮಾಹಿತಿ ನೀಡಿದ್ದಾರೆ.

ಪುರುಷರ ಮತ್ತು ಮಹಿಳೆಯರಲ್ಲಿ ಜೀವಿತಾವಧಿ ಕುಸಿತ ಕುರಿತ ಮಾಹಿತಿ ಒಳಗೊಂಡ ಐಐಪಿಎಸ್‌ನ ವಿಶ್ಲೇಷಣಾತ್ಮಕ ವರದಿಯು ‘ಬಿಎಂಸಿ ಪಬ್ಲಿಕ್ ಹೆಲ್ತ್‌‘ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ. ಐಐಪಿಎಸ್ ಪ್ರಾಧ್ಯಾಪಕ ಸೂರ್ಯಕಾಂತ್ ಯಾದವ್ ಅವರು ವರದಿ ಸಿದ್ಧಪಡಿಸಿದ್ದಾರೆ.

‘2019ರ ಅಂದಾಜಿನಂತೆ ಜೀವಿತಾವಧಿಯು ಪುರುಷರಿಗೆ 69.5 ವರ್ಷ ಮತ್ತು ಮಹಿಳೆಯರಿಗೆ 72 ವರ್ಷ ಇತ್ತು. ಕೋವಿಡ್ ಪಿಡುಗಿನ ಬಳಿಕ 2020ರಲ್ಲಿ ಇದು ಕ್ರಮವಾಗಿ 67.5 ವರ್ಷ, 69.8 ವರ್ಷಕ್ಕೆ ಇಳಿಸಿದೆ‘ ಎಂದಿದೆ.

ಜನನದ ಸಮಯದಲ್ಲಿ ಶಿಶುವಿನ ಆರೋಗ್ಯ ಸ್ಥಿತಿಗತಿ ಭವಿಷ್ಯದಲ್ಲಿಯೂ ಸ್ಥಿರವಾಗಿರಲಿದೆ ಎಂಬ ಅಂದಾಜಿನಲ್ಲಿ ಜೀವಿತಾವಧಿಯನ್ನು ಅಂದಾಜು ಮಾಡಲಾಗುತ್ತದೆ.

ಪ್ರೊ.ಯಾದವ್ ಅವರು ಅಧ್ಯಯನ ವರದಿಯಲ್ಲಿ ‘ಬದುಕಿನ ಅಸಮಾನತೆಯ ಅವಧಿ‘ ಎಂಬ ಅಂಶವನ್ನೂ ಸೇರಿಸಿದ್ದು, ಕೋವಿಡ್‌ನಿಂದಾಗಿ 39 ರಿಂದ 69 ವರ್ಷ ವಯಸ್ಸಿನ ಪುರುಷರು ಹೆಚ್ಚು ಮೃತಪಟ್ಟಿದ್ದಾರೆ. ಸಾಮಾನ್ಯ ವರ್ಷಗಳಿಗೆ ಹೋಲಿಕೆ ಮಾಡಿದರೆ 2020ರಲ್ಲಿ 35 ರಿಂದ 79 ವರ್ಷ ವಯಸ್ಸಿನವರು  ಕೋವಿಡ್‌–19 ನಿಂದ ಮೃತಪಟ್ಟಿದ್ದಾರೆ. ಜೀವಿತಾವಧಿ ಕುಸಿತ ಅಂದಾಜಿಗೆ ಈ ಅಂಶ ಹೆಚ್ಚು ಆಧಾರವಾಗಿದೆ‘ ಎಂದಿದ್ದಾರೆ. 

ದೇಶದಲ್ಲಿ ಪ್ರತಿ ವರ್ಷ ಸಂಭವಿಸುವ ಮರಣದ ಸ್ವರೂಪದ ಮೇಲೆ ಕೋವಿಡ್‌–19 ಪಿಡುಗಿನ ಪರಿಣಾಮಗಳನ್ನು ತಿಳಿಯುವುದು ಈ ಅಧ್ಯಯನದ ಉದ್ದೇಶವಾಗಿತ್ತು.

‘ಪ್ರತಿ ಬಾರಿಯೂ ಕೆಲವು ಸಾಂಕ್ರಾಮಿಕ ರೋಗಗಳು ಬಾಧಿಸಿದಾಗ ಮನುಷ್ಯರ ಸಾಮಾನ್ಯ ಜೀವಿತಾವಧಿಯೂ ಕಡಿಮೆಯಾಗುತ್ತದೆ‘ ಎಂದು ಐಐಪಿಎಸ್ ನಿರ್ದೇಶಕ ಡಾ ಕೆ ಎಸ್ ಜೇಮ್ಸ್ ಹೇಳಿದ್ದಾರೆ.

ಈ ಮಾತಿಗೆ ಉದಾಹರಣೆಯಾಗಿ ಆಫ್ರಿಕನ್ ರಾಷ್ಟ್ರಗಳಲ್ಲಿ ಎಚ್ಐವಿ-ಏಡ್ಸ್ ಸಾಂಕ್ರಾಮಿಕದ ಪರಿಣಾಮ ನೀಡುತ್ತಾರೆ. ಅಲ್ಲಿ, ಜನರ ಜೀವಿತಾವಧಿಯು ಕುಗ್ಗಿತ್ತು. ಒಮ್ಮೆ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಬಂದ ಬಳಿಕ ಜೀವಿತಾವಧಿ ಕ್ರಮವೂ ಸುಧಾರಣೆಗೊಂಡಿತು‘ ಎಂದು ಅವರು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು