ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರ್‌ ಜಹಾನ್ ತಳಿಯ ಒಂದು ಮಾವಿನ ಹಣ್ಣಿನ ತೂಕ ಬರೋಬರಿ 4 ಕೆ.ಜಿ; ₹2,000 ಬೆಲೆ!

ಅಕ್ಷರ ಗಾತ್ರ

ಇಂದೋರ್: ಮಧ್ಯಪ್ರದೇಶದಲ್ಲಿ ಬೆಳೆಯುವ ನೂರ್‌ ಜಹಾನ್ ತಳಿಯ ಮಾವಿನ ಹಣ್ಣಿನ ಗರಿಷ್ಠ ತೂಕ ಬರೋಬ್ಬರಿ 4 ಕೆ.ಜಿ ಇರಲಿದ್ದು, ಪ್ರತಿ ಹಣ್ಣು ₹1,000 ದಿಂದ ₹2,000ಕ್ಕೆ ಮಾರಾಟವಾಗುತ್ತಿದೆ.

ಇಂದೋರ್‌ನಿಂದ 250 ಕಿಮೀ ದೂರದಲ್ಲಿರುವ ಬುಡಕಟ್ಟು ಪ್ರಾಬಲ್ಯದ ಅಲಿರಾಜಪುರ ಜಿಲ್ಲೆಯ ಕತ್ತಿವಾಡ ಪ್ರದೇಶದಲ್ಲಿ ನೂರ್‌ ಜಹಾನ್ ತಳಿಯ ಮಾವಿನ ಮರಗಳು ಕಂಡುಬರುತ್ತವೆ.

‘ಈ ವರ್ಷ ಮೂರು ಮರಗಳಲ್ಲಿ ಕನಿಷ್ಠ 250 ಮಾವಿನ ಹಣ್ಣುಗಳು ಬೆಳೆದಿವೆ. ಈ ಹಣ್ಣುಗಳು ಜೂನ್ 15ರೊಳಗೆ ಮಾರಾಟಕ್ಕೆ ಲಭ್ಯವಾಗಲಿವೆ. ಪ್ರತಿ ಮಾವಿನ ಹಣ್ಣು ಗರಿಷ್ಠ ತೂಕ 4 ಕೆ.ಜಿ ತೂಕ ಬರುತ್ತದೆ ಎಂದು ಅಂದಾಜಿಸಿದ್ದೇವೆ’ ಎಂದು ಮಾವು ಬೆಳೆಗಾರ ಶಿವರಾಜ್ ಸಿಂಗ್ ಜಾಧವ್ ‘ಪಿಟಿಐ’ಗೆ ತಿಳಿಸಿದ್ದಾರೆ.

ಕಳೆದ ವರ್ಷ ಪ್ರತಿ ಹಣ್ಣು ಸರಾಸರಿ 3.80 ಕೆ.ಜಿ ತೂಕ ಬಂದಿತ್ತು. ಆದರೆ, ಈ ಬಾರಿ ಹವಾಮಾನ ವೈಪರೀತ್ಯದಿಂದ ಮರಗಳಲ್ಲಿ ಹೂವುಗಳು ಉದುರಿ ಹೋಗಿದ್ದು, ಫಸಲು ಕಡಿಮೆಯಾಗಿದೆ ಎಂದು ಶಿವರಾಜ್ ಹೇಳಿದ್ದಾರೆ.

ಈ ಬಾರಿ ಪ್ರತಿ ಕೆ.ಜಿ ಮಾವಿನ ಹಣ್ಣಿಗೆ ₹ 1,000 ರಿಂದ ₹ 2,000 ರವರೆಗೆ ಬೆಲೆ ನಿಗದಿ ಮಾಡಿದ್ದೇವೆ. ಕಳೆದ ಬಾರಿ ಪ್ರತಿ ಕೆ.ಜಿಗೆ ₹ 500 ರಿಂದ ₹ 1,500 ರಂತೆ ಮಾರಾಟ ಮಾಡಲಾಗಿತ್ತು ಎಂದು ಶಿವರಾಜ್ ಮಾಹಿತಿ ನೀಡಿದ್ದಾರೆ.

ಅನೇಕರು ಈಗಾಗಲೇ ಮುಂಗಡವಾಗಿ ಹಣ್ಣುಗಳನ್ನು ಕಾಯ್ದಿರಿಸಲು ಕರೆ ಮಾಡುತ್ತಿದ್ದಾರೆ. ಆದರೆ, ಹೆಚ್ಚು ಮಳೆಯಾಗುವ ಸಾಧ್ಯತೆ ಇರುವುದರಿಂದ ಹೆಚ್ಚಿನ ಪ್ರಮಾಣದ ಬುಕ್ಕಿಂಗ್ ತೆಗೆದುಕೊಳ್ಳಲಾಗುತ್ತಿಲ್ಲ ಎಂದಿದ್ದಾರೆ.

ಅಫ್ಘಾನಿಸ್ತಾನ ಮೂಲದ ನೂರ್‌ ಜಹಾನ್ ತಳಿಯ ಮಾವಿನ ಹಣ್ಣು 1 ಅಡಿ ಉದ್ದ, 4 ಕೆ.ಜಿ ತೂಕ ಇರಲಿದೆ. ಜನವರಿ ಅಥವಾ ಫೆಬ್ರುವರಿ ವೇಳೆಗೆ ಈ ಮರಗಳು ಹೂವು (ಫಸಲು) ಬಿಡಲು ಪ್ರಾರಂಭಿಸುತ್ತವೆ. ಜೂನ್ 15ರೊಳಗೆ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಡುತ್ತದೆ. ಆದರೆ ಈ ಬಾರಿ ಹವಾಮಾನ ವೈಪರಿತ್ಯದಿಂದಾಗಿ ಫಸಲಿನ ಪ್ರಮಾಣ ಕಡಿಮೆಯಾಗಿದೆ ಎಂದು ತೋಟಗಾರಿಕಾ ತಜ್ಞರು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT