ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಪ್ರದೇಶ: ಇದೇ ಮೊದಲು, ಮಹಿಳಾ ಕಾನ್‌ಸ್ಟೆಬಲ್‌ಗೆ ಪುರುಷನಾಗಿ ಬದಲಾಗಲು ಸಮ್ಮತಿ

Last Updated 1 ಡಿಸೆಂಬರ್ 2021, 12:33 IST
ಅಕ್ಷರ ಗಾತ್ರ

ಭೋಪಾಲ್‌: ಮಧ್ಯಪ್ರದೇಶದ ಮಹಿಳಾ ಕಾನ್‌ಸ್ಟೆಬಲ್‌ ಪುರುಷನಾಗಿ ಬದಲಾಗಲು ಅಲ್ಲಿನ ಗೃಹ ಇಲಾಖೆ ಬುಧವಾರ ಅನುಮತಿ ನೀಡಿದೆ ಎಂದು ಹಿರಿಯ ಅಧಿಕಾರಿ ಹೇಳಿದ್ದಾರೆ.

'ಮಧ್ಯಪ್ರದೇಶ ಸರ್ಕಾರದ ಇಲಾಖೆಯೊಂದರಲ್ಲಿ ಹೀಗೆ ಮಹಿಳಾ ಸಿಬ್ಬಂದಿ ಪುರುಷನಾಗಿ ಬದಲಾಗಲು ಅನುಮತಿ ನೀಡಿದ ಮೊದಲ ಪ್ರಕರಣ ಇದಾಗಿದೆ' ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ(ಗೃಹ ಇಲಾಖೆ) ಡಾ. ರಾಜೇಶ್‌ ರಾಜೋರಾ 'ಪಿಟಿಐ'ಗೆ ತಿಳಿಸಿದ್ದಾರೆ.

'ಇತರ ಪುರುಷ ಪೊಲೀಸ್‌ ಕಾನ್‌ಸ್ಟೆಬಲ್‌ಗಳಂತೆ ಪುರುಷನಾಗಿ ಬದಲಾದ ಸಿಬ್ಬಂದಿಯೂ ಕಾರ್ಯನಿರ್ವಹಿಸಬಹುದಾಗಿದೆ. ಬಾಲ್ಯದಿಂದಲೇ ಅವರು ಮಾನಸಿಕವಾಗಿ 'ಲಿಂಗ ಗುರುತಿಸುವಿಕೆ' ವಿಚಾರವಾಗಿ ಸಮಸ್ಯೆ ಎದುರಿಸುತ್ತಿದ್ದರು ಎಂದು ಮನಃಶಾಸ್ತ್ರಜ್ಞರು ದೃಢಪಡಿಸಿದ್ದಾರೆ. ಇದೀಗ ರಾಜ್ಯ ಗೃಹ ಇಲಾಖೆಯು ಪುರುಷನಾಗಿ ಲಿಂಗ ಬದಲಿಸಿಕೊಳ್ಳಲು ಅನುಮತಿ ನೀಡುವಂತೆ ಡಿಜಿಪಿ ಅವರಿಗೆ ನಿರ್ದೇಶನ ನೀಡಿದೆ' ಎಂದು ಡಾ. ರಾಜೇಶ್‌ ಹೇಳಿದ್ದಾರೆ.

2019ರಲ್ಲಿ ಕಾನ್‌ಸ್ಟೆಬಲ್‌ ಲಿಂಗ ಬದಲಾವಣೆಗೆ ಸಂಬಂಧಿಸಿ ಪೊಲೀಸ್‌ ಇಲಾಖೆಗೆ ಅರ್ಜಿಯನ್ನು ಹಾಕಿದ್ದರು. ಸರ್ಕಾರಿ ಗೆಜೆಟ್‌ ಒಂದರಲ್ಲಿ ಪುರುಷನಾಗಿ ಬದಲಾಗುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ನಂತರ ಪೊಲೀಸ್‌ ಇಲಾಖೆಯು ಕಾನ್‌ಸ್ಟೆಬಲ್‌ ಅವರ ಅರ್ಜಿಯನ್ನು ರಾಜ್ಯ ಗೃಹ ಇಲಾಖೆಗೆ ಕಳುಹಿಸಿತ್ತು.

ಕಾನೂನು ಪ್ರಕಾರ ಭಾರತೀಯ ಪ್ರಜೆಗೆ ತನ್ನ ಲಿಂಗತ್ವ, ಧರ್ಮ ಮತ್ತು ಜಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ಇದರ ಅನ್ವಯ ರಾಜ್ಯ ಗೃಹ ಇಲಾಖೆಯು ಕಾನ್‌ಸ್ಟೆಬಲ್‌ಗೆ ಪುರುಷನಾಗಿ ಬದಲಾಗಲು ಅನುಮತಿ ನೀಡುವಂತೆ ಪೊಲೀಸ್‌ ಇಲಾಖೆಗೆ ನಿರ್ದೇಶನ ಕೊಡಲಾಗಿದೆ. ಆಕೆಯ ಇಚ್ಛೆಯಂತೆ ಲಿಂಗ ಬದಲಿಸಿಕೊಂಡು ಕಾರ್ಯ ನಿರ್ವಹಿಸಲು ಅನುಮತಿ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT