ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಪತ್ನಿ ವಿವಾದ| ಆರದ ಪ್ರತಿಭಟನೆ ಕಾವು: ನಡೆಯದ ಕಲಾಪ

ಸಂಸತ್‌ ಮೇಲ್ಮನೆಯಲ್ಲೂ ಗದ್ದಲ, ಕಲಾಪ ನಾಳೆಗೆ ಮುಂದೂಡಿಕೆ
Last Updated 29 ಜುಲೈ 2022, 14:02 IST
ಅಕ್ಷರ ಗಾತ್ರ

ನವದೆಹಲಿ:ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ವಿರುದ್ಧ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ ಅವರು ನೀಡಿದ ‘ರಾಷ್ಟ್ರಪತ್ನಿ’ ಹೇಳಿಕೆ ಬಗ್ಗೆ ಬಿಜೆಪಿ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಸಂಸತ್‌ನ ಎರಡೂ ಸದನಗಳಲ್ಲಿ ವಾಕ್ಸಮರ, ಪ್ರತಿಭಟನೆ, ಗದ್ದಲ ಮುಂದುವರಿದು ಶುಕ್ರವಾರ ಕೂಡ ಸಂಸತ್‌ ಕಲಾಪ ಮುಂದೂಡಲಾಯಿತು.

ಪ್ರತಿಭಟನೆ ತಾರಕಕ್ಕೇರಿದ್ದರಿಂದ ಲೋಕಸಭೆ ಕಲಾಪವನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಗಿತ್ತು. ಮತ್ತೆ ಕಲಾಪ ಸೇರಿದಾಗ ಎರಡೂ ಸದನಗಳಲ್ಲಿ ಅದೇ ಪರಿಸ್ಥಿತಿ ಮುಂದುವರಿಯಿತು.

ಲೋಕಸಭೆಯಲ್ಲಿ ಕಾಂಗ್ರೆಸ್‌ ಸಂಸದರು ಸ್ಪೀಕರ್‌ ಪೀಠದ ಎದುರು ಧಾವಿಸಿ, ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಆಗ ಬಿಜೆಪಿ ಸಂಸದರು ಮತ್ತು ಸಚಿವ ಸರ್ವಾನಂದ ಸೋನೊವಾಲ್‌ ಸೇರಿ ಕೇಂದ್ರ ಸಚಿವರೂ ಎದ್ದು ನಿಂತು, ಚೌಧರಿ ಅವರ ಹೇಳಿಕೆಗೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿಯವರೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಸದನದಲ್ಲಿ ಗದ್ದಲ ತಾರಕ್ಕೇರಿದಾಗ,ಸ್ಪೀಕರ್‌ ಸ್ಥಾನದಲ್ಲಿದ್ದ ಬಿಜೆಪಿ ಸಂಸದ ರಾಜೇಂದ್ರ ಅಗರ್‌ವಾಲ್‌ ಅವರು ಸೋಮವಾರಕ್ಕೆ ಕಲಾಪ ಮುಂದೂಡಿದರು.

ಮೇಲ್ಮನೆಯಲ್ಲಿ ವಿರೋಧ ಪಕ್ಷಗಳು ವಿವಿಧ ವಿಷಯಗಳ ಬಗ್ಗೆ ಪ್ರತಿಭಟನೆ ಮುಂದುವರಿಸಿ, ಕಲಾಪಕ್ಕೆ ಅಡ್ಡಿಪಡಿಸಿದ್ದರಿಂದ ಉಪಸಭಾಪತಿ ಹರಿವಂಶ್‌ ಅವರು ಕಲಾಪವನ್ನು ಸೋಮವಾರಕ್ಕೆ ಮುಂದೂಡಿದರು.

ಇದಕ್ಕೂ ಮೊದಲು ಮಧ್ಯಾಹ್ನ 12 ಗಂಟೆಗೆ ಸದನ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು,ಗುಜರಾತ್‌ ಕಳ್ಳಬಟ್ಟಿ ದುರಂತದ ಚರ್ಚೆಗೆ ಮತ್ತು ಸೋನಿಯಾ ಗಾಂಧಿ ವಿರುದ್ಧ ಅನುಚಿತವಾಗಿ ವರ್ತಿಸಿರುವ ಸಚಿವೆ ಸ್ಮೃತಿ ಇರಾನಿ ವಜಾಕ್ಕೆ ಒತ್ತಾಯಿಸಿ ಸಭಾಪತಿ ಪೀಠದ ಬಳಿ ಪ್ರತಿಭಟಿಸಿದರು. ರಾಷ್ಟ್ರಪತಿಗೆ ಅಗೌರವ ತೋರಿದ್ದಾರೆಂದು ಅಧೀರ್ ರಂಜನ್ ಚೌಧರಿ ಅವರ ವಿರುದ್ಧವೂ ಆಡಳಿತ ಪಕ್ಷದ ಸದಸ್ಯರು ಪ್ರತಿಭಟನೆ ನಡೆಸಿದರು.

ಮೇಲ್ಮನೆ ಕಲಾಪದಲ್ಲಿ ಎರಡನೇ ವಾರವೂ ಯಾವುದೇ ಮಹತ್ವದ ಚರ್ಚೆ ನಡೆಯಲಿಲ್ಲ. ಕಲಾಪಕ್ಕೆ ಅಡ್ಡಿಪಡಿಸಿದರೆಂದು ರಾಜ್ಯಸಭೆಯ ವಿರೋಧ ಪಕ್ಷಗಳ 23 ಸದಸ್ಯರನ್ನು ಈವರೆಗೆ ಅಮಾನತುಗೊಳಿಸಲಾಗಿದೆ.

ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು, ರಾಷ್ಟ್ರಪತಿಗೆ ಅಧೀರ್ ರಂಜನ್ ಚೌಧರಿ ಅಗೌರವ ತೋರಿಸಿರುವುದಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಕ್ಷಮೆಯಾಚಿಸಿದರಷ್ಟೇ ಲೋಕಸಭೆ ಕಾರ್ಯನಿರ್ವಹಿಸಲಿದೆ ಎಂದುಹೇಳಿದ್ದಾರೆ.

ಸರಣಿ ಟ್ವೀಟ್‌ ಮಾಡಿರುವ ಅವರು, ‘ಬುಡಕಟ್ಟು ಸಮುದಾಯಕ್ಕೆ ಮಾಡಿದ ಅವಮಾನವನ್ನು ಬಿಜೆಪಿ ಸಹಿಸುವುದಿಲ್ಲ. ಕಾಂಗ್ರೆಸ್‌ ಪ್ರಜಾಪ್ರಭುತ್ವ ಮತ್ತು ಸಂಸದೀಯ ವ್ಯವಸ್ಥೆ ದುರ್ಬಳಕೆ ಮಾಡಿಕೊಳ್ಳುತ್ತಿದೆ’ ಎಂದು ಕಿಡಿಕಾರಿದ್ದಾರೆ.

ಇರಾನಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ

ಅಧೀರ್‌ ರಂಜನ್‌ ಚೌಧರಿ ಅವರು ರಾಷ್ಟ್ರಪತಿ ಕುರಿತು ನೀಡಿದ ಹೇಳಿಕೆ ಸಂಬಂಧ ಸೋನಿಯಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, ಅನುಚಿತವಾಗಿ ವರ್ತಿಸಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ ಕಾಂಗ್ರೆಸ್ ಸಂಸದರು ಸಂಸತ್ ಭವನದ ಗಾಂಧಿ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಪೀಯೂಷ್ ಗೋಯಲ್ ಅವರು ಸೋನಿಯಾ ಗಾಂಧಿಯವರ ಹೆಸರನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿರುವುದಕ್ಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಪಕ್ಷದ ಸಂಸದರು, ಇರಾನಿ ವಿರುದ್ಧ ಘೋಷಣೆಗಳನ್ನು ಕೂಗುತ್ತಾ ಸಂಸತ್ತಿನ ಉಭಯ ಸದನಗಳಲ್ಲಿ ಕಲಾಪ ಬಹಿಷ್ಕರಿಸಿದರು. ಸಚಿವೆ ಸ್ಥಾನದಿಂದ ಇರಾನಿಯವರನ್ನು ವಜಾಗೊಳಿಸುವಂತೆ ಒತ್ತಾಯಿಸಿದರು.

ಇರಾನಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಕ್ಕು ಬಾಧ್ಯತಾ ಸಮಿತಿಗೆ ಶಿಫಾರಸು ಮಾಡಲುಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ಕಾಂಗ್ರೆಸ್‌ ಈಗಾಗಲೇ ದೂರು ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT