ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೆಹಲಿ ಅಬಕಾರಿ ಹಗರಣ: ಸಿಬಿಐ ಎಫ್‌ಐಆರ್‌ನಲ್ಲಿ ಏನಿದೆ?

Last Updated 20 ಆಗಸ್ಟ್ 2022, 4:44 IST
ಅಕ್ಷರ ಗಾತ್ರ

ನವದೆಹಲಿ: ದೆಹಲಿಯ ಹೊಸ ಅಬಕಾರಿ ನೀತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸಿರುವ ಸಿಬಿಐ, ಟೆಂಡರ್‌ ನಂತರದ ಸನ್ನದುದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದಲೇ ಅಬಕಾರಿ ನೀತಿಯನ್ನು ರೂಪಿಸಲಾಗಿತ್ತು ಎಂದು ಉಲ್ಲೇಖಿಸಿದೆ.

2021-22ನೇ ಸಾಲಿನ ದೆಹಲಿಯ ಜಿಎನ್‌ಸಿಟಿಡಿಯ ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಅಕ್ರಮಗಳು ನಡೆದಿವೆ ಎಂಬ ದೂರಿನ ಆಧಾರದಲ್ಲಿ ಸಿಬಿಐ ಎಫ್‌ಐಆರ್‌ ದಾಖಲಿಸಿದೆ.

‘ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಅಂದಿನ ಅಬಕಾರಿ ಆಯುಕ್ತ ಅರ್ವಾ ಗೋಪಿ ಕೃಷ್ಣ, ಅಬಕಾರಿ ಇಲಾಖೆಯ ಅಂದಿನ ಉಪ ಆಯುಕ್ತ ಆನಂದ್ ತಿವಾರಿ ಮತ್ತು ಅಬಕಾರಿ ಇಲಾಖೆ ಸಹಾಯಕ ಆಯುಕ್ತ ಪಂಕಜ್ ಭಟ್ನಾಗರ್ ಅಬಕಾರಿ ನೀತಿಗೆ ಸಂಬಂಧಿಸಿದ ಶಿಫಾರಸು ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 2021-22ನೇ ಸಾಲಿನ ಅಬಕಾರಿ ನೀತಿಯನ್ನು ಸಕ್ಷಮ ಪ್ರಾಧಿಕಾರದ ಅನುಮೋದನೆಯಿಲ್ಲದೆ ಟೆಂಡರ್‌ ನಂತರ ಪರವಾನಗಿದಾರರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರೂಪಿಸಲಾಗಿತ್ತು’ ಎಂದು ಆರೋಪಿಸಲಾಗಿದೆ.

‘ಮನರಂಜನಾ ಮತ್ತು ಈವೆಂಟ್ ಮ್ಯಾನೇಜ್‌ಮೆಂಟ್ ಕಂಪನಿಯಾದ ‘ಓನ್ಲಿ ಮಚ್ ಲೌಡರ್‌’ನ ಮಾಜಿ ಸಿಇಒ ವಿಜಯ್ ನಾಯರ್‌, ‘ಪೆರ್ನೋಡ್ ರಿಕಾರ್ಡ್‌’ನ ಮಾಜಿ ಉದ್ಯೋಗಿ ಮನೋಜ್ ರೈ, ‘ಬ್ರಿಂಡ್ಕೊ ಸ್ಪಿರಿಟ್ಸ್’ ಮಾಲೀಕ ಅಮನದೀಪ್ ಧಾಲ್ ಮತ್ತು ‘ಇಂಡೋ ಸ್ಪಿರಿಟ್ಸ್‌’ನ ಮಾಲೀಕ ಸಮೀರ್ ಮಹೇಂದ್ರು ಅವರು ಅಬಕಾರಿ ನೀತಿಯನ್ನು ರೂಪಿಸುವಲ್ಲಿ ಮತ್ತು ಅನುಷ್ಠಾನಗೊಳಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು’ ಎಂದೂ ಎಫ್‌ಐಆರ್‌ನಲ್ಲಿ ಹೇಳಲಾಗಿದೆ.

ಹಣವನ್ನು ಬೇರೆಡೆ ವರ್ಗಾಯಿಸಲು, ಸರ್ಕಾರಿ ಸೇವೆಯಲ್ಲಿದ್ದ ಕೆಲ ಮಂದಿಗೆ ತಲುಪಿಸಲು ಎಲ್‌–1 ಪರವಾನಗಿದಾರರು ಚಿಲ್ಲರೆ ಮಾರಾಟಗಾರರಿಗೆ ‘ಕ್ರೆಡಿಟ್‌ ನೋಟ್‌’ಗಳನ್ನು ನೀಡುತ್ತಿದ್ದರು. ದಾಖಲೆಗಳನ್ನು ತಿರುಚಲು ಖಾತೆಗಳ ಪುಸ್ತಕಗಳಲ್ಲಿ ತಪ್ಪು ಲೆಕ್ಕ ತೋರಿಸುತ್ತಿದ್ದರು ಎಂದೂ ಆರೋಪಿಸಲಾಗಿದೆ.

ಸಿಸೋಡಿಯಾ ಅವರ ನಿಕಟವರ್ತಿಗಳಿದ್ದ ‘ಬಡ್ಡಿ ರಿಟೇಲ್ ಪ್ರೈವೇಟ್ ಲಿಮಿಟೆಡ್‌’ನ ನಿರ್ದೇಶಕ ಅಮಿತ್ ಅರೋರಾ, ದಿನೇಶ್ ಅರೋರಾ ಮತ್ತು ಅರ್ಜುನ್ ಪಾಂಡೆ ಅವರು ಮದ್ಯದ ಪರವಾನಗಿದಾರರಿಂದ ಸಂಗ್ರಹಿಸಿದ ಹಣದವನ್ನು ಸರ್ಕಾರಿ ಸರ್ಕಾರಿ ಸೇವೆಯಲ್ಲಿದ್ದ ಕೆಲವರಿಗೆ ತಲುಪಿಸುತ್ತಿದ್ದರು ಎನ್ನಲಾಗಿದೆ.

‘ಇಂಡೋಸ್ಪಿರಿಟ್ಸ್‌’ನ ಎಂಡಿ ಸಮೀರ್ ಮಹೇಂದ್ರು ಅವರು ದಿನೇಶ್ ಅರೋರಾ ನಿರ್ವಹಿಸುತ್ತಿದ್ದ ‘ರಾಧಾ ಇಂಡಸ್ಟ್ರೀಸ್’ ಖಾತೆಗೆ ₹1 ಕೋಟಿ ವರ್ಗಾಯಿಸಿದ್ದರು. ಅರುಣ್ ರಾಮಚಂದ್ರ ಪಿಳ್ಳೆ ಎಂಬುವವರು ಕೆಲ ಸರ್ಕಾರಿ ಅಧಿಕಾರಿಗಳಿಗೆ ನೀಡಲೆಂದು ವಿಜಯ್ ಎಂಬುವವರ ಮೂಲಕ ಮಹೇಂದ್ರು ಅವರಿಂದ ಹಣ ಸಂಗ್ರಹಿಸುತ್ತಿದ್ದರು. ವಿಜಯ್‌ ಪರವಾಗಿ ಅರ್ಜುನ್ ಪಾಂಡೆ ಎಂಬ ವ್ಯಕ್ತಿ ಒಮ್ಮೆ ಮಹೇಂದ್ರು ಅವರಿಂದ ಸುಮಾರು ₹2-4 ಕೋಟಿ ಸಂಗ್ರಹಿಸಿದ್ದ’ ಎಂದು ಸಿಬಿಐ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದೆ.

ಪಾಲುದಾರ ಸಂಸ್ಥೆಯಾದ ಮಹದೇವ್ ಲಿಕ್ಕರ್ಸ್‌ಗೆ ಎಲ್‌-1 ಪರವಾನಗಿ ನೀಡಲಾಗಿತ್ತು. ಆದಕ್ಕೆ ಸನ್ನಿ ಮಾರ್ವಾಹ್ ಎಂಬುವವರು ಸಹಿದಾರರಾಗಿದ್ದರು.

ಮದ್ಯದ ದೊರೆಯಾಗಿದ್ದ ಪಾಂಟಿ ಚಡ್ಡಾ ಅವರ ಕುಟುಂಬ ಕಂಪನಿಗಳಲ್ಲಿ ಇದೇ ಮಾರ್ವಾ ಸಹ ನಿರ್ದೇಶಕರಾಗಿದ್ದಾರೆ. ಸರ್ಕಾರಿ ಸೇವೆಯಲ್ಲಿದ್ದ ಕೆಲ ಮಂದಿಯೊಂದಿಗೆ ಮರ್ವಾ ನಿಕಟ ಸಂಪರ್ಕದಲ್ಲಿದ್ದರು. ನಿಯಮಿತವಾಗಿ ಅವರಿಗೆ ಹಣ ಸಂದಾಯ ಮಾಡುತ್ತಿದ್ದರು ಎಂದು ಗೊತ್ತಾಗಿದೆ.

ದೆಹಲಿಯ ಅಬಕಾರಿ ನೀತಿಯ ಕುರಿತು ಸಿಬಿಐ ತನಿಖೆ ನಡೆಸುವಂತೆ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ. ಸಕ್ಸೇನಾ ಅವರು ಶಿಫಾರಸು ಮಾಡಿದ್ದರು. ಪಂಜಾಬ್‌ ವಿಧಾನಸಭೆಗೆ ಈ ವರ್ಷ ನಡೆದ ಚುನಾವಣೆಯ ಖರ್ಚಿಗೆ ಹೊಸ ಅಬಕಾರಿ ನೀತಿಯಿಂದ ದೊರೆತ ಹಣವನ್ನು ಎಎಪಿ ಬಳಸಿದೆ ಎಂದು ಆ ಪಕ್ಷದ ವಿರೋಧಿಗಳು ಆರೋಪಿಸಿದ್ದಾರೆ.

ಇವುಗಳನ್ನೂ ನೋಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT