ಸೋಮವಾರ, ಜೂನ್ 27, 2022
28 °C

ಲಾಕ್‌ಡೌನ್: ರೈಲ್ವೆ ಹಳಿಯಲ್ಲಿ 8,700 ಕ್ಕೂ ಹೆಚ್ಚು ಜನರು ಸಾವು, ಹಲವರು ವಲಸಿಗರು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ದೇಶದಾದ್ಯಂತ ಕೋವಿಡ್ ಲಾಕ್‌ಡೌನ್‌ನಿಂದಾಗಿ ಪ್ರಯಾಣಿಕರ ರೈಲು ಸೇವೆಗಳನ್ನು ಮೊಟಕುಗೊಳಿಸಿದರೂ ಕೂಡ 2020ರಲ್ಲಿ 8,700 ಕ್ಕೂ ಹೆಚ್ಚು ಜನರು ರೈಲ್ವೆ ಹಳಿಗಳ ಮೇಲೆ ಮೃತಪಟ್ಟಿದ್ದಾರೆ. ಈ ಪೈಕಿ ಹಲವರು ವಲಸೆ ಕಾರ್ಮಿಕರು ಎಂದು ಅಧಿಕಾರಿಗಳು ಹೇಳಿದ್ದಾರೆ.

ಮಾಹಿತಿ ಹಕ್ಕು ಕಾಯ್ದೆಯಡಿ ಮಧ್ಯಪ್ರದೇಶ ಮೂಲದ ಕಾರ್ಯಕರ್ತ ಚಂದ್ರಶೇಖರ್ ಗೌರ್ ಅವರ ಪ್ರಶ್ನೆಗೆ ರೈಲ್ವೆ ಮಂಡಳಿಯು, 2020 ಜನವರಿ ಮತ್ತು ಡಿಸೆಂಬರ್ ನಡುವಿನ ಅವಧಿಯಲ್ಲಿ ದಾಖಲಾದ ಸಾವುಗಳ ಮಾಹಿತಿಯನ್ನು ಹಂಚಿಕೊಂಡಿದೆ.

'ರಾಜ್ಯ ಪೊಲೀಸರಿಂದ ಪಡೆದ ಮಾಹಿತಿಯ ಆಧಾರದ ಮೇಲೆ, 2020ರ ಜನವರಿ ಮತ್ತು ಡಿಸೆಂಬರ್ ಅವಧಿಯಲ್ಲಿ ರೈಲ್ವೆ ಹಳಿಗಳ ಮೇಲೆ 805 ಜನರು ಗಾಯಗೊಂಡಿದ್ದಾರೆ ಮತ್ತು 8,733 ಜನರು ಮೃತಪಟ್ಟಿದ್ದಾರೆ' ಎಂದು ರೈಲ್ವೆ ಮಂಡಳಿ ತಿಳಿಸಿದೆ.

ಸತ್ತವರಲ್ಲಿ ಅನೇಕರು ಲಾಕ್‌ಡೌನ್ ಘೋಷಣೆಯಾದ ವೇಳೆ ರಸ್ತೆಗಳು ಅಥವಾ ಹೆದ್ದಾರಿಗಳಿಗಿಂತಲೂ ರೈಲ್ವೆ ಮಾರ್ಗದಲ್ಲಿ ತೆರಳಿದರೆ ಮನೆಗೆ ಬೇಗ ತಲುಪಬಹುದೆಂದು ಭಾವಿಸಿದ ವಲಸೆ ಕಾರ್ಮಿಕರಾಗಿದ್ದಾರೆ. ಲಾಕ್‌ಡೌನ್ ಮಾನದಂಡಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪೊಲೀಸರಿಗೆ ಸಿಲುಕುವುದರಿಂದ ತಪ್ಪಿಸಿಕೊಳ್ಳಲು ಸಹ ವಲಸೆ ಕಾರ್ಮಿಕರು ರೈಲ್ವೆ ಹಳಿಗಳಲ್ಲಿ ತೆರಳುವುದನ್ನು ಆಯ್ಕೆ ಮಾಡಿಕೊಂಡಿದ್ದರು. ಅಲ್ಲದೆ ಲಾಕ್ ಡೌನ್ ಆಗಿರುವುದರಿಂದ ಯಾವುದೇ ರೈಲುಗಳು ಓಡಾಡುವುದಿಲ್ಲ ಎಂದು ಅವರು ಊಹಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ವಕ್ತಾರ ಡಿಜೆ ನರೈನ್ ಮಾತನಾಡಿ, ಇಂತಹ ಘಟನೆಗಳು ಹಳಿಗಳ ಮೇಲೆ ನಡೆಯುವುದು 'ಅಪಘಾತಗಳಿಂದಲ್ಲ, ಆದರೆ ಅತಿಕ್ರಮಣದಿಂದಾಗಿ' ಎಂದಿದ್ದಾರೆ.

'ಇದು ನಾಗರಿಕರ ಕಾಳಜಿಯ ವಿಷಯವಾಗಿದೆ. ಹಳಿಗಳ ಮೇಲೆ ನಡೆಯುವುದನ್ನು ತಪ್ಪಿಸಲು ರೈಲ್ವೆ ಯಾವಾಗಲೂ ಅತಿಕ್ರಮಣಕಾರರನ್ನು ಸಂವೇದನಾಶೀಲಗೊಳಿಸುವಲ್ಲಿ ಭಾರಿ ಪ್ರಯತ್ನ ಮಾಡಿದೆ. ದೇಶಾದ್ಯಂತ ಸುಮಾರು 70,000 ಕಿ.ಮೀ. ಉದ್ದಕ್ಕೂ ರೈಲು ಹಳಿಗಳು ಹರಡಿಕೊಂಡಿದ್ದು, ಪ್ರತಿದಿನ 17,000ಕ್ಕೂ ಹೆಚ್ಚು ರೈಲುಗಳು ಚಲಿಸುತ್ತವೆ. ಈ ಸಾವುಗಳು ದುರದೃಷ್ಟಕರ ಮತ್ತು ದುಃಖಕರ. ಪ್ರಯಾಣಿಕರ ಮತ್ತು ನಾಗರಿಕರ ಸುರಕ್ಷತೆಯೇ ನಮ್ಮ ಮೊದಲ ಆದ್ಯತೆ' ಎಂದಿದ್ದಾರೆ.

ಅದಕ್ಕೂ ಮುಂಚಿನ ನಾಲ್ಕು ವರ್ಷಗಳಿಗೆ ಹೋಲಿಸಿದರೆ 2020 ರ ಸಾವು-ನೋವುಗಳು ಕಡಿಮೆ ಇದ್ದರೂ ಕೂಡ ಮಾರ್ಚ್ 25 ರಂದು ಕೊರೊನಾ ವೈರಸ್ ಲಾಕ್‌ಡೌನ್ ಘೋಷಿಸಿದ ನಂತರ ಪ್ರಯಾಣಿಕರ ಸೇವೆಗಳನ್ನು ನಿರ್ಬಂಧಿಸಲಾಗಿತ್ತು. ಹೀಗಿದ್ದರೂ ಇಷ್ಟು ಸಾವುಗಳು ಸಂಭವಿಸಿರುವುದು ಗಮನಾರ್ಹ.

ಮೇ 1 ರಿಂದ ವಲಸೆ ಕಾರ್ಮಿಕರನ್ನು ಮನೆಗೆ ಕರೆದೊಯ್ಯಲು ಶ್ರಮಿಕ್ ವಿಶೇಷ ರೈಲುಗಳನ್ನು ಪ್ರಾರಂಭಿಸುವ ಮುನ್ನ ಲಾಕ್‌ಡೌನ್ ಹೇರಿಕೆಯಾದ ಸಮಯದಲ್ಲಿ ಸರಕು ಸಾಗಣೆ ರೈಲುಗಳು ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಪ್ರಯಾಣಿಕರ ಸೇವೆಗಳನ್ನು ಹಂತ ಹಂತವಾಗಿ ಪುನಃ ತೆರೆಯಲಾಗಿದ್ದು, ಡಿಸೆಂಬರ್ ವೇಳೆಗೆ ಸುಮಾರು 1,100 ವಿಶೇಷ ರೈಲುಗಳು ಮತ್ತು 110 ಸಾಮಾನ್ಯ ಪ್ರಯಾಣಿಕರ ರೈಲುಗಳು ಕಾರ್ಯನಿರ್ವಹಿಸಿವೆ.

ಕಳೆದ ವರ್ಷ ಹಳಿಗಳಲ್ಲಿ ಸಂಭವಿಸಿದ ಅನೇಕ ಸಾವು-ನೋವುಗಳನ್ನು ಕೆಲವು ಕಾರಣಗಳಿಂದ ನೋಂದಾಯಿಸಲಾಗಲಿಲ್ಲವಾದರೂ, ಮೇ ತಿಂಗಳಲ್ಲಿ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ ಸರಕು ರೈಲಿನಡಿ ಸಿಲುಕಿ 16 ವಲಸೆ ಕಾರ್ಮಿಕರು ಮೃತಪಟ್ಟಿದ್ದರು.

ರೈಲ್ವೆ ಅಂಕಿ ಅಂಶಗಳ ಪ್ರಕಾರ, ರಾಜ್ಯ ಸರ್ಕಾರಗಳಿಂದ ಸಂಗ್ರಹಿಸಲ್ಪಟ್ಟ ಮಾಹಿತಿಯಲ್ಲಿ 2016 ಮತ್ತು 2019 ರ ನಡುವೆ ಇಂತಹ ಘಟನೆಗಳಲ್ಲಿ 56,271 ಜನರು ಮೃತಪಟ್ಟಿದ್ದಾರೆ ಮತ್ತು 5,938 ಜನರು ಗಾಯಗೊಂಡಿದ್ದಾರೆ. 2017ರಲ್ಲಿ ಮಾತ್ರ ಈ ಪ್ರಮಾಣ ಕೊಂಚ ಕಡಿಮೆಯಿತ್ತು.

ಇಂತಹ ಅಪಘಾತಗಳಲ್ಲಿ 2016 ರಲ್ಲಿ 14,032 ಜನರು, 2017 ರಲ್ಲಿ 12,838, 2018 ರಲ್ಲಿ 14,197 ಮತ್ತು 2019 ರಲ್ಲಿ 15,204 ಜನರು ಮೃತಪಟ್ಟಿದ್ದಾರೆ ಎಂದು ಅಂಕಿ ಅಂಶಗಳು ತೋರಿಸುತ್ತವೆ. ಆದಾಗ್ಯೂ, ರೈಲ್ವೆ ಈ ಸಾವುಗಳನ್ನು 'ರೈಲ್ವೆ ಅಪಘಾತಗಳು' ಎಂದು ಪರಿಗಣಿಸಿಲ್ಲ.

ರೈಲ್ವೆಯ ಸಾವಿನ ಅಂಕಿಅಂಶಗಳನ್ನು ಮೂರು ರೀತಿಯಲ್ಲಿ ವಿಭಾಗಿಸಲಾಗುತ್ತದೆ. ಸಂಭವನೀಯ ಅಪಘಾತಗಳು, ಅತಿಕ್ರಮಣ ಮತ್ತು ಅಹಿತಕರ ಘಟನೆಗಳು. ಈ ಸಾವುಗಳನ್ನು 'ಅಹಿತಕರ ಘಟನೆಗಳು' ಅಥವಾ 'ಅತಿಕ್ರಮಣ' ಎಂಬ ವರ್ಗಕ್ಕೆ ಸೇರಿಸಲಾಗುತ್ತದೆ ಮತ್ತು ಅವುಗಳನ್ನು ರಾಜ್ಯ ಪೊಲೀಸರು ತನಿಖೆ ಮಾಡುತ್ತಾರೆ. ಸಂತ್ರಸ್ತರಿಗೆ ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಂದ ಪರಿಹಾರವನ್ನು ನೀಡಲಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು