ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯರಿಂದಲೇ ₹900 ಕೋಟಿ ಹೂಡಿಕೆ

ವಿಶೇಷಾಧಿಕಾರ ರದ್ದು ಬಳಿಕ ಹೊರರಾಜ್ಯದವರಿಂದ ಹೂಡಿಕೆ ಇಲ್ಲ
Last Updated 9 ಆಗಸ್ಟ್ 2020, 11:51 IST
ಅಕ್ಷರ ಗಾತ್ರ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ವಿಶೇಷಾಧಿಕಾರ ರದ್ದುಗೊಳಿಸಿ, ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಿದ ಬಳಿಕ ಇಲ್ಲಿಕಳೆದ ಆಗಸ್ಟ್‌ನಿಂದ ಸ್ಥಳೀಯ ಹೂಡಿಕೆದಾರರೇ ₹900 ಕೋಟಿ ಹೂಡಿಕೆ ಮಾಡಿದ್ದು, ಹೊರ ರಾಜ್ಯದವರಿಂದ ಯಾವುದೇ ಹೂಡಿಕೆ ಹರಿದುಬಂದಿಲ್ಲ.

ವಿಶೇಷಾಧಿಕಾರ ರದ್ದುಗೊಂಡ ಬಳಿಕ ಜಮ್ಮು ಮತ್ತು ಕಾಶ್ಮೀರದ ಹಲವೆಡೆ ಕೆಲ ತಿಂಗಳು ನಿಷೇಧಾಜ್ಞೆ ಹೇರಲಾಗಿತ್ತು. ನಂತರದಲ್ಲಿ ಲಾಕ್‌ಡೌನ್‌ನಿಂದಾಗಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತವಾಗಿತ್ತು. ಹೀಗಿದ್ದರೂ,ಕಾಶ್ಮೀರದಲ್ಲಿ ಕೈಗಾರಿಕಾ ವಲಯದಲ್ಲಿ ಹೂಡಿಕೆಗೆ ಸ್ಥಳೀಯ ಹೂಡಿಕೆದಾರರು ಆಸಕ್ತಿ ತೋರಿದ್ದು, ಕಳೆದ ಆಗಸ್ಟ್‌ನಿಂದ ₹900 ಕೋಟಿ ಹೂಡಿಕೆ ಮಾಡಿದ್ದಾರೆ.

‘ಕಳೆದೊಂದು ವರ್ಷದಲ್ಲಿ ಇದ್ದ ಸ್ಥಿತಿಯ ನಡುವೆಯೂ ಕೈಗಾರಿಕಾ ವಲಯದಲ್ಲಿ ಇಷ್ಟು ಪ್ರಮಾಣದ ಹೂಡಿಕೆ ಉತ್ತಮ ಸೂಚನೆ. ಆದರೆ, ಈ ಸ್ಥಿತಿಯಲ್ಲಿ ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಹೊರ ರಾಜ್ಯದ ಹೂಡಿಕೆದಾರರು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ’ ಎಂದು ಜಮ್ಮು ಮತ್ತು ಕಾಶ್ಮೀರದ ಕೈಗಾರಿಕಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ವಿಶೇಷಾಧಿಕಾರ ರದ್ದುಗೊಳಿಸಿದ ಬಳಿಕ ಹೊರ ರಾಜ್ಯದವರು ಭಾರಿ ಪ್ರಮಾಣದಲ್ಲಿ ಇಲ್ಲಿ ಹೂಡಿಕೆ ಮಾಡುತ್ತಾರೆ ಎಂದು ಮಾಧ್ಯಮಗಳಲ್ಲಷ್ಟೇ ಕೇಳಿಬರುತ್ತಿದೆ. ವಾಸ್ತವ ಸ್ಥಿತಿಯೇ ಬೇರೆ ಇದೆ. ಮುಂದಿನ ಕೆಲ ತಿಂಗಳುಗಳಲ್ಲೂಹೊರರಾಜ್ಯದವರಿಂದ ಹೂಡಿಕೆ ಅನುಮಾನ’ ಎಂದು ಅಧಿಕಾರಿ ತಿಳಿಸಿದರು.

ಕೋವಿಡ್‌ ಪಿಡುಗಿನಿಂದ ಹೂಡಿಕೆದಾರರ ಸಮಾವೇಶ ರದ್ದು: ಮೇ ತಿಂಗಳಲ್ಲಿ ಜಾಗತಿಕ ಹೂಡಿಕೆದಾರರ ಶೃಂಗಸಭೆ ನಡೆಯಬೇಕಿತ್ತು. ಈ ಸಂದರ್ಭದಲ್ಲಿ ಹೊರರಾಜ್ಯದ ಅಂದಾಜು 66 ಕಂಪನಿಗಳು ₹23 ಸಾವಿರ ಕೋಟಿ ಹೂಡಿಕೆಗೆ ಆಸಕ್ತಿ ತೋರಿದ್ದವು. ಆದರೆ ಕೋವಿಡ್‌–19 ಪಿಡುಗಿನಿಂದಾಗಿ ಶೃಂಗಸಭೆಯನ್ನು ಮುಂದೂಡಲಾಯಿತು. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ನಡೆಯಬೇಕಿದ್ದ ಶೃಂಗಸಭೆ, ಸುರಕ್ಷತೆ ಕಾರಣದಿಂದಾಗಿ ಮುಂದೂಡಲ್ಪಟ್ಟಿತ್ತು.

ಖಾಸಗಿ ಹೂಡಿಕೆ, ಉದ್ಯೋಗದ ಭರವಸೆ ನೀಡಿದ್ದ ಪ್ರಧಾನಿ: ‘ವಿಶೇಷಾಧಿಕಾರವು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಕಂಟಕವಾಗಿದೆ’ ಎಂದು ತನ್ನ ನಿರ್ಧಾರವನ್ನು ಕೇಂದ್ರ ಸರ್ಕಾರ ಸಮರ್ಥಿಸಿಕೊಂಡಿತ್ತು. ಜೊತೆಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿ, ಕೈಗಾರಿಕೆಗಳ ಸ್ಥಾಪನೆ, ಖಾಸಗಿ ಹೂಡಿಕೆ ಹಾಗೂ ಉದ್ಯೋಗ ಸೃಷ್ಟಿಗೆ ಕೇಂದ್ರದ ಸರ್ಕಾರ ಯೋಜನೆಗಳನ್ನು ರೂಪಿಸಲಿದೆ ಎಂದುಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷದ ಆಗಸ್ಟ್‌ 8ರಂದು ಹೇಳಿದ್ದರು.

ಆದರೆ, ಆಗಸ್ಟ್‌ನಿಂದ ಇಲ್ಲಿಯವರೆಗೂ ಕಾಶ್ಮೀರದ ಆರ್ಥಿಕ ಸ್ಥಿತಿ ‘ಲಾಕ್‌ಡೌನ್‌’ ಸ್ಥಿತಿಯಲ್ಲಿದ್ದು, ಅಂದಾಜು ₹40 ಸಾವಿರ ಕೋಟಿ ನಷ್ಟವಾಗಿದೆ ಎಂದು ಕಾಶ್ಮೀರ ವಾಣಿಜ್ಯ ಮತ್ತು ಕೈಗಾರಿಕೆಗಳ ಒಕ್ಕೂಟ ವರದಿ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT